Advertisement

ಲಸಿಕೆಗೆ ವಿಶ್ವಾಸ: ಪ್ರಯೋಗಕ್ಕೆ ಒಳಪಟ್ಟ ರಾಜ್ಯದ 14 ಜನ ಪ್ರತಿನಿಧಿಗಳು

01:04 AM Dec 26, 2020 | mahesh |

ಬೆಂಗಳೂರು: ಭಾರತ್‌ ಬಯೋಟೆಕ್‌ನ ಕೋವಿಡ್ ಲಸಿಕೆ ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗದಲ್ಲಿ ರಾಜ್ಯದ 14 ಮಂದಿ ಜನಪ್ರತಿನಿಧಿಗಳು, 98 ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಲಸಿಕೆ ಪಡೆದಿದ್ದಾರೆ. “ನಾವು ಲಸಿಕೆ ಪಡೆದಿ ದ್ದೇವೆ, ನೀವೂ ಪಡೆಯಿರಿ’ ಎಂದು ಜನರಿಗೆ ಉತ್ತೇಜನ ನೀಡುವುದರ ಜತೆಗೆ ಲಸಿಕೆಯ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.  ವೈದೇಹಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಯುತ್ತಿದೆ. 382 ಮಂದಿಗೆ ಕೊವ್ಯಾಕ್ಸಿನ್‌ನ ಎರಡು ಡೋಸ್‌ಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ಲಸಿಕೆ ಪಡೆದವರಲ್ಲಿ ಈವರೆಗೂ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ಕ್ಲಿನ್ಟ್ರಾಕ್‌ ಇಂಟರ್‌ನ್ಯಾಷನಲ್‌ ಪ್ರೈ.ಲಿ. ನಿರ್ದೇಶಕಿ ಚೈತನ್ಯಾ ಆದಿಕೇಶವುಲು ತಿಳಿಸಿದ್ದಾರೆ.

Advertisement

ಮೈಸೂರಿನಲ್ಲಿ ಯಶ
ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನ ಕೇಂದ್ರದಲ್ಲಿ ಸೀರಮ್‌ ಸಂಸ್ಥೆಯ ಕೋವಿ-ಶೀಲ್ಡ್‌ ಮತ್ತು ರಷ್ಯಾದ ಸ್ಪುಟ್ನಿಕ್‌ ವ್ಯಾಕ್ಸಿನ್‌ ಪರೀಕ್ಷೆ ಯಶ ಪಡೆದಿದೆ. ಕೋವಿ-ಶೀಲ್ಡ್‌ ಮತ್ತು ನೋವಾ-ವ್ಯಾಕ್ಸ್‌ ಎಂಬ 2 ಲಸಿಕೆಗಳನ್ನು ಪ್ರಯೋಗ ಮಾಡಲಾಗಿದೆ. ನೋವಾ-ವ್ಯಾಕ್ಸ್‌ ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ. ಈ ವರದಿಯನ್ನು ಆಸ್ಟ್ರೇಲಿಯಾ ಮೂಲದ ಸಂಸ್ಥೆಗೆ ನೀಡಿದ್ದೇವೆ. ಜನವರಿ ಮೊದಲ ವಾರದಿಂದ ವ್ಯಾಕ್ಸಿನ್‌ ನೀಡಲು ಸಿದ್ಧತೆ ನಡೆದಿದೆ ಎಂದು ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನ ಕೇಂದ್ರದ ಸಹ ಕುಲಾಧಿಪತಿ ಪ್ರೊ| ಬಿ. ಸುರೇಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಜನಸ್ಪಂದನೆ
ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲಿ 1,100 ಜನರ ಮೇಲೆ ಪ್ರಯೋಗ ನಡೆಸಲಾಗಿದೆ. ಇದುವರೆಗೆ ಯಾರ ಆರೋಗ್ಯದಲ್ಲಿಯೂ ವ್ಯತ್ಯಾಸ ಉಂಟಾಗಿಲ್ಲ ಎಂದು ಆಸ್ಪತ್ರೆ ನಿರ್ದೇಶಕ ಡಾ| ಅಮಿತ್‌ ಭಾತೆ ತಿಳಿಸಿದ್ದಾರೆ. ಅನೇಕ ಕಡೆಗಳಿಂದ ಜನರು ಬಂದು ಪರೀಕ್ಷೆಗೆ ಸಹಕಾರ ನೀಡಿದ್ದಾರೆ. ಪ್ರತೀ ದಿನ ಸುಮಾರು 70ರಿಂದ 80 ಜನರು ಬರುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡವರಲ್ಲಿ ರಾಜಕೀಯ ಮುಖಂಡರು, ಕಾರ್ಯಕರ್ತರು, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಸಮಾಜ ಸೇವಾ ಕಾರ್ಯಕರ್ತರು ಸೇರಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಭಾಗಿ ಯಾಗಿರುವವರಲ್ಲಿ 400ಕ್ಕೂ ಹೆಚ್ಚು ಮಂದಿ ಮಹಿಳೆಯರು.

ಏಮ್ಸ್‌ ಆಹ್ವಾನ
ಇದೇವೇಳೆ ಕೊವ್ಯಾಕ್ಸಿನ್‌ 3ನೇ ಹಂತದ ಪ್ರಯೋಗ ನಡೆಸುತ್ತಿರುವ ದಿಲ್ಲಿಯ ಏಮ್ಸ್‌ ಆಸ್ಪತ್ರೆಯು ಲಸಿಕೆ ಪಡೆಯಲು ಪ್ರತಿನಿಧಿಗಳಿಗೆ ಆಹ್ವಾನ ನೀಡಿದೆ.

ಲಸಿಕೆ ಪ್ರಕ್ರಿಯೆ
ಮೊದಲು 30 ನಿಮಿಷ ವೈಯಕ್ತಿಕ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಈ ವೇಳೆ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಲಸಿಕೆ ಪಡೆಯುವವರ ಆರೋಗ್ಯದ ಜವಾಬ್ದಾರಿ, ಅನುಸರಿಸಬೇಕಾದ ಕ್ರಮಗಳ ಕುರಿತು ಒಪ್ಪಂದಕ್ಕೆ ಸಹಿ ಪಡೆಯಲಾಗುತ್ತದೆ. 15 ನಿಮಿಷ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅನಂತರ 2 ನಿಮಿಷಗಳಲ್ಲಿ ಚುಚ್ಚುಮದ್ದು ಮೂಲಕ ಲಸಿಕೆ ನೀಡಲಾಗುತ್ತದೆ. ಬಳಿಕ ಒಂದು ತಾಸು ಅವಲೋಕನ ಅವಧಿ ಮುಗಿದ ಮೇಲೆ ಮನೆಗೆ ಮರಳಬಹುದು. 28 ದಿನಗಳ ಬಳಿಕ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ.

Advertisement

ಜ. 18ರಂದು ಬಿಡುಗಡೆ
ಭಾರತ್‌ ಬಯೋಟೆಕ್‌ನ ಲಸಿಕೆ ಬಿಡುಗಡೆಗೆ ಜ. 18ರ ದಿನಾಂಕ ನಿಗದಿಯಾಗಿದೆ. ಸದ್ಯ ತುರ್ತು ಲಸಿಕೆ ಸಿದ್ಧವಿದ್ದು, ಕೇಂದ್ರ ಅಥವಾ ರಾಜ್ಯ ಸರಕಾರದ ಸೂಚನೆಯಂತೆ ಪೂರೈಕೆ ಮಾಡಲಾಗುತ್ತದೆ. ತುರ್ತು ಲಸಿಕೆ ಚುಚ್ಚುಮದ್ದಾಗಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಆರಂಭವಾಗುವ ಎಪ್ರಿಲ್‌ ವೇಳೆಗೆ ಪೋಲಿಯೋ ಮಾದರಿಯಲ್ಲಿ ಹನಿ (ಡ್ರಾಪ್ಸ್‌) ಲಸಿಕೆ ಸಿದ್ಧವಾಗುತ್ತದೆ. ಒಂದು ಹನಿಯನ್ನು ಮೂಗಿನಲ್ಲಿ ಹಾಕಲಾಗುತ್ತದೆ ಎಂದು ಚೈತನ್ಯಾ ಆದಿಕೇಶವುಲು ತಿಳಿಸಿದ್ದಾರೆ.

ಯಾರೆಲ್ಲ ಭಾಗವಹಿಸಬಹುದು?
18 ವರ್ಷ ಮೇಲ್ಪಟ್ಟವರು. ಕೊರೊನಾ ಸೋಂಕಿಗೊಳಗಾಗದ ಅಥವಾ ಸೋಂಕು ತಗಲಿ 2 ತಿಂಗಳು ಪೂರೈಸಿರುವವರು.

ಸ್ವಯಂಪ್ರೇರಿತರಾಗಿ ಬನ್ನಿ
ವೈದೇಹಿ ಕಾಲೇಜಿನಲ್ಲಿ ನಡೆಯು ತ್ತಿರುವ ಲಸಿಕೆ ಪ್ರಯೋಗಕ್ಕೆ ಸ್ವಯಂ ಸೇವಕರ ಕೊರತೆ ಎದುರಾಗಿದೆ. ಒಟ್ಟು 1 ಸಾವಿರ ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಈವರೆಗೆ 424 ಮಂದಿ ಮಾತ್ರ ಮುಂದೆ ಬಂದಿದ್ದಾರೆ. ಈಗಾಗಲೇ ಜನಪ್ರತಿನಿಧಿಗಳು, ಆಸ್ಪತ್ರೆಯ ವೈದ್ಯರು, ಅವರ ಕುಟುಂಬ ವರ್ಗಕ್ಕೆ ಲಸಿಕೆ ನೀಡಲಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರಿಲ್ಲ. “ಜನರು ಆತಂಕಕ್ಕೊಳಗಾಗದೆ ಪ್ರಯೋಗದಲ್ಲಿ ಭಾಗವಹಿಸಬೇಕು’ ಎಂದು ಕ್ಲಿನ್ಟ್ರಾಕ್‌ ಇಂಟರ್‌ನ್ಯಾಷನಲ್‌ ಮನವಿ ಮಾಡಿದೆ.

ಇವರನ್ನು ಸಂಪರ್ಕಿಸಿ
ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಲು ಕ್ಲಿನ್ಟ್ರಾಕ್‌ ಇಂಟರ್‌ನ್ಯಾಷನಲ್‌ ಪ್ರೈ.ಲಿ. ನಿರ್ದೇಶಕಿ ಚೈತನ್ಯಾ ಆದಿಕೇಶವುಲು,
ಮೊ.ಸಂ. 9513925857 ಇವರನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next