Advertisement
ಜಿಲ್ಲೆಯಲ್ಲಿ ಮಾರ್ಚ್ 1ರಿಂದ ಈವರೆಗೆ ಒಟ್ಟು 10,544 ಮಂದಿಗೆ ಸೋಂಕು ಬಾಧಿಸಿದ್ದು, ಈ ಪೈಕಿ 5,862 ಮಂದಿ 16ರಿಂದ 30 ವರ್ಷದೊಳಗಿನವರು ಎನ್ನುವುದು ಗಮನಾರ್ಹ ವಿಚಾರ. ಅದರಲ್ಲೂ 16ರಿಂದ 20 ವರ್ಷದೊಳಗಿನ 1,603 ಮಂದಿ ಮತ್ತು 21 ವರ್ಷದಿಂದ 30 ವರ್ಷದೊಳಗಿನ 4,259 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆ ಹರಡುವಿಕೆ ತೀವ್ರ ಗತಿಯಲ್ಲಿದೆ. ಅದರಲ್ಲೂ ಪ್ರತೀ ದಿನದ ಪಾಸಿಟಿವ್ ಪ್ರಕರಣದಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ಯುವಕರೇ ಆಗಿದ್ದಾರೆ. ಬೇಕಾಬಿಟ್ಟಿ ತಿರುಗಾಟ, ಕೊರೊನಾ ಬಗ್ಗೆ ನಿರ್ಲಕ್ಷವೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು. ಕೊರೊನಾ ಮೊದಲನೇ ಅಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹರಡುವಿಕೆ ಸಾಧ್ಯತೆ ಹೆಚ್ಚಿತ್ತು. ಯುವಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವ ಕಾರಣ, ಅವರಲ್ಲಿ ರೋಗದ ತೀವ್ರತೆ ಕಡಿಮೆ ಇತ್ತು. ಆದರೆ, ಈ ಬಾರಿ ಯುವಕರಿಗೆ ಬಹಳ ವೇಗವಾಗಿ ಸೋಂಕು ಬಾಧಿಸುತ್ತಿದೆ ಎನ್ನುವುದು ನೋಡಿದಾಗ ಯುವಕರು ಕೊರೊನಾ ಬಗ್ಗೆ ನಿರ್ಲಕ್ಷé ವಹಿಸುವುದು ಅಪಾಯಕಾರಿ ಎನ್ನುವ ಮುನ್ನೆಚ್ಚರಿಕೆಯನ್ನು ಈ ಅಂಕಿ-ಅಂಶ ನೀಡುತ್ತಿದೆ.
ಕೊರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಮೊದಲನೇ ಅಲೆಗೆ ಹೋಲಿಸಿದರೆ ರೋಗದ ಹರಡುವಿಕೆ ವೇಗ ಹೆಚ್ಚಾಗಿದೆ. ಅದರಲ್ಲೂ ಸಕ್ರಿಯ ಪ್ರಕರಣ ಪೈಕಿ ಶೇ.50ರಷ್ಟು ಯುವಕರಲ್ಲಿ ಕೊರೊನಾ ಬಾಧಿಸುತ್ತಿರುವುದು ಆತಂಕಕಾರಿ ಸಂಗತಿ. ಲಾಕ್‌ಡೌನ್ ಮಾದರಿ ಕರ್ಫ್ಯೂ ಇದ್ದರೂ, ಯುವಕರು ರಸ್ತೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲನೆಯಿಂದ ಮಾತ್ರವೇ ಕೊರೊನಾ ನಿಯಂತ್ರಣ ಸಾಧ್ಯ.
– ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ