ಉಡುಪಿ : ಜಿಲ್ಲೆಯಲ್ಲಿ 8,28,826 ಮಂದಿಗೆ ಕೊರೊನಾ ಲಸಿಕೆಯ 2ನೇ ಡೋಸ್ ನೀಡಲಾಗಿದೆ. ನಿರ್ದಿಷ್ಟ ಗುರಿಯ ಶೇ.82.97ರಷ್ಟು ಸಾಧನೆಯಾಗಿದೆ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಸಿದ್ಧತೆ ಅರಂಭಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
9.99 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡುವ ಗುರಿ ನಿಗದಿ ಮಾಡಲಾಗಿದೆ. 9,59,341 ಮಂದಿ(ಶೇ.96.03) ಈಗಾಗಲೇ ಮೊದಲ ಡೋಸ್ ಪಡೆದಿದ್ದಾರೆ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಯಾವುದೇ ಅಧಿಕೃತ ಮಾರ್ಗಸೂಚಿ ಇನ್ನು ಬಂದಿಲ್ಲ. ಆದರೂ, ಜಿಲ್ಲೆಯಲ್ಲಿ ಲಸಿಕೆ ಪಡೆಯಲು ಅರ್ಹರಿರುವ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ ಎಂದರು.
ಮೊದಲ ಡೋಸ್ ಪಡೆದವರಲ್ಲಿ 78,896 ಮಂದಿ ಎರಡನೇ ಡೋಸ್ ಪಡೆಯಲು ಬಾಕಿಯಿದೆ. ಲಸಿಕೆ ಪಡೆಯಲು ಬರುವವರಿಗೆ ಕೊರೊನಾ ಪರೀಕ್ಷೆ ಮಾಡಿಸುವುದಿಲ್ಲ. ಮೊದಲ ಡೋಸ್ ಪಡೆದು ನಿರ್ದಿಷ್ಟ ಅವಧಿ ಪೂರ್ಣಗೊಂಡಿರುವವರು ತತ್‌ಕ್ಷಣವೆ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ಲಸಿಕೆ ಪಡೆಯಬೇಕು. ಕನ್ನಡ, ತುಳು, ಕುಂದಾಪುರ ಕನ್ನಡ, ಉರ್ದು ಮತ್ತು ಕೊಂಕಣಿ ಭಾಷೆಯಲ್ಲಿ ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಆಡಿಯೋ ವಿಶುವಲ್ ತಯಾರಿಸಿ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ ಎಂದರು.
ಪ್ರಧಾನಿಯವರ ಸೂಚನೆಯಂತೆ 15ರಿಂದ 18 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿ ಬಂದ ತತ್‌ಕ್ಷಣ ಕ್ರಮವಹಿಸಲಾಗುತ್ತದೆ.
ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟ ಕೋಮಾರ್ಬಿಡ್ ಇರುವವರಿಗೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ನೀಡುವ ಬಗ್ಗೆಯೂ ಕೇಂದ್ರ ಹಾಗೂ ರಾಜ್ಯದಿಂದ ಮಾರ್ಗಸೂಚಿ ಬಂದ ತತ್‌ಕ್ಷಣ ಕ್ರಮವಹಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಹೊಟ್ಟೆಗೆ ಏನು ತಿನ್ನುತ್ತಿಯಾ : ಕಸ ಎಸೆದವನಿಗೆ ಸಿ.ಟಿ.ರವಿ ತರಾಟೆ
ಜಿಲ್ಲೆಯಲ್ಲಿ 55 ಸಕ್ರಿಯ ಪ್ರಕರಣಗಳಿದ್ದು, ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.0.2ರಷ್ಟಿದೆ. ಒಮಿಕ್ರಾನ್ ಸೋಂಕು ಕಾಣಿಸಿಕೊಂಡವರನ್ನು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಅವರ ಅರೋಗ್ಯ ಚೆನ್ನಾಗಿದೆ. ಇನ್ನು 58 ಪರೀಕ್ಷಾ ವರದಿಗಳು ಬರಬೇಕಿದೆ. ಈವರೆಗೆ 180 ಮಂದಿಗೆ ಒಮಿಕ್ರಾನ್ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಇಬ್ಬರಲ್ಲಿ ಮಾತೃ ದೃಢಪಟ್ಟಿದೆ ಎಂದು ವಿವರಿಸಿದರು.
ಜಿಪಂ ಸಿಇಒ ಡಾ| ನವೀನ್ ಭಟ್ , ಜಿಲ್ಲಾ ಸಹ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.