ಬೆಂಗಳೂರು: “ನಗರದಲ್ಲಿ ಇನ್ನು ಮುಂದೆ ಪ್ರತಿಭಟನ ನಡೆಯುವ ಸ್ಥಳಗಳಲ್ಲೂ ಕೋವಿಡ್ ಪರೀಕ್ಷೆ ಮಾಡಲಿದ್ದು ಇದಕ್ಕಾಗಿ ಮೊಬೈಲ್ ಸೆಂಟರ್ ಪ್ರಾರಂಭಿಸಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ಕಳೆದ ಒಂದು ವಾರದಿಂದ ನಡೆಯುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಹೋರಾಟಗಳಿಂದ ಹೆಚ್ಚು ಜನ ಒಂದೇ ಜಾಗದಲ್ಲಿ ಹೆಚ್ಚು ಜನ ಗುಂಪು ಸೇರಿದ್ದು, ಕೋವಿಡ್ ಸೋಂಕು ಹಬ್ಬುವ ಭೀತಿ ಶುರುವಾಗಿದೆ. ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ನಗರದಲ್ಲಿ ಹೆಚ್ಚು ಜನ ಸೇರುವ ಹಾಗೂ ಹೋರಾಟ, ಪ್ರತಿಭಟನೆ ನಡೆಯುವ ಸ್ಥಳಗಳಲ್ಲೂ ಮೊಬೈಲ್ ವಾಹನದ ಮೂಲಕ ಸೋಂಕು ಪರೀಕ್ಷೆ ನಡೆಸಲಾಗುವುದು. ಈಗಾಗಲೇ ಜನನಿಬಿಡ ಪ್ರದೇಶಗಳಲ್ಲಿ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ.
ಸೆರೊ ಸರ್ವಲೈನ್ಸ್ ವರದಿ ಆಧಾರದ ಮೇಲೆ ನಗರದ ಹೊರವಲಯ, ಕೆಲವು ನಿರ್ದಿಷ್ಟ ವಾರ್ಡ್ ಗಳಲ್ಲಿ ಪರೀಕ್ಷೆ ಹೆಚ್ಚಿಸಲಾಗಿದೆ. ನಿತ್ಯ ಸರಾಸರಿ 41,500 ಜನರಿಗೆ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಕೋವಿಡ್ ದೃಢಪಡುವುದು ಕಡಿಮೆಯಾದರೂ, ಪರೀಕ್ಷೆ ಕಡಿಮೆ ಮಾಡುವುದಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದರು.
ನಗರದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಎಂಟಿಸಿ ಸಿಬ್ಬಂದಿ ಸಾರ್ವಜನಿಕರೊಂದಿಗೆ ಹೆಚ್ಚು ಸೇರುವುದರಿಂದ ಇವರಿಗೆ ಪರೀಕ್ಷೆ ನಡೆಸುವ ಅವಶ್ಯಕತೆ ಇದೆ. ಈ ಸಂಬಂಧ ಬಿಎಂಟಿಸಿ ಸಿಬ್ಬಂದಿಗೆ ಎಲ್ಲಿ ಸೋಂಕು ಪರೀಕ್ಷೆ ನಡೆಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡುವಂತೆಕೋರಲಾಗಿದೆ ಎಂದರು.
2 ದಿನಗಳಲ್ಲಿ ಕೋವಿಡ್ ಲಸಿಕೆ ಮಾಹಿತಿ ರವಾನೆ: ನಗರದಲ್ಲಿ ಮೊದಲ ಹಂತದಲ್ಲಿ ವಾರಿಯರ್ಸ್‌ಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಬಿಬಿ ಎಂಪಿ ಕೇಂದ್ರ ಕಚೇರಿ ಕೋವಿಡ್ ವಾರ್ ರೂಮ್ ನಲ್ಲಿ ಲಸಿಕೆ ತೆಗೆದುಕೊಳ್ಳುವವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪಾಲಿಕೆ ಸಿಬ್ಬಂದಿ 3ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 1.49 ಲಕ್ಷ ಜನ ಮಾಹಿತಿ ಸಂಗ್ರಹ ಮಾಡಲಾಗಿದೆ. ಮೆಡಿಕಲ್ ಕಾಲೇಜಿನ ಸಿಬ್ಬಂದಿ , ಆರೋಗ್ಯ ಇಲಾಖೆ ಸಿಬ್ಬಂದಿಯೂ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದಾರೆ. 2 ದಿನದಲ್ಲಿ ಮಾಹಿತಿ ಸಂಗ್ರಹ ಪೂರ್ಣಗೊಳ್ಳಲಿದ್ದು, ಕೇಂದ್ರಕ್ಕೆ ಮಾಹಿತಿ ರವಾನೆ ಮಾಡಲಿದ್ದೇವೆಂದರು.