ಹಾಸನ: ನಗರದ ಹೊರ ವಲಯ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಹಿಮತ್‌ಸಿಂಗ್ ಕಾ ಜವಳಿ ಕಾರ್ಖಾನೆಯಲ್ಲಿ 130ಕ್ಕೂ ಹೆಚ್ಚು ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕಾರ್ಖಾನೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಸೋಂಕಿತ ಕಾರ್ಮಿಕರಿಗೆ ತಾನೇ ಚಿಕಿತ್ಸಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದ ಕಾರ್ಖಾನೆಯ ಆಡಳಿತ ಮಂಡಳಿ ಸೋಂಕಿತ ಕಾರ್ಮಿಕರನ್ನು ನೆಲದ ಮೇಲೆ ಮಲಗಿಸಿ ಐಸೋಲೇಷನ್ ಮಾಡಿ ಅಮಾನವೀಯತೆ ಮೆರೆದಿದೆ ಎಂದು ದೂರಲಾಗಿದೆ.
ಚಿಕಿತ್ಸೆಯ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದ ಆಡಳಿತ ಮಂಡಳಿಯು ಕಾರ್ಮಿಕರನ್ನು ರಟ್ಟಿನ ಮೇಲೆ ಕಾರ್ಮಿಕರನ್ನು ಒಬ್ಬರ ಪಕ್ಕ, ಒಬ್ಬರನ್ನು ಮಲಗಿಸಿದ ವಿಡಿಯೋಗಳು ಹರಿದಾಡುತ್ತಿವೆ. ಈಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಈಗ ಅಲ್ಲಿಗೆ ವೈದ್ಯಕೀಯ ತಂಡವನ್ನು ಕಳುಹಿಸಿದ್ದು, ಕಾರ್ಖಾನೆಯ ಆಡಳಿತ ಮಂಡಳಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗದಿದ್ದರೆ ಜಿಲ್ಲಾಡಳಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಸೂಚಿಸಿದ್ದಾರೆ.
ಸಂಪರ್ಕಕ್ಕೆ ಸಿಗದ 70 ಸೋಂಕಿತರು: ಕೋವಿಡ್ ಸೋಂಕು ದೃಢಪಟ್ಟಿರುವ 70 ಮಂದಿ ಚಿಕಿತ್ಸೆಗೆ ಬರದೆ ನಾಪತ್ತೆಯಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಗಂಟಲ ದ್ರವ ಕೊಡುವ ಸಂದರ್ಭದಲ್ಲಿ ಕೆಲವರು ತಮ್ಮ ಮೊಬೈಲ್ ನಂಬರ್ ಕೊಡದೆ ಬೇರೆಯವರ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಅಂತಹ 70 ಜನರಿಗೆ ಪಾಸಿಟಿವ್ ಬಂದಿದೆ. ಈಗ ಅವರನ್ನು ಹುಡುಕುವುದು ಜಿಲ್ಲಾಡಳಿತಕ್ಕೆ ತಲೇನೋವಾಗಿದೆ.