ದಾಖಲೆ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯಾದ್ಯಂತ ಲಸಿಕೆಗಾಗಿ ಬೇಡಿಕೆಯೂ ಹೆಚ್ಚುತ್ತಿದೆ. ಲಸಿಕೆ ಕೊರತೆ ನ‚ಡುವೆಯೂ ರಾಜ್ಯ ಸರಕಾರ 18 ವರ್ಷ ಪೂರೈಸಿರುವವರಿಗೂ ಲಸಿಕೆ ನೀಡುವುದಾಗಿ ಘೋಷಿಸಿದೆ. ಒಂದು ಕಡೆ 45 ವರ್ಷ ತುಂಬಿದವರಿಗೂ ಮೊದಲ ಡೋಸ್ ಸಿಗುತ್ತಿಲ್ಲ. ಅತ್ತ ಕೇಂದ್ರ ಸರಕಾರ, ಎರಡನೇ ಡೋಸ್ ನೀಡಲು ಕ್ರಮ ವಹಿಸಿ ಎಂದು ಹೇಳಿದೆ. ಈ ಎಲ್ಲ ಗೊಂದಲಗಳ ನಡುವೆ ಎಲ್ಲರಿಗೂ ಲಸಿಕೆ ಎಂದು ಘೋಷಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಇವೆಲ್ಲದಕ್ಕಿಂತ ಹೆಚ್ಚಾಗಿ ಲಸಿಕೆ ಕೊರತೆ ಏಕಾಗುತ್ತಿದೆ ಎಂಬ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಒಂದು ಕೇಂದ್ರ ಸರಕಾರ ದಿಂದ ಬರುತ್ತಿಲ್ಲವೇ? ಅಥವಾ ರಾಜ್ಯ ಸರಕಾರವೇ ಲಸಿಕೆ ತಯಾರಿಸುವ ಕಂಪನಿಗಳಿಗೆ ಸರಿಯಾದ ರೀತಿಯಲ್ಲಿ ಆರ್ಡರ್ ಕೊಟ್ಟಿಲ್ಲವೇ? ಈಗ ಎಲ್ಲರಿಗೂ ಲಸಿಕೆ ಕೊಡುತ್ತೇವೆ ಎಂದು ಹೇಳಿ ಲಸಿಕೆ ದಾಸ್ತಾನಿಲ್ಲದೇ ಆಸ್ಪತ್ರೆಗಳಿಗೆ ಬಂದ ಜನರನ್ನು ವಾಪಸ್ ಕಳುಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
ಕೊರೊನಾ ಹೆಚ್ಚಳದ ನಡುವೆ ಸರಕಾರ ಮಾಡಬೇಕಾಗಿರುವ ಬಹುಮುಖ್ಯ ಕೆಲಸ, ಜನರಲ್ಲಿ ಭಯ ಹೋಗಲಾಡಿಸುವುದು. ಈ ಕೊರೊನಾ ಹೆಚ್ಚಳವಾಗುತ್ತಿರುವ ವೇಳೆಯಲ್ಲಿ ಲಸಿಕೆ ಜನರ ಭಯವನ್ನು ಹೋಗಿಸುವ ರಾಮಬಾಣವಾಗಬಲ್ಲದು. ಹೀಗಾಗಿ, ಸರಕಾರ ಕೇಂದ್ರ ಸರಕಾರವನ್ನಾಗಲಿ ಅಥವಾ ಲಸಿಕೆ ತಯಾರಿಸುವ ಕಂಪನಿಗಳನ್ನು ಸಂಪರ್ಕಿಸಿ ಆದಷ್ಟು ಬೇಗ ಲಸಿಕೆಯನ್ನು ತರಿಸಿಕೊಳ್ಳಬೇಕು.
ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಇದರಲ್ಲಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲವೇ ಎಂಬುದು ಅದರ ಪ್ರಶ್ನೆ. ಜತೆಗೆ, ಎರಡನೇ ಡೋಸ್ ಕೊಡಲು ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಯನ್ನೂ ಹಾಕಿದೆ. ಈ ಬಗ್ಗೆ ಸರಕಾರವೇ ಉತ್ತರ ಕೊಡಬೇಕು. ಆದಷ್ಟು ಬೇಗ ಲಸಿಕೆ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.
ಈ ಎಲ್ಲಾ ಸಂಗತಿಗಳ ನಡುವೆ ಮಂಗಳವಾರ ಉಪ ಮುಖ್ಯಮಂತ್ರಿ ಡಾ|ಸಿ. ಎನ್. ಅಶ್ವತ್ಥ ನಾರಾಯಣ ಅವರು. ಲಸಿಕೆ ತರಿಸಿಕೊಳ್ಳುವ ಸಲುವಾಗಿ ಜಾಗತಿಕ ಟೆಂಡರ್ ಕರೆಯುವುದಾಗಿ ಹೇಳಿದ್ದಾರೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹ ನಿರ್ಧಾರ. ಆದರೆ ಈ ಪ್ರಕ್ರಿಯೆ ಒಂದಷ್ಟು ಬೇಗನೇ ಆರಂಭವಾಗಬೇಕಿತ್ತು. ಈಗ ಟೆಂಡರ್ ಕರೆದರೂ, ಎಲ್ಲ ಪ್ರಕ್ರಿಯೆ ಮುಗಿಯಲು ಸಾಕಷ್ಟು ದಿನ ಬೇಕಾಗುತ್ತದೆ. ಆದ್ದರಿಂದ ಅಧಿಕಾರಿ ವಲಯಕ್ಕೆ ಸಾಕಷ್ಟು ಬಿಸಿ ಮುಟ್ಟಿಸಿ, ಶೀಘ್ರವಾಗಿ ಪ್ರಕ್ರಿಯೆ ಮುಗಿಯುವಂತೆ ಮಾಡಬೇಕು.
ಈ ಮಧ್ಯೆ, ಬೆಂಗಳೂರಿನಲ್ಲಿ ಲಸಿಕೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ, ಇಲ್ಲಿನ ಯುವಕರು ಗ್ರಾಮಗಳಿಗೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರಿಗೆ ಲಸಿಕೆ ಸಿಗುತ್ತಿಲ್ಲ. ಬೆಂಗಳೂರಿನ ಯುವಕರೇ ಮೊದಲಿಗೆ ಟೈಂ ಸ್ಲಾಟ್‌ಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಥಾ ಸಲ್ಲದು. ದಯಮಾಡಿ, ಬೆಂಗಳೂರಿನಲ್ಲೇ ನಿಮಗೆ ಲಸಿಕೆ ಸಿಗುವವರೆಗೆ ಕಾಯಿರಿ. ಹಳ್ಳಿಗಳಿಗೆ ಹೋಗಿ ಅಲ್ಲಿನವರಲ್ಲಿ ಭಯ ತುಂಬಬೇಡಿ. ಮೊದಲೇ ಬೆಂಗಳೂರು ಎಂದರೆ ಹೆದರುತ್ತಿರುವ ಗ್ರಾಮೀಣರಿಗೆ ಈ ವರ್ತನೆಯಿಂದ ಮತ್ತಷ್ಟು ಆತಂಕವಾಗುವುದು ಬೇಡ.