Advertisement

ಬೆಳಗಾವಿಯಿಂದಲೇ ಉತ್ತರಕರ್ನಾಟಕಕ್ಕೆ ಲಸಿಕೆ ಪೂರೈಕೆ

04:19 PM Jan 12, 2021 | Team Udayavani |

ಬೆಳಗಾವಿ: ಒಂದು ವರ್ಷದಿಂದ ಮಹಾಮಾರಿಯ ಹೊಡೆತದಿಂದ ನಲುಗಿ ಬದುಕಿನ ಸಂತಸ ಕಳೆದುಕೊಂಡಿದ್ದ ದೇಶದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಯಾವುದೇ ಕ್ಷಣದಲ್ಲಿಯೂ ಕೋವಿಡ್ ಲಸಿಕೆ ಬೆಳಗಾವಿಗೆ ಬಂದಿಳಿಯಲಿದ್ದು, ಸಿದ್ಧತೆ ಪೂರ್ಣಗೊಂಡಿದೆ. ಅಲ್ಲದೇ ಇಲ್ಲಿಂದಲೇ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೆ ಲಸಿಕೆ ರವಾನೆ ಆಗಲಿದೆ. ನಗರದ ವ್ಯಾಕ್ಸಿನ್‌ ಡಿಪೋದಲ್ಲಿರುವ ಜಿಲ್ಲಾ ಆರೋಗ್ಯ ಕೇಂದ್ರದ ಕಚೇರಿಯಲ್ಲಿರುವ ಉಗ್ರಾಣದಲ್ಲಿ ಲಸಿಕೆ ಸಂಗ್ರಹವಾಗಲಿದೆ. ಪುಣೆಯಿಂದ ನೇರವಾಗಿ ಬೆಳಗಾವಿ ಉಗ್ರಾಣಕ್ಕೆ ಸಾಗಾಟ ಮಾಡಿ ಅಲ್ಲಿಂದ ಇನ್ನುಳಿದ ಎಂಟು ಜಿಲ್ಲೆಗಳಿಗೆ ರವಾನೆ ಮಾಡಲಾಗುವುದು.

Advertisement

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲಸಿಕೆ ಹಾಕಲು ಜ.16 ನಿಗದಿ ಮಾಡುತ್ತಿದ್ದಂತೆ ದೇಶದ ಜನರಲ್ಲಿ ಆಶಾಕಿರಣ ಮೂಡಿದ್ದು, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಂತಸ ಇಮ್ಮಡಿಯಾಗಿದೆ. ಒಟ್ಟು ನಾಲ್ಕು ಲಸಿಕೆ ಬೆಳಗಾವಿ ತಲುಪಲಿದೆ. ಉಗ್ರಾಣದಲ್ಲಿ ಸಂಗ್ರಹಿಸಿ ವಿಜಯಪುರ,ಬಾಗಲಕೋಟೆ, ಧಾರವಾಡ, ಕೊಪ್ಪಳ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಲಸಿಕೆ ರವಾನೆ ಆಗಲಿದೆ. ಬಳಿಕ ಬೆಳಗಾವಿ ಜಿಲ್ಲೆಯ ಆಯಾ ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗುವುದು. ನಂತರ ಲಸಿಕೆ ಹಾಕುವ ಕೇಂದ್ರಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುವುದು.

30 ಸಾವಿರ ಮಂದಿ ನೋಂದಣಿ: ಈಗಾಗಲೇ ಕೋವಿಡ್ ಆ್ಯಪ್‌ನಲ್ಲಿ 30 ಸಾವಿರ ಆರೋಗ್ಯ ಸೇವೆ ಮಾಡುವವರು ಮೊದಲ ಹಂತದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 16 ಸಾವಿರ ಖಾಸಗಿ ವಲಯ ಹಾಗೂ 14 ಸಾವಿರ ಸರ್ಕಾರಿ ವಲಯದವರ ಹೆಸರು ನೋಂದಣಿ ಆಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಅಗತ್ಯ ಪೂರ್ವಭಾವಿ ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಸಂಗ್ರಹಕ್ಕೆ ಶೀತಲೀಕರಣ ಘಟಕಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲಿಂದ ಜಿಲ್ಲೆಯ 300-320 ಲಸಿಕೆ ವಿತರಣೆ ಕೇಂದ್ರಗಳಿಗೆ ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಎರಡು ಬಾರಿ ಲಸಿಕೆ ವಿತರಣೆ ಅಣಕು ತಾಲೀಮು ನಡೆಸಲಾಗಿದೆ. ಜ.2ರಂದು ಕಿತ್ತೂರು, ವಂಟಮೂರಿ, ಹುಕ್ಕೇರಿ ಮತ್ತು. ಜ.8ರಂದು ಗೋಕಾಕ, ನಿಪ್ಪಾಣಿ, ಯಕ್ಸಂಬಾ, ಅಥಣಿ ಸೇರಿ 7 ಕಡೆಗೆ ಸೇರಿ 10 ಕಡೆಗೆ ಡ್ರೈರನ್‌ ನಡೆಸಲಾಗಿದೆ. 520 ಮಂದಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ಭಾಗದಲ್ಲಿಯೂ ಲಸಿಕೆ ಹಾಕುವ ಕೇಂದ್ರಗಳಿವೆ.

ಇದನ್ನೂ ಓದಿ: ಉತ್ತರಪ್ರದೇಶ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ

ಕೇಂದ್ರದಲ್ಲಿ 5 ಜನ ಕರ್ತವ್ಯ: ಒಂದು ಕೇಂದ್ರದಲ್ಲಿ ಒಬ್ಬರು ವ್ಯಾಕ್ಸಿನೇಟರ್‌ ಸೇರಿ ಐದು ಜನ ಸಿಬ್ಬಂದಿ ಕರ್ತವ್ಯನಿರ್ವಹಿಸಲಿದ್ದಾರೆ. ಪ್ರತಿ ಕೇಂದ್ರಕ್ಕೆ ಸೆಕ್ಯೂರಿಟಿ ಗಾರ್ಡ್‌  ಅಥವಾ ಪೊಲೀಸ್‌ ಸಿಬ್ಬಂದಿ ಅಗತ್ಯವಿದೆ. ಪ್ರತಿ ಕೇಂದ್ರದಲ್ಲಿ ಮೂರು ಕೊಠಡಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮೀಪದ ಕ್ಲಿನಿಕ್‌, ನಸಿಂìಗ್‌ ಹೋಂ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿನ ಸಿಬ್ಬಂದಿಗೆ ಲಸಿಕೆ ವಿತರಿಸಲು ಅಲ್ಲಿಯೇ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

Advertisement

ದಿನಕ್ಕೆ 100 ಮಂದಿಗೆ ಲಸಿಕೆ: ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುವುದು. ಸರ್ಕಾರಿ ಆರೋಗ್ಯ ಕಾರ್ಯಕರ್ತರಿಗೆ ಎರಡು ದಿನಗಳಲ್ಲಿ ಲಸಿಕೆ ನೀಡುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಕೆಎಲ್‌ಇ ಅಂತಹ ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಿಬ್ಬಂದಿ ಇರುವುದರಿಂದ ಐದು ದಿನಗಳವರೆಗೆ ಲಸಿಕೆ ಹಾಕುವ ಕಾರ್ಯ ಸಾಗಲಿದೆ. ವ್ಯಾಕ್ಸಿನ್‌ ಡಿಪೋದಲ್ಲಿರುವ ಕೇಂದ್ರೀಕೃತ ಕೋಲ್ಡ್‌ ಸ್ಟೋರೇಜ್‌ನಿಂದ ಐಸ್‌ಲೈನ್‌x ರೆμÅಜರೇಟರ್‌ಗಳಲ್ಲಿ(ಐಎಲ್‌ ಆರ್‌) ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ. 180 ಕಡೆಗೆ ಡೀಪ್‌ ಫ್ರೀಜರ್‌ ಗಳು ಲಭ್ಯ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಶೀತಲೀಕರಣ ಘಟಕದಿಂದ ವಿತರಣೆ ಕೇಂದ್ರಗಳಿಗೆ ಕೋಲ್ಡ್‌ಬಾಕ್ಸ್‌ ಹಾಗೂ ಐಸ್‌ ಕ್ಯಾರಿಯರ್‌ಗಳಲ್ಲಿ ಲಸಿಕೆಗಳನ್ನು ತಲುಪಿಸಲಾಗುತ್ತದೆ.

ಲಸಿಕೆ ಸಂಗ್ರಹ ಸಾಮರ್ಥ್ಯ ಹೆಚ್ಚು

ಈಗಾಗಲೇ ವ್ಯಾಕ್ಸಿನ್‌ ಡಿಪೋದಲ್ಲಿರುವ ಜಿಲ್ಲಾ ಆರೋಗ್ಯ ಕಚೇರಿಯ ಕೊಠಡಿಯಲ್ಲಿ ಲಸಿಕೆ ಉಗ್ರಾಣ ಮಾಡಿಕೊಳ್ಳಲಾಗಿದೆ. ಇಲ್ಲಿ ಆರೂವರೆ ಲಕ್ಷ ಲೀಟರ್‌ ಸಂಗ್ರಹಿಸಿಡುವ ಸಾಮರ್ಥ್ಯ ಇದ್ದು, 13.50 ಲಕ್ಷ ಲಸಿಕೆಗಳನ್ನು ಸಂಗ್ರಹಿಸಿ ಇಡಬಹುದಾಗಿದೆ. ಒಂದು ವಾಕ್‌ ಇನ್‌ ಕೂಲರ್‌ ಇದೆ. ಜತೆಗೆ ಎರಡು ವರ್ಷಗಳ ಹಿಂದೆಯೇ ಜಿಲ್ಲಾ ಮಟ್ಟದ ಲಸಿಕೆ ಸಂಗ್ರಹ ಕಟ್ಟಡ  ಸಿದ್ಧಗೊಂಡಿದೆ. ಅಗತ್ಯ ಬಿದ್ದರೆ ಇಲ್ಲಿಯೂ ಸಂಗ್ರಹ ಮಾಡಲಾಗುವುದು. ವಾಕ್‌ ಇನ್‌ ಸಿಜರ್‌, ವಾಕ್‌ ಇನ್‌ ಕೂಲರ್‌ ಇದೆ. ಒಟ್ಟು 32 ಲಕ್ಷ ಡೋಸ್‌ಗಳನ್ನು ಸಂಗ್ರಹ ಮಾಡಿಕೊಳ್ಳುವ ಸಾಮರ್ಥ್ಯವಿದೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಲಸಿಕೆ ಯಾವುದೇ ಕ್ಷಣದಲ್ಲಿಯೂ ಬರಲಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಅಧಿ  ಕಾರಿಗಳು ವಿಮಾನ ನಿಲ್ದಾಣದ ಅಧಿ ಕಾರಿಗಳೊಂದಿಗೆ ಲಸಿಕೆ ಸರಬರಾಜು ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ವಿಮಾನ ಬಂದ ಮೇಲೆ ವಾಹನವನ್ನು ಒಳಗೆ ತೆಗೆದುಕೊಂಡು ಹೋಗಿ ಬಾಕ್ಸ್‌ಗಳನ್ನು ತುಂಬಿ ಉಗ್ರಾಣಕ್ಕೆ ಸಾಗಿಸಲಾಗುತ್ತದೆ. ಆದರೆ ಇನ್ನೂವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ರಾಜೇಶಕುಮಾರ ಮೌರ್ಯ, ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ

ಭೈರೋಬಾ ಕಾಂಬಳೆ

 

Advertisement

Udayavani is now on Telegram. Click here to join our channel and stay updated with the latest news.

Next