Advertisement

ಎಲ್ಲ ಗ್ರಾಮಗಳಲ್ಲಿಯೂ ಕೋವಿಡ್‌ ಪರೀಕ್ಷೆ

06:30 PM May 25, 2021 | Team Udayavani |

ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ (ರ್ಯಾಟ್‌) ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

Advertisement

ಹುಕ್ಕೇರಿ ತಾಲೂಕಿನ ಹುಲ್ಲೊಳ್ಳಿ ಹಾಗೂ ಹತ್ತರಗಿ ಗ್ರಾಮದಲ್ಲಿ ಸೋಮವಾರ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ (ರ್ಯಾಟ್‌)ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್‌ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ್ಯಾಪಿಡ್‌ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ದಿನವೇ ಸೋಮವಾರ ಜಿಲ್ಲೆಯ 135 ಗ್ರಾಮಗಳಲ್ಲಿ ಏಕಕಾಲಕ್ಕೆ ರ್ಯಾಪಿಡ್‌ ಶಿಬಿರ ನಡೆಸಲಾಗಿದೆ. ಉಳಿದ ಗ್ರಾಮಗಳಲ್ಲೂ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್‌ ಅಧಿಕಾರಿ ನೇಮಿಸಲಾಗಿದ್ದು, ಗ್ರಾಪಂ ಟಾಸ್ಕ್ಫೋರ್ಸ್‌ ಮೂಲಕ ರ್ಯಾಪಿಡ್‌ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕೋವಿಡ್‌ ಪರೀಕ್ಷೆ ಹಾಗೂ ವರದಿ ವಿಳಂಬವಾಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲಿಯೇ ಕೋವಿಡ್‌ ಪರೀಕ್ಷೆ ಆರಂಭಿಸಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ರ್ಯಾಪಿಡ್‌ನ‌ಲ್ಲಿ ಸೋಂಕು ದೃಢಪಟ್ಟರೆ ಅಂಥವರನ್ನು ತಕ್ಷಣವೇ ಸ್ಥಳೀಯ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ತಂಡ ಗ್ರಾಮದಲ್ಲಿ ಕೋವಿಡ್‌ ಪರೀಕ್ಷಾ ಶಿಬಿರ ಏರ್ಪಡಿಸಿದಾಗ ಶೀತ, ಜ್ವರದ ಲಕ್ಷಣಗಳಿರುವ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ರ್ಯಾಪಿಡ್‌ ಪರೀಕ್ಷೆಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟರೆ ಯಾರೂ ಧೃತಿಗೆಡಬಾರದು. ಸೋಂಕಿತರ ಚಿಕಿತ್ಸೆಗಾಗಿ ಸ್ಥಳೀಯ ಹಾಗೂ ತಾಲೂಕು ಮಟ್ಟದಲ್ಲಿ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಸೋಂಕಿತರಿಗೆ ಉಚಿತವಾಗಿ ಊಟೋಪಚಾರದ ಜತೆಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಔಷಧೋಪಚಾರ ನೀಡಲಾಗುತ್ತಿದೆ ಎಂದು ಹೇಳಿದರು.

ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆ: ಹುಕ್ಕೇರಿ ತಾಲೂಕಿನ ಹುಲ್ಲೋಳಿಯಲ್ಲಿ 39 ಜನರಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಮೂಲಕ ಕೋವಿಡ್‌ ಪರೀಕ್ಷೆ ನಡೆಸಿದಾಗ ಅದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು. ಇಬ್ಬರನ್ನೂ ತಕ್ಷಣವೇ ಕೋವಿಡ್‌ ಕೇಂದ್ರಕ್ಕೆ ಕಳುಹಿಸಿ ಕೊಡಲಾಯಿತು. ಇನ್ನುಳಿದ 37 ಜನರ ವರದಿ ನೆಗೆಟಿವ್‌ ಬಂದಿದ್ದರೂ ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂಥವರ ಮಾದರಿ ಆರ್‌ .ಟಿ.-ಪಿ.ಸಿ.ಆರ್‌ ಪರೀಕ್ಷೆಗೆ ಕಳುಹಿಸ ಲಾಗುವುದು ಎಂದು ಜಿಲ್ಲಾಧಿ ಕಾರಿ ತಿಳಿಸಿದರು. ಮನೆ-ಮನೆಗೆ ತೆರಳಿ ಜಾಗೃತಿ: ಡಿಸಿ ಎಂ.ಜಿ. ಹಿರೇಮಠ ಹುಲ್ಲೋಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್‌ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

Advertisement

ಗ್ರಾಪಂ ಸದಸ್ಯರು, ಆಶಾ-  ಅಂಗನವಾಡಿ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದ ಅವರು, ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್‌ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಹೇಳಿದರು. ಜನತಾ ಕಾಲೋನಿಯಲ್ಲಿ ಐಸೋಲೇಷನ್‌ನಲ್ಲಿ ಇರುವ ಕೆಲ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಅವರು ಆರೋಗ್ಯ ವಿಚಾರಿಸಿದರು. ನಂತರ ಗ್ರಾಮದ ಮನೆ-ಮನೆಗೆ ತೆರಳಿದ ಜಿಲ್ಲಾಧಿ ಕಾರಿ ಅನಗತ್ಯವಾಗಿ ಯಾರೂ ಹೊರಗಡೆ ಸಂಚರಿಸಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಸುರಕ್ಷತಾ ಕ್ರಮ ಪಾಲಸಿಉವಂತೆ ತಿಳಿಸಿದರು.

ಗಡಿ ಚೆಕ್‌ಪೋಸ್ಟ್‌ ಪರಿಶೀಲನೆ: ಮಹಾರಾಷ್ಟ್ರ ರಾಜ್ಯ ಸಂಪರ್ಕಿಸುವ ಉಳ್ಳಾಗಡ್ಡಿ-ಖಾನಾಪುರದಲ್ಲಿ ಸ್ಥಾಪಿಸಲಾಗಿರುವ ಗಡಿ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿ  ಕಾರಿ ಭೇಟಿ ನೀಡಿ ಪರಿಶೀಲಿಸಿದರು. ಹತ್ತರಗಿ ಗ್ರಾಮಕ್ಕೂ ಭೇಟಿ ನೀಡಿ ಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಹತ್ತರಗಿ ಗ್ರಾಮದಲ್ಲಿಯೂ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿನ ಲಕ್ಷಣ ಹೊಂದಿರುವವರಿಗೆ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ (ರ್ಯಾ) ಮಾಡಲಾಯಿತು.

ಜಿಲ್ಲಾದ್ಯಂತ ರ್ಯಾಪಿಡ್‌ಗೆ ಚಾಲನೆ: ಕೋವಿಡ್‌ ತಡೆಗಟ್ಟಲು ಗ್ರಾಮ ಮಟ್ಟದಲ್ಲಿ ರ್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ಗೆ ಮುಂದಾಗಿರುವ ಜಿಲ್ಲಾಡಳಿತ ಸೋಮವಾರದಿಂದ ಜಿಲ್ಲಾದ್ಯಂತ ರ್ಯಾಪಿಡ್‌ಗೆ ಚಾಲನೆ ನೀಡಿತು. ಜಿಪಂ ಸಿಇಒ ದರ್ಶನ್‌ ಎಚ್‌.ವಿ. ನೇತೃತ್ವದಲ್ಲಿ ಬೈಲಹೊಂಗಲ ತಾಲೂಕಿನ ಗ್ರಾಮಗಳಲ್ಲಿ ಕೋವಿಡ್‌ ಪರೀಕ್ಷೆಗೆ ಚಾಲನೆ ನೀಡಲಾಯಿತು. ಅದೇ ರೀತಿ ಅಪರ ಜಿಲ್ಲಾಧಿ ಕಾರಿಗಳು, ಉಪ ವಿಭಾಗಾ ಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೋವಿಡ್‌ ಪತ್ತೆಗೆ ರ್ಯಾಪಿಡ್‌ ನಡೆಸಲಾಯಿತು. ಗ್ರಾಮ ಮಟ್ಟದಲ್ಲಿ ಇರುವ ಟಾಸ್ಕ್ಫೋರ್ಸ್‌ ಮೂಲಕ ಕೋವಿಡ್‌ ಪರೀಕ್ಷಾ ಶಿಬಿರ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ವಿ. ಮುನ್ಯಾಳ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next