ನವ ದೆಹಲಿ: ಭಾರತದಲ್ಲಿ ಶೇ.0.01ರಷ್ಟು ಮಂದಿಯ ಮೇಲೆ ಮಾತ್ರ ಕೊರೊನಾ ಲಸಿಕೆಯು ಪ್ರತಿಕೂಲ ಪರಿಣಾಮ ಬೀರಿದೆ. ಜನವರಿ 16ರಿಂದ ಜೂನ್ 7ರವರೆಗೆ 23.5 ಕೋಟಿ ಡೋಸ್ ಗಳನ್ನು ನೀಡಲಾಗಿದ್ದು, ಆ ಪೈಕಿ ಸುಮಾರು 26 ಸಾವಿರ ಮಂದಿಗಷ್ಟೇ ಸಮಸ್ಯೆ ಕಾಣಿಸಿಕೊಂಡಿದೆ ಮತ್ತು 488 ಸಾವು ಸಂಭವಿಸಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳನ್ನು ಆಧರಿಸಿ ಸಿಎನ್‌ಎನ್-ನ್ಯೂಸ್18 ವರದಿ ಮಾಡಿದೆ.
ಅಂದರೆ, 143 ದಿನಗಳ ಅವಧಿಯಲ್ಲಿ ಪ್ರತಿ 10 ಸಾವಿರ ಜನರಲ್ಲಿ ಒಬ್ಬರಿಗೆ ಮಾತ್ರ ಲಸಿಕೆ ಪ್ರತಿಕೂಲ ಪರಿಣಾಮ ಬೀರಿದೆ. ಪ್ರತಿ 10 ಲಕ್ಷ ಮಂದಿಯಲ್ಲಿ ಇಬ್ಬರು ಮಾತ್ರ ಸಾವಿಗೀಡಾಗಿದ್ದಾರೆ ಎಂಬುದು ಈ ದತ್ತಾಂಶಗಳಿಂದ ತಿಳಿದುಬಂದಿದೆ.
ಈ ನಡುವೆ, ಪಿಎಂ ಕೇರ್ಸ್ ನಿಧಿಯನ್ನು ಬಳಸಿಕೊಂಡು ಹಲವು ಜಿಲ್ಲೆಗಳಲ್ಲಿ ಸುಮಾರು 850 ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮಾಹಿತಿ ನೀಡಿದೆ. ಸೋಮವಾರ ಕೇಂದ್ರ ಸರ್ಕಾರವು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಹೆಚ್ಚುವರಿ 1.06 ಲಕ್ಷ ವಯಲ್ ಗಳಷ್ಟು ಔಷಧವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿದೆ.
ಇದನ್ನೂ ಓದಿ: 2020-21ರ ಆರ್ಥಿಕ ವರ್ಷದಲ್ಲಿ ವಿಪ್ರೋ ಸಂಸ್ಥೆಯ ಸಿಇಒ ಪಡೆದ ವಾರ್ಷಿಕ ವೇತನ 64 ಕೋಟಿ..!
ಇದೇ ವೇಳೆ, ಕೊರೊನಾ ಸೋಂಕು ಬಂದು ಗುಣಮುಖರಾದವರು ಒಂದು ಡೋಸ್ ಲಸಿಕೆ ಪಡೆದರೆ ಸಾಲುತ್ತದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ. ಜ.16ರಿಂದ ಫೆ.5ರವರೆಗೆ ಲಸಿಕೆ ಪಡೆದ 260 ಆರೋಗ್ಯ ಸಿಬ್ಬಂದಿಯ ಮೇಲೆ ಪ್ರಯೋಗ ನಡೆಸಿ ಈ ವರದಿ ತಯಾರಿಸಲಾಗಿದೆ.
ನೊವಾವ್ಯಾಕ್ಸ್ ಶೇ.90 ಪರಿಣಾಮಕಾರಿ
ಅಮೆರಿಕದ ನೊವಾವ್ಯಾಕ್ಸ್ ಲಸಿಕೆಯು ಕೊರೊನಾ ಸೋಂಕಿನ ಮೇಲೆ ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿದ್ದು, ಲಸಿಕೆಯ 3ನೇ ಹಂತದ ಪ್ರಯೋಗದ ವರದಿಯನ್ನು ಬಹಿರಂಗ ಪಡಿಸಿದೆ. ಭಾರತದಲ್ಲಿ ಈ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಲಿದೆ. ಇನ್ನೊಂದೆಡೆ, ರಷ್ಯಾದಲ್ಲಿ 8-12 ವಯಸ್ಸಿನ ಮಕ್ಕಳ ಮೇಲೆ ಸ್ಪುಟ್ನಿಕ್ ವಿ ಲಸಿಕೆಯ ಪ್ರಯೋಗ ಆರಂಭವಾಗಿದ್ದು, ಸೆಪ್ಟೆಂಬರ್ ನಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವುದಾಗಿ ರಷ್ಯಾ ತಿಳಿಸಿದೆ. ನವದೆಹಲಿಯ ಏಮ್ಸ್ ನಲ್ಲಿ 6-12 ವಯೋಮಾನದವರ ಮೇಲೆ ಕೊವ್ಯಾಕ್ಸಿನ್ ಪ್ರಯೋಗಕ್ಕೆ ಸಿದ್ಧತೆ ಶುರುವಾಗಿದ್ದು, ಮಂಗಳವಾರದಿಂದ ಬಾಲ ಪ್ರತಿನಿಧಿಗಳ ನೇಮಕ ನಡೆಯಲಿದೆ.