ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವಿರುದ್ಧದ ಲಸಿಕೆ ಅಭಿಯಾನ ಆರಂಭವಾದಾಗಿನಿಂದ ಈವರೆಗೆ ಲಸಿಕೆ ಪಡೆದವರ ಪೈಕಿ ಪುರುಷರೇ ಮುಂದಿದ್ದಾರೆ. ಮಹಿಳೆಯರು ಈ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಹಿಂದುಳಿದಿದ್ದಾರೆ. ಹೀಗೆಂದು ಕೇಂದ್ರ ಸರಕಾರದ ದತ್ತಾಂಶಗಳೇ ತಿಳಿಸಿವೆ.
ಲಸಿಕೆ ಸ್ವೀಕರಿಸಿದ ಒಟ್ಟು ಜನಸಂಖ್ಯೆಯ ಪೈಕಿ ಶೇ.54ರಷ್ಟು ಮಂದಿ ಪುರುಷರಾಗಿದ್ದು, 10.1 ಕೋಟಿ ಪುರುಷರು ವ್ಯಾಕ್ಸಿನ್ (ಭಾಗಶಃ ಅಥವಾ ಪೂರ್ಣ) ಪಡೆದುಕೊಂಡಿದ್ದಾರೆ. ಇವರಿಗೆ ಹೋಲಿಸಿದರೆ ಮಹಿಳೆಯರ ಶೇಕಡಾವಾರು ಶೇ.17ರಷ್ಟು ಕಡಿಮೆಯಿದೆ. ದಿಲ್ಲಿ, ಉತ್ತರಪ್ರದೇಶದಂಥ ಕೆಲವು ರಾಜ್ಯಗಳಲ್ಲಿ ಅಸಮಾನತೆ ಹೆಚ್ಚಿದ್ದರೆ, ಕೇರಳ ಮತ್ತು ಛತ್ತೀಸ್‌ಗಢದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ ಎಂದು “ರಾಯಿಟರ್ಸ್’ ವರದಿ ಮಾಡಿದೆ.
ಏಕೆ ಹೀಗೆ?: ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಪುರುಷರು ಕೆಲಸಕ್ಕಾಗಿ ಹೊರಹೋಗುವ ಕಾರಣ, ಸ್ತ್ರೀಯರಿಗಿಂತ ಮುನ್ನ ತಾವೇ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ, ಮಹಿಳೆಯರು ಲಸಿಕೆ ಪಡೆಯುವುದರಿಂದ ಅವರ ಋತು ಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಫಲವತ್ತತೆ ಕುಂದುತ್ತದೆ ಎಂಬ ವದಂತಿಗಳು ಹೆಣ್ಣು ಮಕ್ಕಳು ಲಸಿಕೆಯಿಂದ ದೂರವುಳಿಯಲು ಕಾರಣ ಎಂದು ಗುಜರಾತ್‌ನ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಸರಕಾರವೇನು ಮಾಡಬೇಕು?: ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಕುರಿತು ಜನಜಾಗೃತಿ ಹೆಚ್ಚಿಸುವ ಕೆಲಸವನ್ನು ಸರಕಾರಗಳು ಮಾಡಬೇಕು, ಲಸಿಕೆಯ ಮಹತ್ವವನ್ನು ತಿಳಿಸಿ ಅದನ್ನು ಪಡೆಯುವಂತೆ ಉತ್ತೇಜನ ನೀಡಬೇಕು. ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕೆಲಸವಾಗಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಈವರೆಗೆ ದೇಶದಲ್ಲಿ 233.7 ದಶಲಕ್ಷ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
ಹೊಸ ರೂಪಾಂತರಿ ಪತ್ತೆ: ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಬಿ.1.1.28.2 ಎಂಬ ಹೊಸ ರೂಪಾಂತರಿ ಪತ್ತೆಯಾಗಿದ್ದು, ಅಪಾಯಕಾರಿಯಾಗಿರುವ ಸಾಧ್ಯತೆಯಿದೆ ಎಂದು ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಹೇಳಿದೆ. ಬ್ರೆಜಿಲ್ ಯುಕೆಯಿಂದ ಭಾರತಕ್ಕೆ ಬಂದ ಪ್ರಯಾಣಿಕರಲ್ಲಿ ಈ ರೂಪಾಂತರಿ ಕಂಡುಬಂದಿದೆ.
ಸಂಸದರಿಗೆ ಸ್ಪೀಕರ್ ಪತ್ರ: ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ನೀವು ಕೈಗೊಂಡಿರುವ ಕೊರೊನಾ ಪರಿಹಾರ ಕಾರ್ಯಗಳ ವಿವರವನ್ನು ಸಲ್ಲಿಸಿ ಎಂದು ಸಂಸತ್ ಸದಸ್ಯರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪತ್ರ ಬರೆದಿದ್ದಾರೆ.