Advertisement

ಮೇ 10ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ: ನೋಂದಣಿ ಮಾಡಿಸಿದವರಿಗೆ ಮಾತ್ರ ಲಸಿಕೆ

12:07 PM May 09, 2021 | Team Udayavani |

ಬೆಂಗಳೂರು: ಮೇ 10 ರಿಂದ 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Advertisement

ಮೇ 10 ರಿಂದ ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್, ಸರ್ ಸಿ.ವಿ.ರಾಮನ್ ಜನರಲ್, ಇಎಸ್ ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷದವರಿಗೆ ಕೋವಿಡ್ ಲಸಿಕೆ ವಿತರಿಸಲಾಗುವುದು. ಇತರೆ ಜಿಲ್ಲೆಗಳಲ್ಲಿ ಆರಂಭಿಕವಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 18-44 ವಯೋಮಾನದವರಿಗೆ ಲಸಿಕೆ ನೀಡಲಾಗುವುದು. ಲಸಿಕೆ ಪೂರೈಕೆ ಹೆಚ್ಚಾಗುತ್ತಿದ್ದಂತೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆ ಕೇಂದ್ರಗಳಲ್ಲಿ ವಿತರಣೆ ಆರಂಭಿಸಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

18-44 ವಯೋಮಾನದವರಿಗೆ ಲಸಿಕೆ ವಿತರಿಸುವ ಎಲ್ಲಾ ಕೇಂದ್ರಗಳಲ್ಲಿ ಈ ಗುಂಪಿನವರಿಗೆ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು. ಕೋವಿಡ್ ಅಥವಾ ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಿಸಿ, ಸಮಯ ನಿಗದಿ ಮಾಡಿಕೊಂಡಿರುವವರಿಗೆ ಮಾತ್ರ ಲಸಿಕೆ ನೀಡಲಾಗುವುದು. ನೋಂದಣಿ ಇಲ್ಲದೆ ನೇರವಾಗಿ ಲಸಿಕೆ ಕೇಂದ್ರಕ್ಕೆ ಬರುವವರಿಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರತಿ ವ್ಯಕ್ತಿಗೂ ಆದಷ್ಟು ಶೀಘ್ರದಲ್ಲಿ ಲಸಿಕೆ ಒದಗಿಸಲು ಸರ್ಕಾರ ಬದ್ಧವಾಗಿದೆ. ಅಗತ್ಯ ಲಸಿಕೆ ಪೂರೈಕೆ ಮಾಡಿಕೊಳ್ಳಲು ನಿರಂತರ ಪ್ರಯತ್ನ ಸಾಗಿದೆ. ಆದ್ದರಿಂದ ಎಲ್ಲಾ ನಾಗರಿಕರು, ಅದರಲ್ಲೂ ವಿಶೇಷವಾಗಿ ನನ್ನ ಯುವಮಿತ್ರರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕು. ಖಂಡಿತವಾಗಿ ಲಸಿಕೆ ಸಿಗುತ್ತದೆ ಎಂದು ಸಚಿವರು ಮನವಿ ಮಾಡಿದ್ದಾರೆ.

18-44 ವರ್ಷವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮೇ 1 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಂಕೇತಿಕ ಚಾಲನೆ ನೀಡಿದ್ದರು. ರಾಜ್ಯದಲ್ಲಿ 3.26 ಕೋಟಿ ಈ ವಯೋಮಾನದವರಿದ್ದಾರೆ. ಎಲ್ಲರಿಗೂ 6.52 ಕೋಟಿ ಡೋಸ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ 2 ಕೋಟಿ ಕೋವಿಶೀಲ್ಡ್ ಡೋಸ್ ಹಾಗೂ 1 ಕೋಟಿ ಕೋವ್ಯಾಕ್ಸಿನ್ ಡೋಸ್ ಪೂರೈಕೆಗೆ ಬೇಡಿಕೆ ಇಡಲಾಗಿದೆ. ಸೀರಂ ಸಂಸ್ಥೆಯಿಂದ ಈವರೆಗೆ 6.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲಾಗಿದೆ. ಇನ್ನಷ್ಟು ಲಸಿಕೆ ಮೇ 2 ಅಥವಾ ಮೂರನೇ ವಾರ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next