ತೀರ್ಥಹಳ್ಳಿ: ಕೊಪ್ಪ-ತೀರ್ಥಹಳ್ಳಿ ತಾಲೂಕಿನ ಗಡಿ ಭಾಗವಾದ ಕಮ್ಮರಡಿಯಲ್ಲಿ ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಗ್ರಾಮಸ್ಥರು ಗಲಾಟೆಗಿಳಿದ ಘಟನೆ ನಡೆದಿದೆ.
ಕಮ್ಮರಡಿ ಸರ್ಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳು ಜನರಿಗೆ ಕೊಟ್ಟ ಮಾಹಿತಿಯ ಗೊಂದಲದಿಂದ ಈ ಘಟನೆ ನಡೆದಿದೆ.
ಆರೋಗ್ಯಾಧಿಕಾರಿಗಳು ಬೇರೆ ಬೇರೆ ದಿನಗಳಲ್ಲಿ ಪ್ರಥಮ ಹಂತ ಹಾಗೂ ದ್ವಿತೀಯ ಹಂತದ ಲಸಿಕೆಯನ್ನು ಹಾಕಿಸಿಕೊಂಡವರಿಗೆ ಇಬ್ಬರಿಗೂ ಬುಧವಾರ ಇಂದೇ ಒಂದೇ ದಿನ ಬರಲು ತಿಳಿಸಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಆ ಭಾಗದ ಅನೇಕ ಗ್ರಾಮಸ್ಥರು ಕೋವಿಡ್ ಲಸಿಕೆಗಾಗಿ ಬೆಳಿಗ್ಗೆ ಎಂಟು ಗಂಟೆಯಿಂದ ಕಾಯುತ್ತಿದ್ದರು ಆದರೆ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹನ್ನೊಂದು ಗಂಟೆಯಾದರೂ ಬಂದಿರಲಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗಿದೆ.
ನಂತರ ಆರೋಗ್ಯಾಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಬಂದರಾದರೂ ಜನರು ತಾ ಮುಂದು ನಾ ಮುಂದು ಎಂದು ಲಸಿಕೆ ಪಡೆಯಲು ಮುಂದಾಗುತ್ತಿದ್ದಂತೆ ಅನೇಕರು ವಾಗ್ವಾದಕ್ಕಿಳಿದರು. ಗ್ರಾಮಸ್ಥರ ಮಾತಿನ ಚಕಮಕಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆಂದು ತಿಳಿದುಬಂದಿದೆ. ಕೊರೊನಾ ಎಂಬ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಕೋವಿಡ್ ಲಸಿಕೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.