ಬೆಂಗಳೂರು: ನಾಲ್ಕು ತಿಂಗಳಿಂದ ನಿತ್ಯ ಸರಾಸರಿ 87 ಸಾವಿರ ಕೊರೊನಾ ಸೋಂಕು ಪರೀಕ್ಷೆ ನಡೆ ಯುವ ಮೂಲಕ ರಾಜ್ಯದ ಒಟ್ಟಾರೆ ಪರೀಕ್ಷೆಗಳು ಎರಡು ಕೋಟಿ ಗಡಿಗೆ ಸಮೀಪಿಸಿವೆ. ಇದರೊಂದಿಗೆ ಅತಿ ಹೆಚ್ಚು ಸೋಂಕು ಪರೀಕ್ಷೆ ಪಡೆಸಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಆರಂಭವಾದ ಕೋವಿಡ್ ಪರೀಕ್ಷೆಗಳು ನ. 21 ರಂದು ಒಂದು ಕೋಟಿಗೆ ತಲುಪಿದ್ದವು. ಆ ಬಳಿಕ 4 ತಿಂಗಳ ಅವಧಿಯಲ್ಲಿಯೇ ನಿತ್ಯ ಸರಾಸರಿ 87 ಸಾವಿರ ಪರೀಕ್ಷೆಗಳು ನಡೆಯುವ ಮೂಲಕ 2 ಕೋಟಿ ಹೊಸ್ತಿಲಿಗೆ ಬಂದು ನಿಂತಿವೆ. ಮಂಗಳವಾರ ಅಂತ್ಯಕ್ಕೆ ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 1,99,21,424 ತಲುಪಿದ್ದು, ಬುಧವಾರ ಅಥವಾ ಗುರುವಾರ 2 ಕೋಟಿಯ ಗಡಿದಾಟುವ ಸಾಧ್ಯತೆಗಳಿವೆ.
ಸದ್ಯ ದೇಶದಲ್ಲಿ ಅತಿ ಹೆಚ್ಚು ಪರೀಕ್ಷೆ ನಡೆಸಿದ ರಾಜ್ಯಗಳ ಪೈಕಿ ಕರ್ನಾಟಕ 3ನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ (3.3 ಕೋಟಿ), ಬಿಹಾರ (2.3) ಮೊದಲ ಎರಡು ಸ್ಥಾನದಲ್ಲಿವೆ. ರಾಜ್ಯದಲ್ಲಿ ಪ್ರತಿ ಹತ್ತು ಲಕ್ಷ ಜನರಲ್ಲಿ 3.01 ಲಕ್ಷ ಮಂದಿಯನ್ನು ಕರ್ನಾಟಕದಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದು, ಬಿಹಾರದಲ್ಲಿ ಪ್ರತಿ ಹತ್ತು ಲಕ್ಷ ಮಂದಿಯಲ್ಲಿ 1.91 ಲಕ್ಷ ಮಂದಿ ಪರೀಕ್ಷೆಗೊಳಗಾಗಿದ್ದಾರೆ.
ಪರೀಕ್ಷೆಗೆ ತಕ್ಕ ಫಲ: ಕಳೆದ ವರ್ಷ ರಾಜ್ಯದಲ್ಲಿ ನಿತ್ಯ 10 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು, 100ಕ್ಕೂ ಹೆಚ್ಚು ಸೋಂಕಿತರ ಸಾವು ವರದಿಯಾಗಿದ್ದ ಸಂದರ್ಭದಲ್ಲಿ “ಸೋಂಕು ಪರೀಕ್ಷೆ ಹೆಚ್ಚಳವನ್ನೇ” ಪ್ರಮುಖ ಅಸ್ತ್ರವಾಗಿ ರಾಜ್ಯ ಸರ್ಕಾರ ಬಳಸಕೊಂಡಿತ್ತು. ಅಕ್ಟೋಬರ್, ನವೆಂಬರ್‌ನಲ್ಲಿ ನಿತ್ಯ ಒಂದು ಲಕ್ಷ ಪರೀಕ್ಷೆ ನಡೆಸುವ ಮೂಲಕ ಶೀಘ್ರ ಸೋಂಕಿತರನ್ನು ಪತ್ತೆ ಮಾಡಿ ಕ್ವಾರಂಟೈನ್ ಒಳಪಡಿಸಿ, ಚಿಕಿತ್ಸೆ ನೀಡಿ ಇನ್ನೊಬ್ಬರಿಗೆ ಸೋಂಕು ಹರಡದಂತೆ ಮತ್ತು ಸೋಂಕಿತ ಸಾವಿಗೀಡಾಗದಂತೆ ಕ್ರಮವಹಿಸಲಾಗಿತ್ತು. ಪರೀಕ್ಷೆಗೆ ಸಿಕ್ಕ ಫಲ ಎಂಬಂತೆ ನವೆಂಬರ್‌ನಲ್ಲಿ ಹೊಸ ಪ್ರಕರಣಗಳನ್ನು ಶೇ.50, ಡಿಸೆಂಬರ್‌ನಲ್ಲಿ ಶೇ.80 ರಷ್ಟು ಇಳಿಕೆಯಾದವು. ಆ ಬಳಿಕವು ನಿತ್ಯ 75 ಸಾವಿರ ಪರೀಕ್ಷೆಗಳು ರಾಜ್ಯದಲ್ಲಿ ನಡೆದಿದ್ದು, ಫೆಬ್ರವರಿಯಲ್ಲಿ ನಿತ್ಯ ಹೊಸ ಪ್ರಕರಣಗಳು 500ಕ್ಕೆ ಕುಸಿದವು.
ಖಾಸಗಿ ಲ್ಯಾಬ್‌ಗಳಲ್ಲಿ 73 ಲಕ್ಷ ಪರೀಕ್ಷೆ: ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 100ಕ್ಕೂ ಹೆಚ್ಚು ಲ್ಯಾಬ್‌ಗಳಲ್ಲಿ ಕೊರೊನಾ ಪರೀಕ್ಷೆ ಮಾಡಲಾ ಗಿತ್ತದೆ. ಈವರೆಗೂ ನಡೆದಿರುವ ಪರೀಕ್ಷೆಗಳ ಪೈಕಿ ಶೇ 37 ರಷ್ಟು ಅಂದರೆ 73 ಲಕ್ಷ ಪರೀಕ್ಷೆಗಳು ಖಾಸಗಿ ಲ್ಯಾಬ್‌ಗಳಲ್ಲಿ ನಡೆದಿವೆ. ಬಾಕಿ 1.26 ಪರೀಕ್ಷೆಗಳು (ಶೇ.63) ಸರ್ಕಾರಿ ಲ್ಯಾಬ್‌ಗಳಲ್ಲಿ ನಡೆದಿವೆ. ಒಟ್ಟಾರೆ ಪರೀಕ್ಷೆಯಲ್ಲಿ 40 ಲಕ್ಷ (ಶೇ20 ರಷ್ಟು) ರ್ಯಾಪಿಡ್ ಪರೀಕ್ಷೆಗಳು ನಡೆದಿವೆ.
ರಾಜಧಾನಿಯಲ್ಲಿಯೇ ಶೇ 41 ರಷ್ಟು ಪರೀಕ್ಷೆ: ಈವರೆಗೂ ರಾಜ್ಯದಲ್ಲಿ ನಡೆದಿರುವ ಒಟ್ಟಾರೆ ಪರೀಕ್ಷೆಗಳ ಪೈಕಿ ಶೇ. 41 ರಷ್ಟು ಅಂದರೆ, 82 ಲಕ್ಷ ಪರೀಕ್ಷೆಗಳು ರಾಜಧಾನಿ ಬೆಂಗಳೂರಿನಲ್ಲಿ ನಡೆದಿವೆ. ಉಳಿದಂತೆ ಮೈಸೂರು, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ, ಧಾರವಾಡ, ಬಳ್ಳಾರಿ, ದಾವಣಗೆರೆ, ಕಲಬುರಗಿಯಲ್ಲಿ ಹೆಚ್ಚು ಪರೀಕ್ಷೆಗಳು ನಡೆದಿವೆ. ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚು 1.34 ಸಾವಿರ ಪರೀಕ್ಷೆಗಳು ಈವರ್ಷ ಜನವರಿ 6ರಂದು ನಡೆದಿದ್ದವು.
ತಿಂಗಳು – ಪರೀಕ್ಷೆಗಳು: 2020ರಲ್ಲಿ ಮಾರ್ಚ್ 2,310 , ಏಪ್ರಿಲ್- 55,025, ಮೇ – 2.4 ಲಕ್ಷ, ಜೂನ್ – 3.2 ಲಕ್ಷ, ಜುಲೈ 8 ಲಕ್ಷ, ಆಗಸ್ಟ್ 16 ಲಕ್ಷ, ಸೆಪ್ಟೆಂಬರ್ 20 ಲಕ್ಷ, ಅಕ್ಟೋಬರ್ – 30 ಲಕ್ಷ, ನವೆಂಬರ್ – 32 ಲಕ್ಷ, ಡಿಸೆಂಬರ್ 30 ಲಕ್ಷ, 2021 ಜನವರಿ – 28 ಲಕ್ಷ, ಫೆಬ್ರವರಿ – 18 ಲಕ್ಷ, ಮಾರ್ಚ್ (16ವರೆಗೂ) 11 ಲಕ್ಷ.
ರಾಜ್ಯ ಕೋವಿಡ್ ಪರೀಕ್ಷೆ ಯಲ್ಲಿ ಮುಂಚೂಣಿಯಲ್ಲಿದೆ. ಸೋಂಕು ಹತೋಟಿಗೆ ಸೋಂಕು ಪರೀಕ್ಷೆ ಹೆಚ್ಚಳ ಅಸ್ತ್ರವನ್ನು ಬಳಸಲಾಗಿತ್ತು. ಇದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಹತೋಟಿ ಹಿನ್ನೆಲೆ ಫೆಬ್ರವರಿಯಲ್ಲಿ ಪರೀಕ್ಷೆ ಕಡಿಮೆ ಮಾಡಲಾಗಿತ್ತು. ಎರಡನೇ ಅಲೆ ಹಿನ್ನೆಲೆ ನಿತ್ಯ ಒಂದು ಲಕ್ಷ ಪರೀಕ್ಷೆ ಮಾಡಲಾಗುವುದು.
●ಡಾ.ಅರುಂಧತಿ ಚಂದ್ರಶೇಖರ್, ನೋಡಲ್ ಅಧಿಕಾರಿ, ರಾಜ್ಯ ಕೋವಿಡ್ ಪರೀಕ್ಷೆ
-ಜಯಪ್ರಕಾಶ್ ಬಿರಾದಾರ್