ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆದೇಶದಂತೆ ಎಲ್ಲರಿಗೂ ಲಸಿಕೆ ವಿತರಿಸುವ ನಿಟ್ಟಿನಲ್ಲಿ ಸರಕಾರದ ಜತೆ ಕೈಜೋಡಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಹೊಂದಿರುವ ಗ್ರಾಹಕ ಸೇವಾ ಕೇಂದ್ರಗಳನ್ನು ಪ್ರಸಕ್ತ ಆಯಾ ಗ್ರಾಮದ ಜನರಿಗೆ ಲಸಿಕೆ ನೀಡಲು ತಾತ್ಕಾಲಿಕವಾಗಿ ಬಿಟ್ಟುಕೊಡಲಾಗುತ್ತದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಲಸಿಕೆ ನೀಡಲು ಬೇಕಾದ ವ್ಯವಸ್ಥೆ ಮತ್ತು ನೋಡಿಕೊಳ್ಳಲು ಸ್ವಯಂ ಸೇವಕರನ್ನು ಒದಗಿಸುವುದಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಲಸಿಕೆಗಳು ಲಭ್ಯವಾದೊಡನೆ ಗ್ರಾಮೀಣ ಪ್ರದೇಶಗಳಿಗೆ ಅದನ್ನು ಸಾಗಿಸಲು ಬೇಕಾದ ವಾಹನದ ವ್ಯವಸ್ಥೆ ಒದಗಿಸಲು ಯೋಜನೆಯು ಸಿದ್ಧವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದವರು ಹೇಳಿದರು.
ಸೋಂಕಿತರಿಗೆ ಉಚಿತ ವಾಹನ ಸೌಲಭ್ಯ :
ಹೆಗ್ಗಡೆಯವರ ಆದೇಶದಂತೆ ರಾಜ್ಯದ (ಬೆಂಗಳೂರು ನಗರ ಹೊರತುಪಡಿಸಿ) ಪ್ರತಿ ತಾಲೂಕಿಗೆ ತಲಾ 2ರಂತೆ ಒಟ್ಟು 350 ವಾಹನಗಳನ್ನು ಮೇ 3ರಿಂದಲೇ ಸೋಂಕಿತರಿಗೆ ಉಚಿತ ಸಂಚಾರಿ ವಾಹನ ವ್ಯವಸ್ಥೆಗೆ ಒದಗಿಸಲು ನಿರ್ಧರಿಸಲಾಗಿದೆ.
ಈ ವಾಹನಗಳು ಗ್ರಾಮೀಣ ಪ್ರದೇಶದ ಸೋಂಕಿತರು ಆಸ್ಪತ್ರೆಗೆ ತೆರಳಲು ಅಥವಾ ಆಸ್ಪತ್ರೆಯಿಂದ ಹಿಂದಿರುಗಲು ಲಭ್ಯವಾಗಲಿವೆ. ಬಡಜನರಿಗೆ ಈ ಸೌಲಭ್ಯ ದೊರಕಲು ವ್ಯವಸ್ಥೆ ಮಾಡಲಾಗಿದ್ದು, ರೋಗಿಯ ಪ್ರಯಾಣಕ್ಕೆ ಮಾತ್ರ ಲಭ್ಯವಿರುವ ಈ ವಾಹನ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಲು ಆಯಾ ತಾಲೂಕಿನ ಯೋಜನಾಧಿಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಗ್ರಾಹಕ ಸೇವಾ ಕೇಂದ್ರ ಚಟುವಟಿಕೆ ಸ್ಥಗಿತ :
ಲಾಕ್‌ಡೌನ್ ಪರಿಸ್ಥಿತಿಯನ್ನು ಗಮನ ದಲ್ಲಿರಿಸಿಕೊಂಡು ಸ್ವಸಹಾಯ ಸಂಘಗಳ ಸದಸ್ಯರಿಗೆ ತೊಂದರೆಯಾಗದಂತೆ ಮೇ 3ರಿಂದ ಮೇ 15ರ ವರೆಗೆ ಯೋಜನೆಯ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಮೇ 2ರಂದು ರವಿವಾರ ಕಾರ್ಯಕಾರಿ ಮಂಡಳಿ ಸಭೆ ಯಲ್ಲಿ ತೀರ್ಮಾನಿಸಿದಂತೆ ಯೋಜನೆಯ ಗ್ರಾಹಕ ಸೇವಾ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿಲ್ಲ. ಜತೆಗೆ ಸದಸ್ಯರು ಹಣ ಸಂಗ್ರಹಣೆ ಮತ್ತು ಸಾಲದ ಕಂತು ಕಟ್ಟುವುದನ್ನು 2 ವಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.