ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಸಾಮರ್ಥ್ಯ ಹೆಚ್ಚಾಗಿದ್ದು, ಕೋವಿಡ್‌ಯೇತರ ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಿಮ್ಸ್‌ನಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣ ಮಹಾನಗರದ ಬಡ ಹಾಗೂ ಮಧ್ಯಮ ವರ್ಗದ ಜನರು ಅನಿವಾರ್ಯವಾಗಿ ಪಾಲಿಕೆ ಆರೋಗ್ಯ ಕೇಂದ್ರಗಳತ್ತ ಮುಖ ಮಾಡುವಂತಾಯಿತು. ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ಗಂಭೀರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡುವತ್ತ ಗಮನ ಹರಿಸಲಾಯಿತು. ಕಿಮ್ಸ್‌ನಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವಿದ್ದರೂ ಅಲ್ಲಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೋವಿಡ್‌ಯೇತರ ರೋಗಿಗಳಿಗೆ ಸೂಕ್ತ ಚಿಕಿತ್ಸೆಗಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇನ್ನತರೆ ವ್ಯವಸ್ಥೆಯನ್ನು ಮೇಲ್ದರ್ಜೆ ಗೇರಿಸುವ ಅನಿವಾರ್ಯತೆ ಉಂಟಾಗಿತ್ತು.
ಕೋವಿಡ್ ಪೂರ್ವದಲ್ಲಿ ಪಾಲಿಕೆ ಎಲ್ಲಾ ಆಸ್ಪತ್ರೆಯಲ್ಲಿ ಸುಮಾರು 250-300 ಜನರು ವಿವಿಧ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ಹೊರ ರೋಗಿಗಳ ಸಂಖ್ಯೆ 420-450ಕ್ಕೆ ತಲುಪಿದೆ. ಪ್ರಮುಖವಾಗಿ ಚಿಟಗುಪ್ಪಿ ಆಸ್ಪತ್ರೆ ಮೇಲೆ ಸಾಕಷ್ಟು ಒತ್ತಡ ಉಂಟಾಗಿದೆ. ಇಲ್ಲಿ 120-140ರಷ್ಟಿದ್ದ ಹೊರ ರೋಗಿಗಳ ಸಂಖ್ಯೆ 250 ದಾಟಿದೆ. ಆಸ್ಪತ್ರೆ ಸಿಬ್ಬಂದಿಗೆ ಪ್ರತ್ಯೇಕ ಸಮವಸ್ತ್ರ, ಮುಂಜಾಗ್ರತೆ, ಆಸ್ಪತ್ರೆಗಳಲ್ಲಿ ಸ್ವತ್ಛತೆ ಸೇರಿದಂತೆ ಹಲವು ಬದಲಾವಣೆಗೆ ಕೋವಿಡ್ ಕಾರಣವಾದಂತಾಗಿದೆ.