ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ಪಡೆದವರ ಸಂಖ್ಯೆ 4 ಕೋಟಿ ಗಡಿದಾಟಿದ್ದು, 1.9 ಕೋಟಿ ಮಂದಿ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ. ಇನ್ನು ರಾಜ್ಯಾದ್ಯಂತ ಶುಕ್ರವಾರ ನಡೆದ ಕೋವಿಡ್ ಲಸಿಕೆ ಮೇಳದಲ್ಲಿ ದೇಶದಲ್ಲಿಯೇ ಎರಡನೇ ಅತಿ ಹೆಚ್ಚು 10.1 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.
ಲಸಿಕೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿ ಬುಧವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿತ್ತು. ಕಳೆದ ಬುಧವಾರ ರಜೆ ಮತ್ತು ಹಬ್ಬದ ಹಿನ್ನೆಲೆ ಹೆಚ್ಚಿನ ಮಂದಿ ಲಸಿಕೆಗೆ ಆಗಮಿಸುವುದಿಲ್ಲ ಎಂಬ ಕಾರಣಕ್ಕೆ ಶುಕ್ರವಾರ ಮೇಳವನ್ನು ಆಯೋಜಿಸಿತ್ತು. ರಾಜ್ಯದಲ್ಲಿ ಈವರೆಗೂ ನಡೆಯುತ್ತಿರುವ ಆರನೇ ಮೇಳ ಇದಾಗಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 3.5 ಲಕ್ಷ ಮಂದಿ ಮೊದಲ ಡೋಸ್ ಸೇರಿದಂತೆ ಬರೋಬ್ಬರಿ 10.1 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.
ಮೇಳದಲ್ಲಿ ರಾಜ್ಯಾದ್ಯಂತ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆ ಸೇರಿದಂತೆ ಸರ್ಕಾರಿ ವಲಯದ 8708, ಖಾಸಗಿ ವಲಯ 334 ಲಸಿಕಾ ಕೇಂದ್ರಗಳು ಸೇರಿ ಒಟ್ಟು 9,042 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. ಇನ್ನು ಶುಕ್ರವಾರ ದೇಶದಲ್ಲಿ 85 ಲಕ್ಷ ಮಂದಿಗೆ ಲಸಿಕೆ ನೀಡಿದ್ದು, ಈ ಪೈಕಿ ಮೊದಲ ಸ್ಥಾನದಲ್ಲಿ ಉತ್ತರಪ್ರದೇಶವಿದೆ (18 ಲಕ್ಷ ಮಂದಿ). ಆನಂತರದ ಸ್ಥಾನದಲ್ಲಿ ಕರ್ನಾಟಕ ಇದೆ.
ಇದನ್ನೂ ಓದಿ:ಬಿಜೆಪಿ ಈಗ ಎಲ್ಲಾ ವರ್ಗದವರ ಪಕ್ಷ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಾಲ್ಕು ಕೋಟಿ ಮಂದಿಗೆ ಲಸಿಕೆ : ರಾಜ್ಯದಲ್ಲಿ ಶುಕ್ರವಾರದ ಅಂತ್ಯಕ್ಕೆ 4.01 ಕೋಟಿ ಮಂದಿ ಲಸಿಕೆ ಪಡೆದಿದ್ದು, 1.9 ಕೋಟಿ ಮಂದಿ ಎರಡೂ ಡೋಸ್ ಪೂರ್ಣಗೊಳಿಸಿದ್ದಾರೆ. ಮೊದಲ ಮತ್ತು ಎರಡನೇ ಡೋಸ್ ಸೇರಿ 5.9 ಕೋಟಿ ಡೋಸ್‌ನಷ್ಟು ಲಸಿಕೆ ವಿತರಿಸಲಾಗಿದೆ. ರಾಜ್ಯದಲ್ಲಿ ಲಸಿಕೆಗೆ ಅರ್ಹ ಮಂದಿ 4.9 ಕೋಟಿ ಇದ್ದು, ಈಗಾಗಲೇ 4.01 ಕೋಟಿ ಮಂದಿ ಲಸಿಕೆ ಪಡೆದಿದ್ದು, ಶೇ.82 ರಷ್ಟು ಮೊದಲ ಡೋಸ್, ಶೇ.39 ರಷ್ಟು ಎರಡನೇ ಡೋಸ್ ಗುರಿಸಾಧನೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶುಕ್ರವಾರ ಅತಿ ಹೆಚ್ಚು ಲಸಿಕೆ ನೀಡಿದ ಜಿಲ್ಲೆಗಳು:
ಜಿಲ್ಲೆಗಳು – ಡೋಸ್‌ಗಳು
ಬೆಂಗಳೂರು – 90 ಸಾವಿರ
ಬೆಳಗಾವಿ – 72 ಸಾವಿರ
ಬಾಗಲಕೋಟೆ – 54 ಸಾವಿರ
ವಿಜಯಪುರ – 54 ಸಾವಿರ
ಬಳ್ಳಾರಿ – 51 ಸಾವಿರ