ಪುತ್ತೂರು: ಖಾಸಗಿ ಆಸ್ಪತ್ರೆಯಿಂದ ಬರುವ ಗರ್ಭಿಣಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ತಾಲೂಕು ಸರಕಾರಿ ಆಸ್ಪತ್ರೆ ಸಿಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯ ಹರೀಶ್ ಬಿಜತ್ರೆ ವಿಷಯ ಪ್ರಸ್ತಾವಿಸಿ, ಖಾಸಗಿ ಆಸ್ಪತ್ರೆಗಳಿಂದ ಶಿಫಾರಸು ಪತ್ರ ಪಡೆದುಕೊಂಡು ಕೊರೊನಾ ತಪಾಸಣೆಗಾಗಿ ಗರ್ಭಿಣಿಯರು ತಾಲೂಕು ಆಸ್ಪತ್ರೆಗೆ ಬರುತ್ತಾರೆ. ಜತೆಗೆ ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರುವವರು ಕೋವಿಡ್ ಪರೀಕ್ಷೆಗೆಂದು ಸರಕಾರಿ ಆಸ್ಪತೆಗೆ ಬಂದಾಗ ಇಲ್ಲಿನ ಸಿಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ರೀತಿಯ ನಿರ್ಲಕ್ಷ್ಯ ಸರಿಯಲ್ಲ ಎಂದು ಗಮನ ಸೆಳೆದರು.
ಈ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ ತಾ.ಪಂ.ಅಧ್ಯಕ್ಷ, ಇದೊಂದು ಗಂಭೀರ ಸಂಗತಿ. ಯಾಕೆ ಈ ರೀತಿ ಆಗಿದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ವೈದ್ಯರು, ಪ್ರತಿಯೊಬ್ಬರಿಗೂ ಆರ್‌ಟಿಪಿಸಿಆರ್ ಪರೀಕ್ಷೆ ಮಾಡುತ್ತಿದ್ದೇವೆ. ಕೆಲವೊಮ್ಮೆ ಕಿಟ್ ಅಭಾವವಿದ್ದಾಗ ತಪಾಸಣೆ ವಿಳಂಬವಾಗಿರಬಹುದು ಎಂದರು. ಈ ರೀತಿಯ ದೂರುಗಳು ಮತ್ತೆ ಬಾರದಂತೆ ಎಚ್ಚರ ವಹಿಸಿ ಎಂದು ಅಧ್ಯಕ್ಷರು ಸೂಚಿಸಿದರು.
ಕಮರ್ಷಿಯಲ್ ಕನ್ವರ್ಶನ್‌ಗೆ ಅವಕಾಶ ಇಲ್ಲ
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಏಳಿಗೆಗಾಗಿ ಸರಕಾರ ಸಾಕಷ್ಟು ಯೋಜನೆ ರೂಪಿಸಿದೆ. ಆದರೆ ಫಲಾನುಭವಿಗಳು ಜಮೀನಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಪೂರಕವಾಗಿ ಕಮರ್ಷಿಯಲ್ ಕನ್ವರ್ಶನ್‌ಗೆ ಅವಕಾಶವಿಲ್ಲ. ಇದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ ಎಂದು ಸದಸ್ಯ ಹರೀಶ್ ಬಿಜತ್ರೆ ಗಮನ ಸೆಳೆದರು. ಸದಸ್ಯ ಪರಮೇಶ್ವರ ಭಂಡಾರಿ ಧ್ವನಿಗೂಡಿಸಿದರು. ಇದು ತಾಲೂಕಿನ ಸಮಸ್ಯೆಯಲ್ಲ. ಇಡೀ ಜಿಲ್ಲೆಯ ಸಮಸ್ಯೆ ಎಂದು ತಹಶೀಲ್ದಾರ್ ರಮೇಶ್ ಬಾಬು ಹೇಳಿದರು.
ಈ ಕುರಿತು ಚರ್ಚೆ ನಡೆದು ಅಂತಿಮವಾಗಿ, ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳ ಕನಿಷ್ಠ 10 ಸೆಂಟ್ಸ್ ಜಾಗ ಕಮರ್ಷಿಯಲ್ ಕನ್ವರ್ಶನ್ ಮಾಡಲು ಅವಕಾಶ ನೀಡುವಂತೆ ಕೋರಿ ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಳ್ಳಲಾಯಿತು. ಯಾವುದೇ ಯೋಜನೆ ಜಾರಿಗೆ ತರುವಾಗಲೂ ಜಾಗದ ವಿಚಾರದಲ್ಲಿ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಸದಸ್ಯರು ಪ್ರಸ್ತಾವಿಸಿದರು. ಅರಣ್ಯ ಇಲಾಖೆಗೆ ತಮ್ಮ ಜಾಗದ ಬಗ್ಗೆ ಸ್ಪಷ್ಟತೆಯೇ ಇಲ್ಲ. ಮರ ಕಂಡರೆ ಸಾಕು, ಅದು ಅರಣ್ಯ ಇಲಾಖೆ ಜಾಗ ಎನ್ನುತ್ತಾರೆ ಎಂದು ಹರೀಶ್ ಬಿಜತ್ರೆ, ಮುಕುಂದ, ಪರಮೇಶ್ವರ ಭಂಡಾರಿ ಹೇಳಿದರು. ಅರಣ್ಯ ಇಲಾಖೆಯವರು ಮೊದಲು ತಮ್ಮ ಜಾಗದ ಸರ್ವೇ ಮಾಡಿ ಇಲಾಖೆ ಹೆಸರಿಗೆ ಆರ್‌ಟಿಸಿ ಮಾಡಿಕೊಂಡರೆ ಉತ್ತಮ ಎಂದು ಅಧ್ಯಕ್ಷರು ಹೇಳಿದರು.