Advertisement
ಪುಣೆಯಿಂದ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಕೊವಿಶೀಲ್ಡ್‌ನ ಐದು ಲಕ್ಷ ಡೋಸ್ ಬಂದಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಮುಂದಿನ ನಾಲ್ಕು ದಿನ ನಿರಾತಂಕವಾಗಿ ಲಸಿಕೆ ವಿತರಿಸಬಹುದಾಗಿದೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಈವರೆಗೆ 1.05 ಕೋಟಿ ಡೋಸ್ ಲಸಿಕೆ ಬಂದಿದ್ದು, ಈ ಪೈಕಿ 99 ಲಕ್ಷ ಡೋಸ್ ವಿತರಿಸಲಾಗಿದೆ.
Related Articles
Advertisement
40 ಲಕ್ಷ ಮಂದಿಗೆ ಬೇಕು 2ನೇ ಡೋಸ್ :
ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ ಮಾರ್ಚ್‌ನಿಂದ ಎಪ್ರಿಲ್ 15ರ ವರೆಗೆ ಲಸಿಕೆ ಪಡೆದವರು ಈ ತಿಂಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ. 25 ಲಕ್ಷ ಹಿರಿಯರು, 45-59 ವಯೋಮಾನದ 15 ಲಕ್ಷ ಮಂದಿಗೆ ಪ್ರಸಕ್ತ ತಿಂಗಳಲ್ಲಿ 2ನೇ ಡೋಸ್ ನೀಡಬೇಕಿದೆ.
2ನೇ ಡೋಸ್ ಲಸಿಕೆ ಪಡೆಯಿರಿ :
ಮೊದಲ ಡೋಸ್ ಲಸಿಕೆ ಪಡೆದು 6 ವಾರಗಳಾಗಿರುವ ಹಿರಿಯರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು 2ನೇ ಡೋಸ್ ಪಡೆಯಿರಿ. ಮೊದಲ ಡೋಸ್ ಪಡೆದಲ್ಲಿಯೇ 2ನೇ ಡೋಸ್ ಪಡೆಯಬೇಕೆಂಬ ನಿಯಮವಿಲ್ಲ. ದಾಸ್ತಾನು ಇರುವ ಕಡೆ ತೆರಳಿ ಲಸಿಕೆ ಪಡೆಯಿರಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸೀರಂಗೆ ಪೂರ್ತಿ ಮೊತ್ತ ಪಾವತಿ : ಕೊವಿಶೀಲ್ಡ್‌ಗಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಪೂರ್ಣ ಮೊತ್ತ 1,732.50 ಕೋಟಿ ರೂ. ನೀಡಲಾಗಿದೆ. ಇದರಿಂದ ಮುಂದಿನ 3 ತಿಂಗಳಲ್ಲಿ ಲಸಿಕೆ ಪೂರೈಕೆ ಆಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
2-3 ತಿಂಗಳು ಲಸಿಕೆ ಕೊರತೆ :
ದೇಶದಲ್ಲಿ 2-3 ತಿಂಗಳು ಲಸಿಕೆ ಕೊರತೆ ಉಂಟಾಗಲಿದೆ. ರಾತ್ರಿ ಬೆಳಗಾಗುವುದರೊಳಗೆ ಲಸಿಕೆ ಉತ್ಪಾದನೆ ಹೆಚ್ಚಿಸಲು ಸಾಧ್ಯವಿಲ್ಲ. ಎಲ್ಲರಿಗೂ ಲಸಿಕೆ ನೀಡಬೇಕಾಗಿರುವುದರಿಂದ ಉತ್ಪಾದನೆಗೆ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಅದು ಸುಲಭದ ಕೆಲಸವಲ್ಲ ಎಂದು ಎಂದು ಸೀರಂ ಸಂಸ್ಥೆಯ ಸಿಇಒ ಆದರ್ ಪೂನಾವಾಲಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.