Advertisement

ಶೀಘ್ರವೇ ಮಕ್ಕಳಿಗೆ ಕೋವಿಡ್‌ ಲಸಿಕೆ 

11:04 PM Aug 02, 2021 | Team Udayavani |

ಕೊರೊನಾ ನಿರೋಧಕ ಲಸಿಕೆ ಅಭಿಯಾನದ ಮುಂದಿನ ಹಂತವಾಗಿ 18 ವರ್ಷದೊಳಗಿನ ಮಕ್ಕಳಿಗೆ ಶೀಘ್ರದಲ್ಲಿಯೇ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕೇಂದ್ರ ಆರೋಗ್ಯ ಇಲಾಖೆಯ ಸದ್ಯದ ಲೆಕ್ಕಾಚಾರದ ಪ್ರಕಾರ ಆಗಸ್ಟ್‌  ತಿಂಗಳ ಮೊದಲಾರ್ಧದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.

Advertisement

ಕಳೆದ ವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ  ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯಾ ಅವರು ಆಗಸ್ಟ್‌ನಲ್ಲಿ ಮಕ್ಕಳಿಗೆ ಕೊರೊನಾ ನಿರೋಧಕ ಲಸಿಕೆ ನೀಡುವ ಪ್ರಕ್ರಿಯೆ ಯನ್ನು ಆರಂಭಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಮಕ್ಕಳ ಮೇಲಿನ ಲಸಿಕೆ ಪ್ರಯೋಗಗಳಿಗೆ ಸಂಬಂಧಿಸಿದಂತೆ ಝೈಡಸ್‌ ಕ್ಯಾಡಿಲಾ, ಡ್ರಗ್ಸ್‌ ಕಂಟ್ರೋಲರ್‌ ಜನರಲ್‌ ಆಫ್ ಇಂಡಿಯಾ (ಡಿಸಿಜಿಐ)ಗೆ ಹೆಚ್ಚುವರಿ ವರದಿ ಮತ್ತು ದತ್ತಾಂಶಗಳನ್ನು ಸಲ್ಲಿಸಿದೆ. ಡಿಸಿಜಿಐ ನ ವಿಷಯ ತಜ್ಞರ ಸಮಿತಿ ಇವುಗಳ ಅಧ್ಯಯನ ನಡೆಸಿ ಲಸಿಕೆಯ ತುರ್ತು ಬಳಕೆಗೆ ಸಂಬಂಧಿಸಿದಂತೆ  ಅನುಮತಿ  ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಡಿಸಿಜಿಐ ಒಪ್ಪಿಗೆ ನೀಡಿದ್ದೇ ಆದಲ್ಲಿ ಝೈಕೋವ್‌-ಡಿ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದ ನಾಲ್ಕನೇ ಲಸಿಕೆಯಾಗಲಿದೆ.

ದೇಶದ ಕೆಲವೊಂದು  ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳನ್ನು ತೆರೆಯಲಾಗಿದ್ದರೆ ಇನ್ನು ಹಲವು ರಾಜ್ಯಗಳಲ್ಲಿ ಶಾಲೆಗಳು ಶೀಘ್ರದಲ್ಲಿಯೇ ಆರಂಭಗೊಳ್ಳಲಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷೆ ಮತ್ತು ಲಸಿಕೆ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರದಿಂದ ಈ ಆಶಾದಾಯಕ ಸುದ್ದಿ ಹೊರಬಿದ್ದಿದೆ. ಮಕ್ಕಳಿಗೆ ನೀಡಲು ಶಿಫಾರಸು ಮಾಡಬಹುದಾದ ಲಸಿಕೆಗಳು, ಮಕ್ಕಳಿಗೆ ಕೊರೊನಾ ನಿರೋಧಕ ಲಸಿಕೆ ಸುರಕ್ಷಿತವೇ?, ಲಸಿಕೆ ನೀಡುವುದು ಎಷ್ಟು ಮುಖ್ಯ, ವಿಶ್ವದಲ್ಲಿ ಮಕ್ಕಳ ವ್ಯಾಕ್ಸಿನೇಶನ್‌ ಸ್ಥಿತಿಗತಿ ಹೇಗಿದೆ ಎನ್ನುವ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ.

ಆಗಸ್ಟ್‌ನಲ್ಲಿ  ಮಕ್ಕಳಿಗೆ ವ್ಯಾಕ್ಸಿನ್‌ ಸಿಗಲಿದೆಯೇ? :

Advertisement

ಝೈಡಸ್‌ ಕ್ಯಾಡಿಲಾ ಕಂಪೆನಿಯು ಆಗಸ್ಟ್‌ನಿಂದ ಪ್ರತೀ ತಿಂಗಳು 1 ಕೋಟಿ ಮತ್ತು ಡಿಸೆಂಬರ್‌ ವೇಳೆಗೆ 5 ಕೋಟಿ ಡೋಸ್‌ ಲಸಿಕೆಯನ್ನು ಉತ್ಪಾದಿಸುವ ನಿರೀಕ್ಷೆ ಇದೆ. ಫೈಜರ್‌ ಮತ್ತು ಮಾಡರ್ನಾ ಲಸಿಕೆಯನ್ನು ದೇಶಕ್ಕೆ ತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದ್ದು, ಕಾನೂನು ತೊಡಕುಗಳು ನಿವಾರಣೆಯಾಗಿ ಒಪ್ಪಿಗೆ ಲಭಿಸಿ ದೇಶಕ್ಕೆ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಾದಲ್ಲಿ ಈ ಎರಡೂ ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತದೆ.

ಭಾರತದಲ್ಲಿ ಮಕ್ಕಳ ವ್ಯಾಕ್ಸಿನ್‌ನ ಸ್ಥಿತಿಗತಿ  :

ದೇಶದಲ್ಲಿ ಪ್ರಸ್ತುತ ವಯಸ್ಕರಿಗೆ ಕೊವ್ಯಾಕ್ಸಿನ್‌, ಕೊವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆಗಳನ್ನು ನೀಡಲಾಗುತ್ತಿದೆ. ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗಿಸಲಾಗಿದ್ದು, ಕೊವಿಶೀಲ್ಡ್‌ ತಯಾರಿಸುವ ಸೀರಮ್‌ ಸಂಸ್ಥೆಯು ಮಕ್ಕಳಿಗಾಗಿ ಪ್ರತ್ಯೇಕ ಕೊವೊವ್ಯಾಕ್ಸ್‌ ತಯಾರಿಸಲು ಸಿದ್ಧತೆ ನಡೆಸುತ್ತಿದೆ. ಅಲ್ಲದೇ ಝೈಡಸ್‌ ಕ್ಯಾಡಿಲಾ ಸಂಸ್ಥೆ ತಯಾರಿಸುವ ಝೈಕೋವ್‌- ಡಿ ಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಅನುಮೋದನೆಗೆ ಕಾಯುತ್ತಿದೆ. ಇದನ್ನು ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ನೀಡಬಹುದು ಎನ್ನಲಾಗಿದೆ.

ಝೈಕೋವ್‌- ಡಿ :ಝೈಡಸ್‌ ಕ್ಯಾಡಿಲಾದ ಡಿಎನ್‌ಎ ಆಧಾರಿತ ಲಸಿಕೆಯಾದ ಝೈಕೋವ್‌-ಡಿ ಯ ಕ್ಲಿನಿಕಲ್‌ ಪ್ರಯೋಗಗಳು 12- 18 ವರ್ಷದೊಳಗಿನ ಮಕ್ಕಳ ಮೇಲೆ ಪೂರ್ಣಗೊಂಡಿವೆ. ಕಂಪೆನಿಯು ಈ ಕುರಿತ ಮಾಹಿತಿಯನ್ನು ಡಿಸಿಜಿಐಗೆ ನೀಡಿದ್ದು, ಮಕ್ಕಳ ಲಸಿಕೆ ತಯಾರಿಯಲ್ಲಿ ಮುಂಚೂಣಿಯಲ್ಲಿದೆ. ಕಂಪೆನಿಯು 5 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಸಿದ್ಧತೆ ನಡೆಸುತ್ತಿದೆ.

ಕೊವ್ಯಾಕ್ಸಿನ್‌ :ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಲಸಿಕೆಯನ್ನು ದೇಶದ ವಿವಿಧ ಭಾಗಗಳಲ್ಲಿ 2ರಿಂದ 6, 6ರಿಂದ 12, 12ರಿಂದ 18 ವರ್ಷದ ಮಕ್ಕಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರಯೋಗಿಸಲಾಗಿದ್ದು, ಸೆಪ್ಟಂಬರ್‌ ವೇಳೆಗೆ ನಿಖರ ಫ‌ಲಿತಾಂಶ ದೊರೆಯುವ ಸಾಧ್ಯತೆ ಇದೆ.

ಮಾಡರ್ನಾ : ಮಾಡರ್ನಾದ ಎಂಆರ್‌ಎನ್‌ಎ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಇದೂ ಭಾರತದಲ್ಲಿ ಈಗ ಲಭ್ಯವಿಲ್ಲ. ಭಾರತದ ಅನುಮೋದನೆ ಪಡೆದ ಅನಂತರ ಈ ಲಸಿಕೆಯನ್ನು ಮಕ್ಕಳಿಗೆ ನೀಡಬಹುದು. ಫೈಜರ್‌ ಮತ್ತು ಮಾಡರ್ನಾ ಈ ಎರಡೂ ಲಸಿಕೆಗಳು 5-11 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ. ಇದರ ಫ‌ಲಿತಾಂಶ ಸೆಪ್ಟಂಬರ್‌ ವೇಳೆಗೆ ನಿರೀಕ್ಷಿಸಲಾಗಿದೆ.

ಮಾಡರ್ನಾದ ಎಂಆರ್‌ಎನ್‌ಎ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಇದೂ ಭಾರತದಲ್ಲಿ ಈಗ ಲಭ್ಯವಿಲ್ಲ. ಭಾರತದ ಅನುಮೋದನೆ ಪಡೆದ ಅನಂತರ ಈ ಲಸಿಕೆಯನ್ನು ಮಕ್ಕಳಿಗೆ ನೀಡಬಹುದು. ಫೈಜರ್‌ ಮತ್ತು ಮಾಡರ್ನಾ ಈ ಎರಡೂ ಲಸಿಕೆಗಳು 5-11 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ. ಇದರ ಫ‌ಲಿತಾಂಶ ಸೆಪ್ಟಂಬರ್‌ ವೇಳೆಗೆ ನಿರೀಕ್ಷಿಸಲಾಗಿದೆ.

ಫೈಜರ್‌ : ಅಮೆರಿಕ ಸೇರಿದಂತೆ ಯುರೋಪ್‌ನ ಹಲವಾರು ದೇಶಗಳಲ್ಲಿ ಈ ಲಸಿಕೆಯನ್ನು 12 ವರ್ಷ ಮೇಲಿನ ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಭಾರತಕ್ಕೆ ಇದು ಬಂದಿಲ್ಲ. ಭಾರತದ ಅನುಮತಿ ದೊರೆತ ಬಳಿಕ ಮಕ್ಕಳಿಗೆ ಫೈಜರ್‌ ಲಸಿಕೆಯನ್ನು ನೀಡುವ ಸಾಧ್ಯತೆ ಇದೆ.

ಕೊವೊವ್ಯಾಕ್ಸ್‌  :ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾವು ಅಮೆರಿಕದ ನೋವವ್ಯಾಕ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳಿಗಾಗಿ ಕೊರೊನಾ ಲಸಿಕೆ ಕೊವೊವ್ಯಾಕ್ಸ್‌ ಅನ್ನು ತಯಾರಿಸುತ್ತಿದ್ದು, ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಿಗೆ ಅನುಮೋದನೆ ಪಡೆದಿದೆ. 12ರಿಂದ 17 ವರ್ಷದೊಳಗಿನ 920 ಮಕ್ಕಳಿಗೆ ಮತ್ತು 2ರಿಂದ 11 ವರ್ಷದೊಳಗಿನ ಮಕ್ಕಳಿಗೆ 10 ಸ್ಥಳಗಳಲ್ಲಿ ಲಸಿಕೆಯ ಪ್ರಯೋಗಗಳನ್ನು ನಡೆಸಲು ತಯಾರಿ ನಡೆಸುತ್ತಿದೆ.

ಸ್ಪುಟ್ನಿಕ್‌  : ರಷ್ಯಾದಲ್ಲಿ ಮಕ್ಕಳ ಮೇಲೆ ಸ್ಪುಟ್ನಿಕ್‌ ಲಸಿಕೆಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. 100 ಮಕ್ಕಳ ಮೇಲೆ ಮಾಸ್ಕೋದಲ್ಲಿ ಲಸಿಕೆ ಪ್ರಯೋಗ ನಡೆದಿದೆ. ಈ ಲಸಿಕೆ ಭಾರತದಲ್ಲಿ ಲಭ್ಯವಿದೆ. ಆದರೆ ಮಕ್ಕಳ ಮೇಲಿನ ಅದರ ಪ್ರಯೋಗಗಳ ಫ‌ಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ಮಕ್ಕಳಿಗೆ ಲಸಿಕೆ ಸುರಕ್ಷಿತವೇ?  :

ಅಮೆರಿಕದಲ್ಲಿ ಜೂನ್‌ ತಿಂಗಳಲ್ಲಿ  ಫೈಜರ್‌ ಅಥವಾ ಮಾಡರ್ನಾ ಲಸಿಕೆಯನ್ನು ನೀಡಿದ 1,200 ಮಂದಿಯಲ್ಲಿ ಹೃದಯ ಸ್ನಾಯುವಿನ ಉರಿಯೂತದ ಅನುಭವ ಹೇಳಿಕೊಂಡಿದ್ದಾರೆ ಎಂದು ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌ (ಸಿಡಿಸಿ) ವರದಿ ಮಾಡಿದೆ. ಇದರಲ್ಲಿ 500 ಮಂದಿ 30 ವರ್ಷಕ್ಕಿಂತ ಚಿಕ್ಕವರು. ಲಸಿಕೆ ಪಡೆದ ಎರಡು ವಾರಗಳ ಅನಂತರ ಹೆಚ್ಚಿನ ಯುವಕರಲ್ಲಿ ಈ ದೂರುಗಳು ಬಂದಿತ್ತು. ಇಸ್ರೇಲ್‌ನಲ್ಲಿ ಫೈಜರ್‌ ಲಸಿಕೆ ನೀಡಿದ ಅನಂತರ ಅನೇಕ ಮಕ್ಕಳ ಹೃದಯ ಸ್ನಾಯುಗಳಲ್ಲಿ ಉರಿಯೂತದ ಲಕ್ಷಣಗಳು ಕಂಡುಬಂದಿದ್ದವು. ಆದರೆ ಯಾವುದೇ ಗಂಭೀರ ಅಡ್ಡ ಪರಿಣಾಮಗಳುಂಟಾಗಿಲ್ಲ ಎಂದು ವರದಿಯಾಗಿದೆ.

ಯಾವ ದೇಶಗಳಲ್ಲಿ ಮಕ್ಕಳಿಗೆ  ವ್ಯಾಕ್ಸಿನ್‌ ನೀಡಲಾಗುತ್ತಿದೆ? :

ಅಮೆರಿಕದಲ್ಲಿ ಮೇ ತಿಂಗಳಿನಿಂದ 12 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ  ಫೈಜರ್‌ ಲಸಿಕೆಯನ್ನು ನೀಡಲಾಗುತ್ತಿದ್ದು, ಮುಂದಿನ ವರ್ಷದಲ್ಲಿ 12 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆ ಹಾಕುವ ತಯಾರಿ ನಡೆಯುತ್ತಿದೆ.

ಯುರೋಪಿಯನ್‌ ಯೂನಿಯನ್‌ ಜು.23ರಿಂದ ಮಾಡರ್ನಾ ಲಸಿಕೆಯನ್ನು ಮಕ್ಕಳಿಗೆ ನೀಡಲು ಅನುಮತಿ ನೀಡಿದ್ದು, 12ರಿಂದ 17 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ.

ಜು. 19ರಿಂದ ಯುಕೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಫೈಜರ್‌ ಲಸಿಕೆ ನೀಡಲು ಅನುಮತಿ ನೀಡಲಾಗಿದ್ದು, ಸೆಪ್ಟಂಬರ್‌ ವೇಳೆಗೆ ಮಾಡರ್ನಾ ಲಸಿಕೆಗೂ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಇಸ್ರೇಲ್‌ನಲ್ಲಿ ಮಕ್ಕಳಿಗೆ ಜೂನ್‌ನಿಂದ ವ್ಯಾಕ್ಸಿನ್‌ ನೀಡಲಾಗುತ್ತಿದೆ. ಕೆನಡಾ 2020ರ ಡಿಸೆಂಬರ್‌ನಲ್ಲೇ 16 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಫೈಜರ್‌ ಲಸಿಕೆ ನೀಡಲು ಅನುಮೋದನೆ ನೀಡಿತ್ತು. ಇದಲ್ಲದೆ ಮಾಲ್ಟಾ, ಚಿಲಿಯಂತಹ ಅನೇಕ ಸಣ್ಣ ದೇಶಗಳೂ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಿವೆ.

ಪ್ರಯೋಗಗಳು ಏನು ಹೇಳುತ್ತವೆ? :

  • ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಿರುವ ಝೈಡಸ್‌ ಕ್ಯಾಡಿಲಾ ಜನವರಿಯಲ್ಲಿ ಮೂರನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸಿತ್ತು. ದೇಶಾದ್ಯಂತ 28 ಸಾವಿರ ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದ್ದು, ಇದರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ 12- 18 ವರ್ಷದೊಳಗಿನವರಾಗಿದ್ದಾರೆ. ಕಂಪೆನಿಯು ಈ ವಿವರವನ್ನು ಪರಿಶೀಲನೆಗಾಗಿ ಸರಕಾರಕ್ಕೆ ಸಲ್ಲಿಸಿದೆ.
  • ಯುರೋಪ್‌ನಲ್ಲಿ ಮಕ್ಕಳ ಲಸಿಕೆಗೆ ಅನುಮೋದನೆ ನೀಡುವ ಮೊದಲು 12ರಿಂದ 17 ವರ್ಷಗಳ ನಡುವಣ 3,732 ಮಕ್ಕಳ ಮೇಲೆ ಪರೀಕ್ಷಿಸಲಾಯಿತು. ಲಸಿಕೆಯು ವಯಸ್ಕರಂತೆ ಮಕ್ಕಳಲ್ಲೂ ಪ್ರತಿಕಾಯಗಳನ್ನು ಸೃಷ್ಟಿಸಿದೆ ಎಂದು ಪ್ರಯೋಗದ ಫ‌ಲಿತಾಂಶಗಳಲ್ಲಿ ಕಂಡುಬಂದಿದೆ. 2,163 ಮಕ್ಕಳಿಗೆ ಕೊರೊನಾ ಲಸಿಕೆ ಮತ್ತು 1,073 ಮಕ್ಕಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದ್ದು, ಲಸಿಕೆ ನೀಡಿದ 2,163 ಮಕ್ಕಳಲ್ಲಿ ಯಾರಿಗೂ ಕೊರೊನಾ ಸೋಂಕು ತಗಲಿಲ್ಲ ಮತ್ತು ಯಾವುದೇ ಗಂಭೀರ ಅಡ್ಡ ಪರಿಣಾಮಗಳೂ ಕಂಡುಬಂದಿಲ್ಲ.
  • ಚೀನದ ಲಸಿಕೆ ಕೊರೊನಾವಾಕ್‌ 3ರಿಂದ 17 ವರ್ಷ ಗಳ ಮಕ್ಕಳ ಮೇಲೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಂಪೆನಿಯು ಎರಡು ಹಂತಗಳಲ್ಲಿ 550ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷಿಸಿದ್ದು, ಇಬ್ಬರು ಮಕ್ಕಳಿಗೆ ಮಾತ್ರ ಜ್ವರ ಬಂದಿತ್ತು ಎಂದು ಕಂಪೆನಿ ತಿಳಿಸಿದೆ. ಇತರರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಪತ್ತೆಯಾಗಿಲ್ಲ. ವ್ಯಾಕ್ಸಿನೇಶನ್‌ನ ಅನಂತರ ಮಕ್ಕಳಲ್ಲಿ ಶೇ.98ರಷ್ಟು ಪ್ರತಿಕಾಯ ಉತ್ಪತ್ತಿ ಯಾಗಿವೆ ಎನ್ನಲಾಗಿದೆ.
  • ಮಕ್ಕಳ ಮೇಲೆ ಫೈಜರ್‌ ಲಸಿಕೆಯ ಪರಿಣಾಮವನ್ನು ಕಂಡುಹಿಡಿಯಲು 12ರಿಂದ 15 ವರ್ಷ ವಯಸ್ಸಿನ 2,260 ಮಕ್ಕಳಲ್ಲಿ 1,131 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, 1,129 ಮಂದಿಗೆ ಪ್ಲಾಸ್ಮಾ ಚಿಕಿತ್ಸೆ ನಡೆಸಲಾಯಿತು. ಲಸಿಕೆ ತೆಗೆದುಕೊಂಡ 1,131 ಮಕ್ಕಳಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳಾಗಿಲ್ಲ. ಪ್ರಯೋಗದ ಅನಂತರ ಫೈಜರ್‌ ಲಸಿಕೆ ಮಕ್ಕಳಿಗೆ ಶೇ.100ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next