Advertisement

ಮುನ್ನೆಚ್ಚರಿಕೆ ಲಸಿಕೆ ಪ್ರಕ್ರಿಯೆಗೆ ಮತ್ತಷ್ಟು ವೇಗ : ಉಡುಪಿ ಜಿಲ್ಲೆಗೆ 10ನೇ ಸ್ಥಾನ

03:50 PM Feb 06, 2022 | Team Udayavani |

ಉಡುಪಿ : ಜಿಲ್ಲಾದ್ಯಂತ ಲಸಿಕಾ ಅಭಿಯಾನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈಗಾಗಲೇ ಶೇ.98.8 ಮಂದಿ ಮೊದಲ ಹಾಗೂ ಶೇ.88 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಮುನ್ನೆಚ್ಚರಿಕೆ ಲಸಿಕೆಯಲ್ಲೂ ಜಿಲ್ಲೆ ಶೇ.61.02ರಷ್ಟು ಪ್ರಗತಿ ಸಾಧಿಸಿದೆ.

Advertisement

10 ದಿನಗಳಲ್ಲಿ ಉತ್ತಮ ಸಾಧನೆ
ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಲಸಿಕೆ ತೆಗೆದು ಕೊಳ್ಳುವವರ ಸಂಖ್ಯೆ 10 ದಿನಗಳ ಹಿಂದೆ ಕಡಿಮೆಯಾಗಿತ್ತು. ಈ ಬಗ್ಗೆ ವಿಶೇಷ ಅಭಿಯಾನ ಸಹಿತ ಹಲವಾರು ಕಾರ್ಯಕ್ರಮಗಳನ್ನು ಮಾಡಿದ ಪರಿಣಾಮ ಜಿಲ್ಲೆ ರಾಜ್ಯದಲ್ಲಿಯೇ 10 ಸ್ಥಾನ ಪಡೆಯುವಂತಾಗಿದೆ. ತಾಲೂಕು ಮಟ್ಟದಲ್ಲಿ ನೋಡಲ್‌ ಆಫೀಸರ್‌ಗಳ ನೇಮಕ, ವೈದ್ಯಾಧಿಕಾರಿಗಳ ಶ್ರಮ, ಜಾಗೃತಿ ಕಾರ್ಯಕ್ರಮಗಳು, ಆಶಾ ಕಾರ್ಯಕರ್ತೆಯರ ಶ್ರಮದಿಂದಾಗಿ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಜಿಲ್ಲಾ ಮಟ್ಟದಿಂದ ಹಲವಾರು ಸಭೆ ನಡೆಸಲಾಗಿದೆ. ವೈದ್ಯರು, ಕಂದಾಯ, ಪೊಲೀಸ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಿತ ಹಲವು ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

ಮುನ್ನೆಚ್ಚರಿಕೆ ಲಸಿಕೆ ಅಗತ್ಯ
ಎರಡನೇ ಬಾರಿಗೆ ಕೋವಿಡ್‌ ಲಸಿಕೆ ಪಡೆದ ಬಳಿಕ 7ರಿಂದ 8 ತಿಂಗಳಲ್ಲಿ ಅದರ ಸಾಮರ್ಥ್ಯ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸಲು ಮೂರನೇ ಡೋಸ್‌ ಸಹಕಾರಿಯಾಗಲಿದೆ. 2ನೇ ಡೋಸ್‌ 9 ತಿಂಗಳು ಅಥವಾ 39 ವಾರ ದಾಟಿದ್ದರೆ ಅವರು ಮುನ್ನೆಚ್ಚರಿಕೆ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.

15 ವರ್ಷ ಮೇಲ್ಪಟ್ಟವರ ಲಸಿಕೆಯಲ್ಲೂ ಪ್ರಗತಿ
ಜಿಲ್ಲೆಯಲ್ಲಿ 15 ವರ್ಷ ಮೇಲ್ಪಟ್ಟ ಹಾಗೂ 18 ವರ್ಷ ಕೆಳಗಿನವರ ಲಸಿಕೆಯೂ ಶೇ.88.04 ಪ್ರಗತಿ ಸಾಧಿಸಿದೆ. ಸುಮಾರು 500ಕ್ಕಿಂತ ಅಧಿಕ ಮಂದಿ ಮಕ್ಕಳು ಹಾಸ್ಟೆಲ್‌ನಲ್ಲಿದ್ದು ಊರಿಗೆ ತೆರಳಿದ ಕಾರಣ ಲಸಿಕೆ ಉಡುಪಿ ಜಿಲ್ಲೆಯಲ್ಲಿ ಹಾಕಿಸಿಕೊಂಡಿಲ್ಲ.

ಲಸಿಕೆಯಿಂದ ಕೋವಿಡ್‌ ದುರ್ಬಲ
ಜಿಲ್ಲೆಯಲ್ಲಿ ಈಗ ಕೋವಿಡ್‌ 3ನೇ ಅಲೆ ನಡೆಯುತ್ತಿದೆ. ಈ ಹಿಂದೆ ಪಡೆದ ಲಸಿಕೆಯ ಬಲದಿಂದಾಗಿ ಸೋಂಕು ದುರ್ಬಲವಾಗುತ್ತಿದೆ. ಇದುವರೆಗೆ ಲಸಿಕೆಯೇ ಪಡೆಯದ ಅರ್ಹರು ಹಾಗೂ 2ನೇ ಡೋಸ್‌ ಪಡೆದು 9 ತಿಂಗಳು ಪೂರೈಸಿದವರು ಕಡ್ಡಾಯವಾಗಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಲಸಿಕೆ ಪಡೆದ ಬಳಿಕ ಕೋವಿಡ್‌ ದೃಢಪಟ್ಟರೂ ಜೀವಹಾನಿ ಸಾಧ್ಯತೆ ಇರುವುದಿಲ್ಲ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

Advertisement

ಲಸಿಕೆ ಕಡ್ಡಾಯ
ಜಿಲ್ಲೆಯಲ್ಲಿ ಶೇ.100 ಲಸಿಕೆ ಹಾಕುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರು ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಬೇಕು. ಇದರಿಂದ ಮಾತ್ರ ಸೋಂಕು ನಿಯಂತ್ರಣ ಸಾಧ್ಯ ವಿದೆ.

– ಡಾ| ನಾಗಭೂಷಣ್‌ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next