ರಾಮನಗರ: ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ನೀಡಿದರೆ 2021ರ ಆರಂಭದಲ್ಲೇ ಕೋವಿಡ್ 19 ಸೋಂಕಿಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇರುವುರಿಂದ ಮೊದಲ ಹಂತದಲ್ಲಿ ಕೋವಿಡ್ ಗೆ ನೀಡಬೇಕಿದ್ದು, ಅರ್ಹರ ನಿಖರ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಧಿಕಾರಿ ಎಂ.ಎಸ್.ಅರ್ಚನಾ ಆರೋಗ್ಯ ಇಲಾಖೆಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಸರ್ಕಾರಿ ಕಚೇರಿ ಸಂಕಿರ್ಣದಲ್ಲಿ ನಡೆದ ಕೋವಿಡ್ 19 ಲಸಿಕೆ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದರು. ಮೊದಲ ಹಂತದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ವ್ಯಾಪ್ತಿಗೆ ಬರುವ ವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ, ಖಾಸಗಿ ಆಸ್ಪತ್ರೆ / ಕ್ಲಿನಿಕ್ ವೈದ್ಯರು, ಆರೋಗ್ಯ ಸಿಬ್ಬಂದಿ, ಮೆಡಿಕಲ್ ಕಾಲೇಜು ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ವೈದ್ಯರು, ಆರೋಗ್ಯ ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಬೇಕಾಗಿದೆ. ಹೀಗಾಗಿ ಅವರ ವಿವರವನ್ನು ಸರ್ಕಾರ ತಿಳಿಸಿರುವನಮೂನೆಯಲ್ಲಿ ಸಿದ್ಧಪಡಿಸಿ ಸಲ್ಲಿಸಿ ಎಂದು ಸಲಹೆ ನೀಡಿದರು.
ಸರ್ಕಾರದ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ ಮಾಹಿತಿ ಇಲಾಖೆಯಲ್ಲೇ ಲಭ್ಯವಿದೆ. ತಾಲೂಕು ವೈದ್ಯಾಧಿಕಾರಿಗಳು ತಮ್ಮ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳ ವೈದ್ಯರ ಸಭೆ ನಡೆಸಿ ಮಾಹಿತಿಯನ್ನು ಶೀಘ್ರ ಪಡೆದುಕೊಳ್ಳಲು ಕ್ರಮ ವಹಿಸಿ ಎಂದರು.
ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿ: ಜಿಪಂ ಸಿಇಒ ಇಕ್ರಂ ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ ಜನಸಂಖ್ಯೆಯ ಶೇ.3 ಜನರಿಗೆ ಲಸಿಕೆ ನೀಡಲು ಸರ್ಕಾರ ಹಾಗೊಮ್ಮೆ ಸೂಚಿಸಿದರೆ ಜಿಲ್ಲೆಯಲ್ಲಿ ಅಂದಾಜು 36000 ಜನರಿಗೆ ಲಸಿಕೆ ನೀಡಬೇಕಾಗಿದೆ. ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕು. ಲಸಿಕೆ ಸಂಗ್ರಹಿಸಲು ಬೇಕಿರುವ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಈಗಲೇ ಆರಂಭವಾಗಲಿ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಗೆ ಬೇಕು: ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒ ಡಾ.ನಾಗರಾಜು ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಸೋಂಕು ಲಸಿಕೆ ಗುಣಮಟ್ಟ ಪರೀಕ್ಷಿಸಿ ಒಪ್ಪಿಗೆ ನೀಡಬೇಕು. ಬಹುಶಃ 2021ರ ಮೊದಲ ತ್ತೈ ಮಾಸಿಕದಲ್ಲಿ ಜನಸೇವೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಲಸಿಕೆಯನ್ನು ಎಲ್ಲಾ ದೇಶಗಳಿಗೆ ಸಮಾನವಾಗಿ ನೀಡಬೇಕಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಶೇ.3 ಜನಸಂಖ್ಯೆಗೆ ಲಸಿಕೆ ನೀಡಲು ಯೋಜಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ .ನಿರಂಜನ್, ಸರ್ಕಾರೇತರ ಸಂಸ್ಥೆಗಳಾದ ರೋಟರಿ, ಲಯನ್ಸ್, ರೆಡ್ ಕ್ರಾಸ್ ಇತರ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಪದ್ಮಾ, ಡಿಟಿಒ ಡಾ.ಕುಮಾರ್, ಡಿಎಂಒ ಡಾ.ಪ್ರಸನ್ನಕುಮಾರ್, ಡಿಎಲ್ಒ ಡಾ.ಮಂಜುನಾಥ್, ಜಿಲ್ಲಾ ಶಸ್ತಚಿಕಿತ್ಸಕ ಡಾ.ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.