ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ದೈನಂದಿನ ಪ್ರಕರಣ ಕಡಿಮೆ ಯಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ಹಾಗಾಗಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಮತ್ತು ಪಾಸಿಟಿವಿಟಿ ದರ ತಗ್ಗಿಸಲು ನಗರದಲ್ಲಿ ಕೋವಿಡ್ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಲು ಪಾಲಿಕೆ ನಿರ್ಧರಿಸಿದೆ.
ಇದರಂತೆ ಮುಂದಿನ ದಿನದಲ್ಲಿ ಮಂಗ ಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಯಾರಿಗಾದರೂ ಕೊರೊನಾ ದೃಢಪಟ್ಟರೆ ಆ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಜತೆಗೆ ಕೊರೊನಾ ಪಾಸಿಟಿವ್ ಹೊಂದಿದವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರನ್ನು ಕೂಡ ತಪಾಸಣೆಗೊಳಪಡಿಸಲು ಚಿಂತನೆ ನಡೆಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 1,226 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 50ಕ್ಕೂ ಹೆಚ್ಚು ಪ್ರಕರಣಗಳಿರುವ ಎರಡು ವಾರ್ಡ್‌ಗಳಿವೆ. ಸಾಮಾನ್ಯವಾಗಿ ಒಬ್ಬ ಸೋಂಕಿಗೆ ಒಳಗಾದರೆ ಪ್ರಾಥಮಿಕ ಸಂಪರ್ಕಿತ 5 ಮಂದಿಯ ಕೊರೊನಾ ಪರೀಕ್ಷೆ ನಡೆಸಬೇಕು. ಆದರೆ ಪಾಲಿಕೆ ವ್ಯಾಪ್ತಿ¤ಯಲ್ಲಿ ಈ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೊರೊನಾ ಪತ್ತೆ ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಆರು ತಂಡ ನಿಯೋಜಿಸಲಾಗಿದೆ.
ಕ್ಲಿನಿಕ್‌ಗಳಿಗೆ ಸೂಚನೆ :
ಕೋವಿಡ್ ಲಕ್ಷಣ ಹೊಂದಿದವರಿಗೆ ಕ್ಲಿನಿಕ್‌ಗಳಲ್ಲಿ ಔಷಧ ನೀಡುವ ಹಾಗಿಲ್ಲ. ಬದಲಾಗಿ ಅವರನ್ನು ಕೋವಿಡ್ ಪರೀಕ್ಷೆ ನಡೆಸಲು ಸೂಚನೆ ನೀಡಬೇಕು. ಆದರೆ ಕೆಲವೊಂದು ಕಡೆಗಳಲ್ಲಿ ಕೋವಿಡ್ ಲಕ್ಷಣವುಳ್ಳವರು ಮೆಡಿಕಲ್, ಕ್ಲೀನಿಕ್‌ಗಳಿಂದ ಮಾತ್ರೆ ಖರೀದಿಸಿ ಸೇವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಯೋಜನೆ ರೂಪಿಸುತ್ತಿದೆ.
ನಗರದಲ್ಲಿ ಕೋವಿಡ್ ಪತ್ತೆ ಮಾಡುವ ತಪಾಸಣೆ ಕಡಿಮೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ನೀಡಲಿದ್ದು, ವಸತಿ ಸಮುಚ್ಚಯಗಳಲ್ಲಿ ಪಾಸಿಟಿವ್ ಬಂದರೆ ಅಲ್ಲಿನ ಎಲ್ಲರನ್ನೂ ಟೆಸ್ಟ್‌ಗೆ ಒಳಪಡಿಸಲಿದ್ದೇವೆ. ಅದರಂತೆ ಕೊರೊನಾ ದೃಢಪಟ್ಟವರ ಪ್ರಾಥಮಿಕ, ದ್ವಿತೀಯ ಸಂಪರ್ಕದವರನ್ನು ತಪಾಸಣೆ ನಡೆಸಲಿದ್ದೇವೆ. ಇದಕ್ಕೆಂದು ಜಿಲ್ಲಾ ಆರೋಗ್ಯ ಇಲಾಖೆಯಿಂದ 6 ಪ್ರತ್ಯೇಕ ತಂಡ ನೀಡಲಾಗಿದೆ. ಇದರೊಂದಿಗೆ ಮನಪಾ ವ್ಯಾಪ್ತಿ ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಕಠಿನ ಕ್ರಮ ಮಾಡಲಿದ್ದೇವೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್