Advertisement

ಲಸಿಕೆ ಪರಿಣಾಮಕಾರಿ ಅನುಷ್ಠಾನಕ್ಕೆ ಮನೆ ಮನೆಗೆ ಲಸಿಕಾ ಮಿತ್ರ

12:46 AM Jun 20, 2022 | Team Udayavani |

ಉಡುಪಿ/ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌-19 ಸಂಭಾವ್ಯ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಲಸಿಕೀಕರಣ ಪ್ರಗತಿಯ ವೇಗವನ್ನು ಹೆಚ್ಚಿಸಬೇಕಾಗಿದ್ದು, ಇದಕ್ಕಾಗಿ ಮನೆ-ಮನೆಗೆ ಲಸಿಕಾ ಮಿತ್ರ 2.0 ಲಸಿಕೆ ಹಾಕಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Advertisement

ಜೂನ್‌ ಮತು ಜುಲೈ ತಿಂಗಳಿನಲ್ಲಿ ಕೋವಿಡ್‌ ಲಸಿಕೆ ಹಾಕಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಆಶಾ ಕಾರ್ಯಕರ್ತೆಯರು ಮನೆ ಭೇಟಿ ನಡೆಸಿ, 12-14 ವಯಸ್ಸಿನ ಮಕ್ಕಳು, 15-17 ವಯಸ್ಸಿನ ಮಕ್ಕಳು, 18 ವರ್ಷ ಮೇಲ್ಪಟ್ಟ ನಾಗರಿಕರು ಪ್ರಥಮ ಹಾಗೂ ದ್ವಿತೀಯ ಡೋಸ್‌ ಪಡೆಯಲು ಬಾಕಿ ಇರುವವರು, 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಬಾಕಿ ಇರುವವರನ್ನು ಗುರುತಿಸಿ ಅವರ ಮನವೊಲಿಸಿ, ಶಾಲೆ ಅಥವಾ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಪಡೆಯಲು ಜಾಗೃತಿ ಮೂಡಿಸಲಾಗುತ್ತದೆ.

ತಾತ್ಕಾಲಿಕ ಕೇಂದ್ರ ಸ್ಥಾಪನೆ
ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಬಸ್‌, ರೈಲು, ಮೆಟ್ರೋ, ವಿಮಾನ ಹಾಗೂ ಹಡಗು ನಿಲ್ದಾಣಗಳಲ್ಲಿ ಮತ್ತು ಜನಸಂದಣಿ ಇರುವ ಮಾರುಕಟ್ಟೆ, ಸಂತೆಗಳಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಿ, ಲಸಿಕೆ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಲಸಿಕೆ ನೀಡಲು ಹಾಗೂ ಲಸಿಕೆ ಪಡೆಯಲು ಬಾಕಿ ಇರುವ, ಶಾಲೆಯಿಂದ ಹೊರಗುಳಿದ 12ರಿಂದ 17 ವರ್ಷದ ಮಕ್ಕಳನ್ನು ಗುರುತಿಸಿ, ಸೂಕ್ತ ಸ್ಥಳದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಆಸ್ಪತ್ರೆಗೆ ಬರಲು, ನಡೆಯಲು ಸಾಧ್ಯವಾಗದ ಹಾಗೂ ಹಾಸಿಗೆ ಹಿಡಿದಿರುವ 60 ವರ್ಷ ಮೇಲ್ಪಟ್ಟವರಿಗೆ ಮೊಬೈಲ್‌ ಲಸಿಕೆ ಶಿಬಿರವನ್ನು ವ್ಯವಸ್ಥೆ ಮಾಡಿ, ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಲಸಿಕೆ ಮೇಳ-ಮೈಕ್‌ ಪ್ರಚಾರ
ಬುಧವಾರ ಲಸಿಕೆ ಮೇಳದ ಕುರಿತು ಗ್ರಾಮ ವ್ಯಾಪ್ತಿಯಲ್ಲಿ ಗ್ರಾ.ಪಂ. ಅಧಕ್ಷ, ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸಹಕಾರ ಪಡೆದು, ಲಸಿಕೆ ಶಿಬಿರದ ಕುರಿತು ಮೈಕ್‌ ಮೂಲಕ ಪ್ರಚಾರ ನಡೆಸಿ ಲಸಿಕೆ ನೀಡಲಾಗುವುದು.

ಉಡುಪಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 10,04,495 ಮಂದಿಗೆ (ಶೇ.100.55) ಮೊದಲ ಡೋಸ್‌, 9,98,354 ಮಂದಿಗೆ (99.94) ಎರಡನೇ ಡೋಸ್‌ ನೀಡಲಾಗಿದೆ. 15-18ರ ವಯೋಮಾನದಲ್ಲಿ 49,186 ಮಂದಿಗೆ ಪ್ರಥಮ ಡೋಸ್‌ ನೀಡಿ ಶೇ. 91.84 ಹಾಗೂ 47,906 ಮಂದಿಗೆ ಎರಡನೇ ಡೋಸ್‌ ನೀಡಿ ಶೇ. 89.45 ಸಾಧನೆ ಆಗಿದೆ. 12-14ರ ವಯೋಮಾನದಲ್ಲಿ 33,583 ಮಂದಿಗೆ ಪ್ರಥಮ ಡೋಸ್‌ ನೀಡಿ ಶೇ. 108.56 ಹಾಗೂ 27,113 ಮಂದಿಗೆ ಎರಡನೇ ಡೋಸ್‌ ನೀಡಿ ಶೇ. 87.65 ಸಾಧನೆ ಆಗಿದೆ. 15,750 ಆರೋಗ್ಯ ಕಾರ್ಯಕರ್ತರು, 4316 ಮುಂಚೂಣಿ ಕಾರ್ಯಕರ್ತರು 63,044 ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ದ.ಕ. ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ರಿಂದ 14 ವರ್ಷದೊಳಗಿನ 64,913 ಮಂದಿಗೆ (ಶೇ.88.48) ಮೊದಲ ಡೋಸ್‌, 46,661 ಮಂದಿಗೆ (ಶೇ.63.60) ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. 15ರಿಂದ 17 ವರ್ಷದೊಳಗಿನ 1,22,918 ಮಂದಿಗೆ (ಶೇ.121.04) ಮೊದಲನೇ ಡೋಸ್‌, 1,16,411 (ಶೇ.94.71) ಮಂದಿಗೆ ಎರಡನೇ ಡೋಸ್‌ ಲಸಿಕೆ, 18 ರಿಂದ 44 ವರ್ಷದೊಳಗಿನ 8,90,083 (ಶೇ.92.18) ಮಂದಿಗೆ ಮೊದಲ ಡೋಸ್‌, 9,03,264 (ಶೇ.101.48) ಮಂದಿಗೆ ಎರಡನೇ ಡೋಸ್‌ ಮತ್ತು 2,251 ಮಂದಿಗೆ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನೀಡಲಾಗಿದೆ. 45ರಿಂದ 60 ವರ್ಷದೊಳಗಿನ 4,40,406 (ಶೇ.105.84) ಮಂದಿಗೆ ಮೊದಲ ಡೋಸ್‌, 4,51,988 (ಶೇ.102.63) ಮಂದಿಗೆ ಎರಡನೇ ಡೋಸ್‌ ಮತ್ತು 1753 ಮಂದಿಗೆ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 2,67,952 (ಶೇ.99.61) ಮಂದಿಗೆ ಮೊದಲ ಡೋಸ್‌, 2,67,918 (ಶೇ.99.99) ಮಂದಿಗೆ ಎರಡನೇ ಡೋಸ್‌, 47,690 ಮಂದಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗಿದೆ. 20,747 ಮಂದಿ ಆರೋಗ್ಯ ಕಾರ್ಯಕರ್ತರು, 7,118 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ.

ಮೇಳದ ದಿನ ಲಸಿಕೆ ಶಿಬಿರ
ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿ ಗಳೊಂದಿಗೆ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಕಾರ್ಯಪಡೆಯ ಸದಸ್ಯರ ಸಮಿತಿ ಸಭೆ ನಡೆಸಿ, ಪ್ರಥಮ ಹಾಗೂ ದ್ವಿತೀಯ ಡೋಸ್‌ ಲಸಿಕೆ ಪಡೆಯಲು ಬಾಕಿ ಇರುವ ಮಕ್ಕಳು ಮತ್ತು ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಬಾಕಿ ಇರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡಲು ಹಾಗೂ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಪಂಚಾಯತ್‌ನಲ್ಲಿಯೇ ಬುಧವಾರ ಮೇಳದ ದಿನ ಲಸಿಕೆ ಶಿಬಿರವನ್ನು ಆಯೋಜಿಸಬೇಕು. ಒಂದು ವೇಳೆ ಲಸಿಕೆ ಪಡೆಯಲು ನಿರಾಕರಿಸಿದ್ದಲ್ಲಿ ಪಂಚಾಯತ್‌ ಕಾರ್ಯಪಡೆ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯದ ಮುಖಂಡರುಗಳು ಮನವೊಲಿಸಿ, ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಕುರಿತು ಕ್ರಮ ವಹಿಸಲಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ ಸಂಭಾವ್ಯ 4ನೇ ಅಲೆಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಮನೆ-ಮನೆಗೆ ಲಸಿಕಾ ಮಿತ್ರ 2.0 ಕಾರ್ಯಕ್ರಮ ಮತ್ತು ಬುಧವಾರ ನಡೆಯುವ ಲಸಿಕೆ ಮೇಳವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಿದ್ದೇವೆ. ವ್ಯಾಕ್ಸಿನೇಶನ್‌ನಲ್ಲಿ ನೂರರಷ್ಟು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
– ಕೂರ್ಮಾ ರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next