Advertisement

ಇಂದಿನಿಂದ ಪೂರ್ಣ ಪ್ರಮಾಣದ ಲಸಿಕೆ

02:54 AM Jan 18, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಪೂರ್ಣ ಪ್ರಮಾಣದ ಕೋವಿಡ್ ನಿರೋಧಕ ಲಸಿಕಾ ನೀಡುವ ಅಭಿಯಾನ ಸಾಗಲಿದೆ. ಉಡುಪಿಯಲ್ಲಿ ಆಂಶಿಕವಾಗಿ ನಡೆಯಲಿದೆ.

Advertisement

ಸೋಮವಾರ ದ.ಕ. ಜಿಲ್ಲೆಯ 8 ಮೆಡಿಕಲ್‌ ಕಾಲೇಜು, 4 ತಾಲೂಕು ಆಸ್ಪತ್ರೆಗಳು ಮತ್ತು ಮಂಗಳೂರು, ಮೂಲ್ಕಿ, ಬಂಟ್ವಾಳದ ವಾಮದಪದವು, ವಿಟ್ಲ ಹಾಗೂ ಕಡಬದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಹಾಕುವ ಅಭಿಯಾನ ಸಾಗಲಿದೆ. ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ್ದರೂ ರವಿವಾರ ರಜಾ ದಿನವಾದ ಕಾರಣ ಲಸಿಕೆ ಕಾರ್ಯ ನಡೆದಿಲ್ಲ. ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಕಾರ್ಯ ಮುಂದುವರಿಯಲಿದೆ.

ಗುರಿ ಸಾಧನೆ ನಿರೀಕ್ಷೆ :

ದ.ಕ. ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡ 600 ಮಂದಿಯಲ್ಲಿ ಕೇವಲ 229 ಮಂದಿ ಮಾತ್ರ ಶನಿವಾರ ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ್ದರು. ಸೋಮವಾರ ಲಸಿಕೆ ನೀಡುವಲ್ಲಿ ಗುರಿ ತಲುಪುವ ಉದ್ದೇಶವನ್ನು ಆರೋಗ್ಯ ಇಲಾಖೆ ಹೊಂದಿದೆ. ನೋಂದಣಿ ಮಾಡಿಕೊಂಡ ಗರಿಷ್ಠ 100 ಮಂದಿಗೆ ಮಾತ್ರ ಪ್ರತೀ ದಿನ ಲಸಿಕೆ ನೀಡಲು ಅವಕಾಶ ಇದೆ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ದ.ಕ. ಜಿಲ್ಲಾಸ್ಪತ್ರೆಯಾದ ವೆನ್ಲಾಕ್‌ನಲ್ಲಿ ಸೋಮವಾರ 6 ಕೌಂಟರ್‌ಗಳಲ್ಲಿ ಒಟ್ಟು 600 ಮಂದಿಗೆ ಲಸಿಕೆ ನೀಡಲಾಗುವುದು. ಆಯುಷ್‌ ವಿಭಾಗದ ಮೂರು ಮಹಡಿಗಳಲ್ಲಿ 6 ಕೇಂದ್ರ ತೆರೆಯಲಾಗಿದೆ. ಸುರತ್ಕಲ್‌ ಮತ್ತು ಕುಳಾç ಕೇಂದ್ರ ವ್ಯಾಪ್ತಿಯ ಮಂದಿಗೆ ಸುರತ್ಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದರೆ ಉಳಿದಂತೆ ತಾಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಮಂದಿಗೆ ವೆನ್ಕಾಕ್ ನ ಆಯುಷ್‌ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ.

Advertisement

ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ರವಿವಾರವೂ 40 ಜನರಿಗೆ ಲಸಿಕೆ ನೀಡಲಾಯಿತು. ಸೋಮವಾರ ಉಡುಪಿ ಜಿಲ್ಲಾಸ್ಪತ್ರೆ ಮತ್ತು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ 100 ಜನರಿಗೆ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ಶನಿವಾರ 538 ಜನರಿಗೆ ವಿತರಣೆ ಆಗಬೇಕಿತ್ತು. ಶನಿವಾರ 286 ಮತ್ತು ರವಿವಾರ 40 ಒಟ್ಟು 326 ಜನರಿಗೆ ವಿತರಣೆಯಾಗಿದೆ.

ರಜೆ ದಿನವೂ ಕರ್ತವ್ಯ

ಮೊದಲ ಹಂತದಲ್ಲಿ ಲಸಿಕೆ ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯ 52,381 ಮತ್ತು ಉಡುಪಿ ಜಿಲ್ಲೆಯ 22,333 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 2ನೇ ಹಂತದಲ್ಲಿ ಕಂದಾಯ, ಪೌರಾಡಳಿತ, ಪೊಲೀಸ್‌ ಸೇರಿದಂತೆ ಸರಕಾರಿ ಇಲಾಖೆಗಳ ಅಧಿಕಾರಿ ಹಾಗೂ ಸಿಬಂದಿಗೆ ಲಸಿಕೆ ನೀಡಲಾಗುತ್ತದೆ. ಆ್ಯಪ್‌ ಮೂಲಕ ನೋಂದಣಿ ಆರಂಭವಾಗಿದ್ದು,

ಜ. 20ರೊಳಗೆ ಪಟ್ಟಿ ಸಿದ್ಧವಾಗಬೇಕು. ಜ. 25ರೊಳಗೆ ಲಸಿಕಾ ಆ್ಯಪ್‌ನಲ್ಲಿ ಬೇಡಿಕೆ ಸಲ್ಲಿಸಬೇಕು. ಇದೇ ಕಾರಣಕ್ಕೆ ಆರೋಗ್ಯ ಅಧಿಕಾರಿಗಳು, ಸಿಬಂದಿ ವರ್ಗದವರು ರವಿವಾರ ರಜಾ ಇದ್ದರೂ ಕರ್ತವ್ಯದಲ್ಲಿ ತೊಡಗಿದ್ದರು.

ಜ. 31ಕ್ಕೆ ಪೊಲಿಯೋ ಲಸಿಕೆ :

ಈ ಬಾರಿಯ ರಾಷ್ಟ್ರೀಯ ಪಲ್ಸ್‌ ಪೊಲಿಯೋ ಲಸಿಕೆ ಕಾರ್ಯಕ್ರಮ ಜ. 31ರಂದು ಆರಂಭವಾಗಲಿದೆ. ಜ. 17ರಿಂದ 20ರ ವರೆಗೆ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಕೋವಿಡ್ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು.

ಇಂದು ಮತ್ತೆ ಲಸಿಕೆ ಬರುವ ಸಾಧ್ಯತೆ :

ದಕ್ಷಿಣ ಕನ್ನಡ ಜಿಲ್ಲೆಗೆ ಈಗಾಗಲೇ ಮೊದಲನೇ ಹಂತದಲ್ಲಿ ಕೊವಿಶೀಲ್ಡ್‌ ಲಸಿಕೆ ಬಂದಿದ್ದು, ಎರಡನೇ ಹಂತದಲ್ಲಿ ಸೋಮವಾರ ಜಿಲ್ಲಾಸ್ಪತ್ರೆಗೆ ಲಸಿಕೆ ಸೇರುವ ಸಾಧ್ಯತೆ ಇದೆ. ಮೊದಲನೇ ಹಂತದಲ್ಲಿ ದ.ಕ. ಜಿಲ್ಲೆಗೆ 24,500 ಡೋಸ್‌  ಲಸಿಕೆಗಳು ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next