ಜೀಯು, ಹೊನ್ನಾವರ
ಹೊನ್ನಾವರ: ಲಸಿಕೆಯನ್ನು ಯಾರ್ಯಾರಿಗೆ ಆದ್ಯತೆ ಮೇಲೆ ಕೊಡಬೇಕು ಎಂದು ಕಾಲಕಾಲಕ್ಕೆ ಮಾರ್ಗದರ್ಶಿ ಸೂತ್ರ ಪ್ರಕಟಣೆ ಆಗುತ್ತಿದ್ದರೂ ರಾಜಕಾರಣಿಗಳು ತಲೆಹಾಕಿದ ಕಾರಣ ಎಲ್ಲಿ, ಯಾವಾಗ, ಯಾರಿಗೆ ಲಸಿಕೆ ಹಾಕುತ್ತಾರೆ ಎಂಬುದು ತಿಳಿಯದೆ ಗೊಂದಲ ಉಂಟಾಗುತ್ತಿದೆ. ಆರಂಭದಲ್ಲಿ ಕೊರೊನಾ ವಾರಿಯರ್‌ಗಳಿಗೆ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದಾಯಿತು. ಅದು ಸರಿಯಾಗಿಯೇ ನಡೆಯಿತು.
40 ವರ್ಷ ಮೇಲ್ಪಟ್ಟ ನಾಗರಿಕರಿಗೆ ಆದ್ಯತೆ ಮೇಲೆ ಲಸಿಕೆ ಹಾಕುವುದು ಸರ್ಕಾರದ ಉದ್ದೇಶವಾದರೂ 18-44 ವಯೋಮಾನದವರಿಗೆ ಲಸಿಕೆ ಕೊಡಲು ಆರಂಭವಾದ ಮೇಲೆ ಶೇ.70 ರಷ್ಟು ಲಸಿಕೆ ಇವರ ಪಾಲಿಗೆ ಹೋಗಿದೆ. ಈಗ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಎಂಬ ಆದೇಶ ಬಂದ ಕಾರಣ ಕಾಲೇಜು ವಿದ್ಯಾರ್ಥಿಗಳು ಲಸಿಕಾ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ಕೆಲವು ದಿನ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಸ್ವಲ್ಪಸ್ವಲ್ಪ ಲಸಿಕೆ ಕೊಟ್ಟರು. ಅಲ್ಲಿ ಲಸಿಕೆಗಾಗಿ ಬಂದಿದ್ದ ಕೆಲವರಿಗೆ ಮಾತ್ರ ಲಸಿಕೆ ನೀಡಿದ ಕಾರಣ ಗೊಂದಲ ಉಂಟಾಯಿತು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಟ್ಟು ತಾಲೂಕು ಕೇಂದ್ರದಲ್ಲಿ ಮಾತ್ರ ಕೊಡಲು ಆರಂಭಿಸಿದರು.
ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಹಳ್ಳಿಯ ವಿದ್ಯಾರ್ಥಿಗಳಿಗೆ ನಿಗದಿತ ದಿನ ಗ್ರಾಮೀಣ ಭಾಗದಲ್ಲಿ ಲಸಿಕೆ ಸಿಗಲಿಲ್ಲ. ಮೊದಲನೇ ಡೋಸ್ ಕೋವಿಶೀಲ್ಡ್ ಪಡೆದುಕೊಂಡವರು 84 ದಿನ ಹಾಗೂ ಕೋವ್ಯಾಕ್ಷಿನ್ ಪಡೆದುಕೊಂಡವರು 4ವಾರ ಪೂರೈಸಿದ್ದರೆ ತಪ್ಪದೇ ಎರಡನೇ ಡೋಸ್ ಪಡೆಯಬೇಕು ಎಂದು ಹೇಳಿದ್ದರು. ಅವರಿಗೂ ಸಿಗುತ್ತಿಲ್ಲ. ಲಸಿಕೆ ಬರುವ ಪ್ರಮಾಣ ಕಡಿಮೆಯಾದರೂ ನಿಯಮಾವಳಿಯಂತೆ ಆದ್ಯತೆ ಮೇಲೆ ಲಸಿಕೆ ವಿತರಣೆಯಾಗುತ್ತಿಲ್ಲ. ಸಾಕಷ್ಟು ಹಾಸಿಗೆಗಳು, ಆಕ್ಸಿಜನ್ ಇದ್ದ ಕಾರಣ ಕೋವಿಡ್ ಬಂದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರಾಜಕಾರಣ ಬಂದು ತೊಂದರೆಯಾಗಲಿಲ್ಲ. ಈಗ ಲಸಿಕೆ ಕೊರತೆ ಇರುವುದರಿಂದ ರಾಜಕೀಯ ತಲೆಹಾಕಿದೆ. ಕೆಲವು ಶಾಸಕರು ನಮ್ಮ ಭಾಗಕ್ಕೆ ಇಷ್ಟು ಕೊಡಿ ಎಂದು ನಿರ್ದಿಷ್ಟ ಕಾರ್ಯಕರ್ತರ ಊರಿಗೆ ಕೊಡಿಸುತ್ತಾರೆ. ಇದನ್ನು ತಿಳಿದ ಮಾಜಿ ಶಾಸಕರು ನಮಗೂ ಒಂದಿಷ್ಟು ಕೊಡಿ ಎನ್ನುತ್ತಾರೆ.
ಪಕ್ಷದ ಮತ್ತು ವಿವಿಧ ಘಟಕಗಳ ತಾಲೂಕು ಅಧ್ಯಕ್ಷರೂ ಕೂಡ ಲಸಿಕೆ ವಿತರಣೆಯಲ್ಲಿ ಕೈಯಾಡಿಸುತ್ತಿದ್ದಾರೆ. ಇದರಿಂದ ಲಸಿಕೆ ವಿತರಣೆ ರಾಜಕಾರಣಗೊಂಡು ವಶೀಲಿ ಇದ್ದವರಿಗೆ ಸಿಗುವಂತಾಗಿದೆ. ಇದಕ್ಕೂ ರಾಜಕಾರಣವೇ ಎಂದು ಕೇಳಬೇಡಿ. ಇದು ಕೂಡ ಮತ ತಂದುಕೊಡಬಹುದು ಎಂಬ ಆಸೆ ಅವರಿಗೆ. ಯಾವ ತಾಲೂಕಿಗೆ ಎಷ್ಟು ಲಸಿಕೆ ಬಂತು, ಆದ್ಯತೆ ಮೇಲೆ ಎಷ್ಟು ಲಸಿಕೆಯನ್ನು ಯಾರಿಗೆ ಕೊಡಲಾಗಿದೆ ಎಂಬುದು ನಿತ್ಯ ಪ್ರಕಟವಾಗಬೇಕು. ಇಂತಹ ವಿಷಯಗಳು ಸಿಕ್ಕವರಿಗೆ ಸೀರುಂಡೆಯಾಗಬಾರದು. ಕಾರವಾರದಿಂದ ಭಟ್ಕಳದ ತನಕ ಲಸಿಕೆಗಾಗಿ ಜನ ಪರದಾಡುವ ಸುದ್ದಿ ಎಲ್ಲ ಮಾಧ್ಯಮಗಳಲ್ಲೂ ಬಂದಿದೆ. ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕೊಡಿಸಲಿ.