ಹೊಸದಿಲ್ಲಿ: ಶತಕೋಟಿ ಭಾರತೀಯರು ನಿರೀಕ್ಷಿಸುತ್ತಿದ್ದ ಶುಭದಿನ ಕೊನೆಗೂ ಎದುರು ನಿಂತಿದೆ. ಕೋವಿಡ್ ಸಂಹಾರಕ್ಕೆ “ಸಂಜೀವಿನಿ’ ವಿತರಣೆಗೆ ಕ್ಷಣಗಣನೆ ಶುರುವಾಗಿದೆ. ಏತನ್ಮಧ್ಯೆ, ಲಸಿಕೆಯಿಂದ ಯಾವುದೇ ದೈಹಿಕ ಅಪಾಯಗಳಿಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಹರ್ಷವರ್ಧನ್, ಜನರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.
“ಕೋವಿಡ್ ಲಸಿಕೆಯಿಂದ ಬಂಜೆತನ ಕಾಡುತ್ತದೆ’ - ಮುಂತಾದ ಗಾಳಿಸುದ್ದಿಗಳಿಗೆ ಚಿಕಿತ್ಸೆ ಕೊಡುವ ಕೆಲಸವನ್ನು ಸಚಿವರು ಟ್ವಿಟರಿನಲ್ಲಿ ಮಾಡಿದ್ದಾರೆ. ” ಕೋವಿಡ್ ಲಸಿಕೆಯಿಂದ ಮಹಿಳೆಗಾಗಲೀ, ಪುರುಷನಿಗಾಗಲಿ ಬಂಜೆತನ ಬರುತ್ತದೆ ಎನ್ನುವುದರಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇಂಥ ಗಾಳಿಸುದ್ದಿಗಳಿಗೆ ಯಾರೂ ಕಿವಿಗೊಡಬಾರದು’ ಎಂದು ತಿಳಿ ಹೇಳಿದ್ದಾರೆ.
ಗಂಭೀರ ಸೈಡ್‌ಎಫೆಕ್ಟ್ಗಳಿಲ್ಲ: “ಇಂಜೆಕ್ಷನ್ ಪಡೆದಾಗ ಕೆಲವೇ ಕೆಲವರಿಗೆ ಸಣ್ಣಜ್ವರ, ಭುಜದಲ್ಲಿ ನೋವು, ತಲೆನೋವು, ಆಯಾಸ, ಸಣ್ಣಪುಟ್ಟ ಅಸ್ವಸ್ಥತೆ, ವಾಕರಿಕೆ ಕಾಣಿಸಿಕೊಳ್ಳಬಹುದಷ್ಟೇ. ಈ ಅಡ್ಡಪರಿಣಾಮಗಳು ಕೇವಲ ತಾತ್ಕಾಲಿಕ. ಕೆಲವೇ ಸಮಯದಲ್ಲಿ ಇವು ದೂರವಾಗುತ್ತವೆ. ಕೊರೊನಾದ ಮುಂದೆ ಈ ಪುಟ್ಟ ಸಮಸ್ಯೆಗಳು ಏನೂ ಅಲ್ಲ’ ಎಂದು ಧೈರ್ಯ ತುಂಬಿದ್ದಾರೆ.
ಲಸಿಕೆಗೆ “ಸೂಪರ್’ ಶಕ್ತಿ!: ಇದರ ಬೆನ್ನಲ್ಲೇ, ವಿಜ್ಞಾನಿಗಳು ಶೋಧಿಸಿರುವ ಲಸಿಕೆ ಕೊರೊನಾವಲ್ಲದೆ, ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವಂಥ ವೈರಾಣುಗಳನ್ನೂ ನಿಯಂತ್ರಿಸುವಷ್ಟು ಶಕ್ತಿಶಾಲಿ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾ ತಜ್ಞರ ಈ ಸಂಶೋಧನೆ “ಜರ್ನಲ್ ಸೈನ್ಸ್’ನಲ್ಲಿ ಪ್ರಕಟವಾಗಿದೆ. “ಲಸಿಕೆಯನ್ನು 60 ತದ್ರೂಪಿ ಪ್ರೊಟೀನ್‌ಗಳಿಂದ ತಯಾರಿಸಲಾಗಿದ್ದು, ಪ್ರತಿಯೊಂದು ಸಣ್ಣ ಪ್ರೊಟೀನ್‌ಗಳೂ ಪ್ರತಿರೋಧಕ ರಕ್ಷಣೆ ಒದಗಿಸುತ್ತವೆ’ ಎಂದಿದೆ.
ಸಕ್ರಿಯ ಪ್ರಕರಣ ಇಳಿಕೆ : ಏತನ್ಮಧೆ ದೇಶದಲ್ಲಿ ಲಸಿಕೆ ನೀಡಿಕೆ ಶುರುವಾಗುತ್ತಿರುವಂತೆಯೇ ಸಕ್ರಿಯ ಪ್ರಕರಣಗಳ ಸಂಖ್ಯೆ 2.13 ಲಕ್ಷಕ್ಕೆ ಇಳಿಕೆಯಾಗಿದೆ. ಗುರುವಾರದಿಂದ ಶುಕ್ರವಾರದ ಅವಧಿಯಲ್ಲಿ 15,590 ಮಂದಿಗೆ ಸೋಂಕು ದೃಢಪಟ್ಟಿದೆ. 191 ಮಂದಿ ಸಾವನ್ನಪ್ಪಿದ್ದಾರೆ.