Advertisement

Covid Update: ಎ. 10, 11ಕ್ಕೆ ದೇಶಾದ್ಯಂತ ಮಾಕ್‌ ಡ್ರಿಲ್‌

10:00 PM Apr 07, 2023 | Team Udayavani |

* ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗೆ ತೀರ್ಮಾನ

Advertisement

* ಇಂದು, ನಾಳೆ ಜಿಲ್ಲಾ ಮಟ್ಟದಲ್ಲಿ ಸಿದ್ಧತೆ ಪರಿಶೀಲನೆಗೂ ಸೂಚನೆ

ಹೊಸದಿಲ್ಲಿ: ದೇಶದಲ್ಲಿ ಮತ್ತೆ ಕೊರೊನಾ ಸದ್ದು ಮಾಡುತ್ತಿದ್ದು, ಕಳೆದ ಸೆಪ್ಟೆಂಬರ್‌ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ 6,000ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಅಂದರೆ, 203 ದಿನಗಳ ಬಳಿಕ ಶುಕ್ರವಾರ ದೇಶದಲ್ಲಿ 6,050 ಪ್ರಕರಣಗಳು ದೃಢಪಟ್ಟಿದ್ದು, ಕರ್ನಾಟಕದ ಇಬ್ಬರು ಸೇರಿದಂತೆ 14 ಮಂದಿ ಮೃತರಾಗಿದ್ದಾರೆ.

ಕೊರೊನಾ ಹೆಚ್ಚಳದ ನಡುವೆಯೇ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ, ಶುಕ್ರವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರು, ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಕೊರೊನಾ ಮುನ್ನೆಚ್ಚರಿಕೆ ಜತೆಯಲ್ಲಿ ಎ. 10 ಮತ್ತು 11ರಂದು ದೇಶದ ಆಸ್ಪತ್ರೆಗಳಲ್ಲಿ ರೋಗ ಸಿದ್ಧತಾ ಪರೀಕ್ಷೆ (ಮಾಕ್‌ ಡ್ರಿಲ್‌) ನಡೆಸಲು ತೀರ್ಮಾನಿಸಲಾಗಿದೆ.

ಸಭೆ ಬಳಿಕ ಮಾತನಾಡಿದ ಸಚಿವರು, ಇನ್‌ಫ‌ುÉಯೆನ್ಸಾ ಮಾದರಿ ಸೋಂಕಿನ ಸಮಸ್ಯೆ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಜತೆಗೆ ಅವುಗಳ ಉಗಮ ಸ್ಥಾನ, ತೀವ್ರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಸಮಸ್ಯೆಗಳ ಬಗ್ಗೆ ಕೂಡ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ. ಕೊರೊನಾ ಪರೀಕ್ಷೆ ಹಾಗೂ ಲಸಿಕೆಗಳನ್ನು ನೀಡುವುದರ ಬಗ್ಗೆ ಮತ್ತೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಹೇಳಿದ್ದಾರೆ.

Advertisement

ಪರಿಸ್ಥಿತಿ ಕೈಮೀರದಂತೆ ಇರಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳ ಲಭ್ಯತೆ, ಮೆಡಿಕಲ್‌ ಆಕ್ಸಿಜನ್‌ ಜತೆಗೆ ಹಾಸಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಲಭ್ಯತೆ ಬಗ್ಗೆ ಎ. 10, 11ರಂದು ಪರಿಶೀಲನೆ ನಡೆಸಬೇಕು. ಎ. 8, 9ರಂದು ಜಿಲ್ಲಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.

ಐದು ಹಂತ

ಪರಿಸ್ಥಿತಿ ನಿಯಂತ್ರಿಸಲು ಸೋಂಕು ಪತ್ತೆ (ಟೆಸ್ಟ್‌), ನಿಗಾ (ಟ್ರ್ಯಾಕ್‌), ಚಿಕಿತ್ಸೆ (ಟ್ರೀಟ್‌ಮೆಂಟ್‌), ಲಸಿಕೆ (ವಾಕ್ಸಿನೇಷನ್‌), ಕೊರೊನಾ ನಿಯಮಗಳನ್ನು ಅನುಸರಿಸುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮಾಸ್ಕ್ ಕಡ್ಡಾಯ

ಕೇಂದ್ರಾಡಳಿತ ಪ್ರದೇಶ ಪುದುಚ್ಚೇರಿಯಲ್ಲಿ ತತ್‌ಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಕೊರೊನಾ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನಾಲ್ಕನೇ ಅಲೆ ಸಾಧ್ಯತೆ ಇಲ್ಲ

ದೇಶದಲ್ಲಿ ಮುಂದಿನ 20 ದಿನಗಳು ಅತ್ಯಂತ ಪ್ರಮುಖವಾದದ್ದು. ಈ ಅವಧಿಯಲ್ಲಿ ಸೋಂಕು ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಇವೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ. ಆದರೆ, ನಾಲ್ಕನೇ ಅಲೆಯ ಬೆದರಿಕೆ ಇಲ್ಲವೆಂದು ಅಭಯ ನೀಡಿದ್ದಾರೆ. ಜತೆಗೆ, 2021ರಲ್ಲಿ ದೇಶದಲ್ಲಿ ಡೆಲ್ಟಾ ಅಲೆಯಲ್ಲಿ ಕಂಡು ಬಂದಂತೆ ಸಮಸ್ಯೆ ಉಂಟಾಗದು. ಸದ್ಯ ಏರಿಕೆಯಾಗುತ್ತಿರುವ ಸೋಂಕು ಸಂಖ್ಯೆ ಪಿಡುಗು ತನ್ನ ಅಂತಿಮ ಹಂತ ಪ್ರವೇಶ ಮಾಡಿರುವುದನ್ನು ಸೂಚಿಸುತ್ತದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಪ್ರತಿಪಾದಿಸಿದ್ದಾರೆ. ಸೆ. 16ರಂದು ದೇಶದಲ್ಲಿ 6,298 ಕೇಸು ಪತ್ತೆಯಾಗಿದ್ದವು. ಈ ಬಳಿಕ ದೇಶದಲ್ಲಿ ಕೊರೊನಾ ಕೇಸುಗಳ ಸಂಖ್ಯೆ ಇಳಿಕೆಯಾಗಿತ್ತು. ಸದ್ಯ 28,303 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next