ಉಡುಪಿ ಜಿಲ್ಲೆಯಲ್ಲಿ ತಿಂಗಳಿಂದ ಕೋವಿಡ್ ನಿರೋಧಕ ಲಸಿಕೆ ವಿತರಣೆ ನಡೆಯುತ್ತಿದೆ. ಆದರೆ ಆರಂಭದಲ್ಲಿ ಲಸಿಕೆ ಮಿಗತೆಯಾಗುತ್ತಿದ್ದರೆ, ಈಗ ಕೊರತೆಯಾಗುತ್ತಿದೆ.
ಮೇ 1ರ ವರೆಗೆ ಸುಮಾರು 2.4 ಲಕ್ಷ ಲಸಿಕೆಗಳನ್ನು ನೀಡಲಾಗಿದೆ. ಒಟ್ಟು 13 ಲಕ್ಷ ಜನಸಂಖ್ಯೆಯ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 4.13 ಲಕ್ಷ ಜನರು ಇದ್ದಾರೆ. ಜಿಲ್ಲೆಯ 93 ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದೊರಕುತ್ತಿದೆಯಾದರೂ ಮೇ 1ರಿಂದ ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ಸುಪರ್ದಿಯಲ್ಲಿ ಲಸಿಕೆ ಪೂರೈಕೆ ಇಲ್ಲ. ಸರಕಾರಿ ಆಸ್ಪತ್ರೆಗಳಿಗೂ ಬೇಡಿಕೆಯಷ್ಟು ಲಸಿಕೆ ಪೂರೈಕೆ ಆಗುತ್ತಿಲ್ಲ. ಅದರಲ್ಲೂ ಕೊವಿಶೀಲ್ಡ್ ಸ್ವಲ್ಪ ಮಟ್ಟಿಗೆ ಪೂರೈಕೆಯಾಗುತ್ತಿದ್ದರೂ ಕೊವ್ಯಾಕ್ಸಿನ್ ಪೂರೈಕೆ ಆಗುತ್ತಿಲ್ಲ. ಒಂದು ಬಾರಿ ಕೊವ್ಯಾಕ್ಸಿನ್ ತೆಗೆದುಕೊಂಡವರು ಇನ್ನೊಮ್ಮೆ ನಿಗದಿತ ಅವಧಿಯಲ್ಲಿ ಅದೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕಾದ ಕಾರಣ ಅಂಥವರು ಚಿಂತೆಗೀಡಾಗಿದ್ದಾರೆ. ಎಷ್ಟೋ ಕಡೆಯ ಲಸಿಕಾ ಕೇಂದ್ರಗಳಲ್ಲಿ ತಾವು ಬಂದದ್ದು ಆರೋಗ್ಯ ಸುಧಾರಿಸಿಕೊಳ್ಳಲು ಎಂಬುದು ಮರೆತು ಹೋಗಿ, ನೂಕುನುಗ್ಗುಲು ಉಂಟಾಗಿ ಜಟಾಪಟಿ ನಡೆದದ್ದೂ ಇದೆ. ಎರಡನೆಯ ಡೋಸ್ ತೆಗೆದುಕೊಳ್ಳಲು ಸ್ವಲ್ಪ ವಿಳಂಬವಾದರೂ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯತಜ್ಞರು ಹೇಳುವುದು ಎಷ್ಟೋ ಜನರಿಗೆ ಸಮಾಧಾನ ತಂದೀತು
. ಖಾಸಗಿ ಆಸ್ಪತ್ರೆಗಳು ಇನ್ನು ಮುಂದೆ ನೇರವಾಗಿ ಉತ್ಪಾದನ ಸಂಸ್ಥೆಯೊಂದಿಗೆ ವ್ಯವಹಾರ ನಡೆಸಿ ವ್ಯಾಕ್ಸಿನ್ ತರಿಸಿಕೊಳ್ಳಬೇಕು. ಇದುವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ಪಾವತಿಸಿ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕಿತ್ತು. ಇದನ್ನು ಸರಕಾರ ಸಬ್ಸಿಡಿ ದರದಲ್ಲಿ ಕೊಡುತ್ತಿತ್ತು. ಇನ್ನು ಮುಂದೆ 300 ರೂ. ಆಗಬಹುದು. ಇಲ್ಲಿ ಹಣದ ಪ್ರಶ್ನೆ ಅಮುಖ್ಯ. ಅನುಕೂಲವಂತರು ಹಣ ಪಾವತಿಸಿ ಸ್ವೀಕರಿಸಲು ಸಿದ್ಧರಿದ್ದಾರೆ. ಆದರೆ ಹಣ ಕೊಟ್ಟರೂ ವ್ಯಾಕ್ಸಿನ್ ಸಿಗಬೇಕಲ್ಲ? ಒಂದು ಅಂದಾಜಿನ ಪ್ರಕಾರ ಇನ್ನೆರಡು ವಾರಗಳ ಕಾಲ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಸರಬರಾಜು ಕಷ್ಟಸಾಧ್ಯ.
45+ ವರ್ಷದವರ ಲಸಿಕೆಗೆ ಇಷ್ಟು ಕಷ್ಟವಾದರೆ, ಇನ್ನು 18+ನವರಿಗೆ ವ್ಯಾಕ್ಸಿನ್ ಪೂರೈಕೆ ಮಾಡುವುದು ಸರಕಾರ ಘೋಷಿಸಿದಷ್ಟು ಸುಲಭದ ಕೆಲಸವಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೇ 1ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಇನ್ನೊಂದು ವಾರದೊಳಗೆ ಲಸಿಕೆ ಪೂರೈಕೆಗೆ ಕ್ರಮ ವಹಿಸುತ್ತೇವೆಂದು ಹೇಳಿದ್ದಾರೆ. ಇದೂ ಕೂಡ ಮೊದಲ ಡೋಸ್ ತೆಗೆದುಕೊಂಡವರಿಗೆ ಎರಡನೆಯ ಡೋಸ್‌ಗೆ ಆದ್ಯತೆಯಾಗಿರುತ್ತದೆ. ಅನಂತರ 18+ನವರಿಗೆ ಹೆಚ್ಚುವರಿ ಲಸಿಕೆ ಪೂರೈಕೆಯಾಗಬೇಕಾಗಿದೆ. ಖಾಸಗಿ ಆಸ್ಪತ್ರೆಯವರಿಗೆ ಲಸಿಕೆ ಪೂರೈಕೆ ಸಹಿತ ಒಟ್ಟಾರೆ ಲಸಿಕೆ ಪೂರೈಕೆಗೆ ಸರಕಾರ ಕೂಡಲೇ ಮಾರ್ಗದರ್ಶಿ ಸೂಚಿಯನ್ನು ಬಿಡುಗಡೆ ಮಾಡಿ ಅದಕ್ಕೆ ಬೇಕಾದ ರಹದಾರಿಗೆ ಅನುವು ಮಾಡಿಕೊಡಬೇಕು.
ಆರಂಭದಲ್ಲಿ ಲಸಿಕೆ ಕುರಿತು ಸರಕಾರಕ್ಕೆ ಜನಜಾಗೃತಿ ರೂಪಿಸಬೇಕಾದ ಅಗತ್ಯ ಕಂಡುಬಂದರೆ, ಈಗ ಲಸಿಕೆ ಪೂರೈಕೆಯನ್ನು ಸುಧಾರಿಸುವುದು ಸವಾಲಾಗಿದೆ. “ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಎಂಬ ಗಾದೆ ಮಾತು ನಮ್ಮ ಕರಾವಳಿ ಭಾಗಕ್ಕಂತೂ ಹೇಳಿಸಿ ಮಾಡಿಸಿದಂತೆ ಕಾಣುವುದು ಬುದ್ಧಿವಂತರ ನಾಡು ಎಂಬ ಹೆಸರಿಗೆ ತಕ್ಕುದಲ್ಲ. ಭೂತ ಕಾಲ ಆಗಿ ಹೋಗಿದೆ, ವರ್ತಮಾನ ಮತ್ತು ಭವಿಷ್ಯ ಕಾಲ ನಮ್ಮ ಕೈಯಲ್ಲಿದೆ, ಮುಂದೆ ಹೀಗಾಗುವುದು ಬೇಡ. “ಬುದ್ಧಿವಂತರ ಪಟ್ಟ’ ಇಟ್ಟುಕೊಳ್ಳೋಣ.
-ಸಂ.