Advertisement

ಮೌಲ್ಯಮಾಪಕರಿಗೆ ಕೋವಿಡ್; 250ಕ್ಕೂ ಹೆಚ್ಚು ಉಪನ್ಯಾಸಕರಿಗೆ ಸೋಂಕು; 35 ಸಾವು

11:49 PM Oct 16, 2020 | mahesh |

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಮೌಲ್ಯಮಾಪನ ಮಾಡಿದ ಉಪನ್ಯಾಸಕರು ಈಗ ಕೋವಿಡ್ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಪೂರಕ ಪರೀಕ್ಷೆ ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದ 250ಕ್ಕೂ ಅಧಿಕ ಉಪನ್ಯಾಸಕರಿಗೆ ಕೊರೊನಾ ದೃಢ ಪಟ್ಟಿದ್ದು, 35ಕ್ಕೂ ಅಧಿಕ ಉಪನ್ಯಾಸಕರು ಸಾವನ್ನಪ್ಪಿ ದ್ದಾರೆ. ಉಪನ್ಯಾಸಕರಲ್ಲಿ ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆತಂಕ ಸೃಷ್ಟಿದೆ.

Advertisement

ಮೌಲ್ಯಮಾಪನ ಕೇಂದ್ರದಲ್ಲಿ ಆನ್‌ಲೈನ್‌ನಲ್ಲಿ ಅಂಕ ನಮೂದಿಸುವ ಸಂದರ್ಭದಲ್ಲಿ ಎಲ್ಲರಿಗೂ ಪ್ರತ್ಯೇಕ ಕಂಪ್ಯೂಟರ್‌ ಇರಲಿಲ್ಲ. ಇರುವ ಕಂಪ್ಯೂಟರ್‌ಗಳನ್ನು ಎಲ್ಲರೂ ಬಳಸುತ್ತಿದ್ದರು. ಈ ವೇಳೆ ಕೊರೊನಾ ಹಬ್ಬಿದೆ ಎಂದು ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದ ಉಪನ್ಯಾಸಕರೊಬ್ಬರು ಮಾಹಿತಿ ನೀಡಿದ್ದಾರೆ. ಉಪನ್ಯಾಸಕರು ಜೀವದ ಹಂಗು ತೊರೆದು ಮೌಲ್ಯಮಾಪನ ಪೂರೈಸಿ, ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರವೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಉಪನ್ಯಾಸಕರ ಸಂಘ ಆಗ್ರಹಿಸಿದೆ.

ಸಚಿವರಿಗೆ, ಸಿಎಂಗೆ ಮನವಿ
ಹಲವು ಉಪನ್ಯಾಸಕರು ಕೊರೊನಾದಿಂದ ಮೃತ ಪಟ್ಟಿದ್ದಾರೆ. ಅವರನ್ನು ಕೊರೊನಾ ವಾರಿಯರ್‌ ಎಂದು ಪರಿಗಣಿಸಿ, ಸರಕಾರವು ನಿಗದಿಪಡಿಸಿರುವ 30 ಲಕ್ಷ ರೂ. ಪರಿಹಾರ ನೀಡಬೇಕು. ಚಿಕಿತ್ಸೆ ಪಡೆಯುತ್ತಿರುವ ಉಪನ್ಯಾಸಕರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ರಾಜ್ಯ ಪಿಯು ಉಪನ್ಯಾಸಕರ ಸಂಘವು ಸಿಎಂ ಮತ್ತು ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ.

ಪಿಯು ಉಪನ್ಯಾಸಕರಿಗೂ ರಜೆ
ಬೆಂಗಳೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೂ ಅ. 21ರಿಂದ ನ. 1ರ ವರೆಗೆ ರಜೆ ನೀಡಿ ಸರಕಾರವು ಆದೇಶ ಹೊರಡಿಸಿದೆ.
ಪದವಿಪೂರ್ವ ತರಗತಿಗಳು ಆರಂಭವಾಗದಿದ್ದರೂ ಉಪನ್ಯಾಸಕರು ನಿತ್ಯ ಆನ್‌ಲೈನ್‌ ತರಗತಿ ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಬಹುತೇಕ ಉಪನ್ಯಾಸಕರು ಕೋವಿಡ್‌ ತಡೆ ಕಾರ್ಯದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಪಿಯು ಉಪನ್ಯಾಸಕರಿಗೂ ಮಧ್ಯಾಂತರ ರಜೆ ವಿಸ್ತರಿಸಬೇಕು ಎಂದು ಕೋರಿ ಪಿಯು ಉಪನ್ಯಾಸಕರ ಸಂಘದಿಂದ ಮನವಿ ಸಲ್ಲಿಸಲಾಗಿತ್ತು. ಅದರಂತೆ ಪಿಯು ಉಪನ್ಯಾಸಕರಿಗೆ ಅ. 21ರಿಂದ ನ.1ರ ವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ ಎಂದು ಸಚಿವ ಎಸ್‌. ಸುರೇಶ್‌ ಕುಮಾರ್‌ ಶುಕ್ರವಾರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪೂರಕ ಪರೀಕ್ಷೆಯ ಮೌಲ್ಯಮಾಪಕರಾಗಿ ಸೇವೆ ಸಲ್ಲಿಸಿದವರು ಯಾವುದೇ ಮನವಿ ನೀಡಿದರೂ ಅದನ್ನು ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಮುಂದಿನ ನಿರ್ಧಾರಕ್ಕಾಗಿ ಕಳುಹಿಸಿಕೊಡಲಾಗುವುದು. ಈವರೆಗೆ ಅಂಥ ಮನವಿ ಬಂದಿಲ್ಲ.
-ಆರ್‌. ಸ್ನೇಹಲ್‌, ಪಿಯು ಇಲಾಖೆಯ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next