ನವದೆಹಲಿ: “ದೇಶದಲ್ಲಿ ಒಮಿಕ್ರಾನ್ ಪಾಸಿಟಿವಿಟಿ ದರ ತುಂಬಾ ಕಡಿಮೆಯಿದ್ದು, ಇದರಿಂದಾಗಿ ಒಮಿಕ್ರಾನ್ ನಿಂದಲೇ ದೇಶದಲ್ಲಿ ಕೊರೊನಾ ಮೂರನೇ ಅಲೆ ಏಳುತ್ತದೆ ಎಂಬ ಆತಂಕವೇನಿಲ್ಲ” ಎಂದು ತಜ್ಞರು ತಿಳಿಸಿದ್ದಾರೆ. ಇದರಿಂದ, ಕೊರೊನಾ ಹೊಸ ತಳಿಯ ಹಾವಳಿ ಬಗ್ಗೆ ಆತಂಕಗೊಂಡಿದ್ದ ಸಾರ್ವಜನಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
“ದೇಶದಲ್ಲಿ ಕೊರೊನಾ ಎರಡನೇ ಅಲೆಯು ತೀವ್ರ ವಿನಾಶಕಾರಿ ಹೊಡೆತವನ್ನು ಕೊಟ್ಟಿತ್ತು. ಆದರೆ, ಆಗಸ್ಟ್‌ನ ನಂತರ ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾಗಿದೆ.
ಸೆಪ್ಟಂಬರ್‌ನಲ್ಲಿ ಅದು ಮತ್ತಷ್ಟು ಇಳಿದಿದೆ. ಕೊರೊನಾ ತಡೆಯಲು ಸರ್ಕಾರಗಳು ಅನುಸರಿಸಿದ ಬಿಗಿ ನಿಯಮ ಹಾಗೂ ಬಹುತೇಕ ಸಾರ್ವಜನಿಕರು ಕೊರೊನಾ ನಿರ್ಬಂಧಗಳನ್ನು ಪಾಲಿಸಿದ್ದು ಅದಕ್ಕೆ ಕಾರಣ. ಅದಾದ ನಂತರ ಲಸಿಕೆಯನ್ನು ಬಹುತೇಕ ಮಂದಿ ಪಡೆದದ್ದೂ ಸಹಾಯಕವಾಗಿದೆ.
ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಕೇಕ್ ತಯಾರಿಕೆಗೆ ಬರೋಬ್ಬರಿ 48 ಗಂಟೆ ಬೇಕಾಗಿತ್ತಂತೆ!
ಈ ಎಲ್ಲಾ ಕಾರಣಗಳಿಂದ ಮಹಾರಾಷ್ಟ್ರ, ಕೇರಳ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮಟ್ಟದಲ್ಲಿ ಕೊರೊನಾ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾಗಿ, ಮೂರನೇ ಅಲೆ ಬರುವ ಭೀತಿ ಬಹುತೇಕ ದೂರವಾಗಿದೆ. ಆದರೂ, ಸಾರ್ವಜನಿಕರು ಕೇವಲ ಮೊದಲ ಡೋಸ್ ಪಡೆದಿದ್ದರೆ ಅಂಥವರು ಎರಡನೇ ಡೋಸ್ ಹಾಕಿಸಿಕೊಳ್ಳಬೇಕು, ಸಾಮಾಜಿಕ ಅಂತರ-ಮಾಸ್ಕ್ ಕಡ್ಡಾಯ ಹಾಗೂ ಇನ್ನಿತರ ಕೊರೊನಾ ನಿರ್ಬಂಧ ನಿಯಮಗಳನ್ನು ಪಾಲಿಸಬೇಕು” ಎಂದು ತಜ್ಞರು ತಿಳಿಸಿದ್ದಾರೆ.
ಇನ್ನು, ಒಮಿಕ್ರಾನ್ ಅಪಾಯಕಾರಿಯಲ್ಲ ಎಂದು ದಕ್ಷಿಣ ಆಫ್ರಿಕಾದ ಮೇರು ವೈದ್ಯಕೀಯ ಆಸ್ಪತ್ರೆಗಳ ಸಮೂಹವಾದ ನೆಟ್‌ಕೇರ್‌ನ ತಜ್ಞರು ತಿಳಿಸಿದ್ದಾರೆ. ನಮ್ಮಲ್ಲಿ ದಾಖಲಾಗುತ್ತಿರುವ ಒಮಿಕ್ರಾನ್ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳು ತುಂಬಾ ಕ್ಷೀಣವಾಗಿ ಗೋಚರಿಸುತ್ತಿವೆ. ಇದು ಜಗತ್ತನ್ನು ಬಾಧಿಸುವುದರಿಂದ ತಡೆಯಬಹುದು. ಇದಕ್ಕೆ ಎಲ್ಲ ದೇಶಗಳ ಜನರ ಸಂಘಟಿತ ಸಹಕಾರ ಅಗತ್ಯ ಎಂದಿದ್ದಾರೆ.