ಯಾದಗಿರಿ: ನವಿ ಮುಂಬಯಿಗೆ ವಲಸೆ ಹೋಗಿದ್ದ ಯಾದಗಿರಿ ಜಿಲ್ಲೆಯ 30 ಜನ ಏಪ್ರಿಲ್ 18ರಂದು ಜಿಲ್ಲೆಗೆ ಮರಳಿದ್ದು, ಇವರಿಗೆ ಕೋವಿಡ್-19 ರೋಗ ಲಕ್ಷಣಗಳ ಕುರಿತು ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ.
30 ಜನರ ಪೈಕಿ 15 ಜನರಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿರುವುದರಿಂದ ಆತಂಕ ಎದುರಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಕೋವಿಡ್-19 ಮೃದಂಗ ಬಾರಿಸುತ್ತಿದ್ದು ಈ ನಡುವೆಯೇ 30 ಜನರು ಜಿಲ್ಲೆಗೆ ಬಂದಿದ್ದಾರೆ.
ಸದ್ಯ ಜ್ವರ ಲಕ್ಷಣ ಕಂಡು ಬಂದ 15 ಜನರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದ್ದಾರೆ.
ಸದರಿ 15 ಜನರನ್ನು ಯಾದಗಿರಿ ತಾಲ್ಲೂಕಿನ ನಿಗದಿತ ಕೋವಿಡ್-19 ಆಸ್ಪತ್ರೆಯಲ್ಲಿ ಹಾಗೂ ಇನ್ನುಳಿದ 15 ಜನರನ್ನು ಯಾದಗಿರಿ ತಾಲ್ಲೂಕಿನ ನಿಗದಿತ ಕ್ವಾರಂಟೈನ್ ಕೇಂದ್ರದಲ್ಲಿ ಅವಲೋಕನೆಗಾಗಿ ಇರಿಸಲಾಗಿರುತ್ತದೆ.
ಬೆಂಗಳೂರಿನಿಂದ ಆಗಮಿಸಿ ಯಾದಗಿರಿ ತಾಲ್ಲೂಕಿನ ನಿಗದಿತ ಕ್ವಾರಂಟೈನ್ ಕೇಂದ್ರದಲ್ಲಿ ಅವಲೋಕನೆಗಾಗಿ ಇರಿಸಲಾಗಿದ್ದ 20 ಜನರ ಅವಲೋಕನಾ ಅವಧಿ ಮುಗಿದಿರುವುದರಿಂದ ಅವರನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.