Advertisement

ಕೋವಿಡ್‌-19 ವಿಶೇಷ ತಪಾಸಣೆಗೆ ಚಾಲನೆ

03:04 PM Aug 28, 2020 | Suhan S |

ದೊಡ್ಡಬಳ್ಳಾಪುರ: ತಾಲೂಕಿನ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ದಿನೇ ದಿನೆ ಕೋವಿಡ್‌-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ತಾಲೂಕು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಮತ್ತು ತಾಪಂ ಸಹಯೋಗ ದೊಂದಿಗೆ ಕೋವಿಡ್‌-19 ವಿಶೇಷ ತಪಾಸಣೆಗೆ ಚಾಲನೆ ನೀಡಲಾಗಿದೆ.

Advertisement

ಬಾಶೆಟ್ಟಿಹಳ್ಳಿ, ಬ್ಯಾಂಕ್‌ ಸರ್ಕಲ್, ಮಜರಾಹೊಸಹಳ್ಳಿ ಮತ್ತಿತರ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾರ್ಮಿಕರ ವಸತಿ ಗೃಹಗಳ ಬಳಿ ತೆರಳುವ ಈ ವಿಶೇಷ ತಪಾಸಣಾ ತಂಡ, ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಸೋಂಕಿತರು ಪತ್ತೆಯಾದಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿದೆ. ಮಜರಾಹೊಸಹಳ್ಳಿ ವ್ಯಾಪ್ತಿಯಲ್ಲಿ ಬುಧವಾರ ತಪಾ ಸಣೆ ಆರಂಭಿಸಲಾಗಿದ್ದು, ಈ ವ್ಯಾಪ್ತಿಯಲ್ಲಿನ ಸಿಲ್ವರ್‌ ಪಾರ್ಲ್ ಮಹಿಳಾ ವಸತಿ ಗೃಹದಲ್ಲಿ ಒಂದೇ ದಿನ 14 ಯುವತಿಯರಿಗೆ ಸೋಂಕು ಪತ್ತೆಯಾಗಿ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ತಾಪಂ ಅಧ್ಯಕ್ಷೆ ರತ್ನಮ್ಮ ಜಯರಾಂ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ತಪಾಸಣೆಗೆ ಸೂಚನೆ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ತಪಾಸಣೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಮಜರಾಹೊಸಹಳ್ಳಿ,ಬಾಶೆಟ್ಟಿಹಳ್ಳಿ ಗ್ರಾಪಂ ಪಿಡಿಒ, ಸಿಬ್ಬಂದಿ ಹಾಗೂ ಕಂದಾಯ ಸಿಬ್ಬಂದಿಗಳು ಕೈಜೋಡಿಸಿದ್ದಾರೆ.

 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ : ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಗುರುವಾರ 67 ಮಂದಿಗೆ ಕೋವಿಡ್  ಸೋಂಕು ದೃಢ ಪಡುವ ಮೂಲಕ ಸೋಂಕಿತರ ಸಂಖ್ಯೆ 1023 ಏರಿಕೆಯಾಗಿದೆ. ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್  ಬುಲೆಟಿನ್‌ ಅನ್ವಯ, ನಗರದ ಚೌಡೇಶ್ವರಿ ಗುಡಿ ಬೀದಿಯ 60 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದ್ದಾರೆ. 45 ಮಂದಿ ಪುರುಷರು ಹಾಗೂ 22 ಮಹಿಳೆಯರು ಸೇರಿ 67 ಜನರಿಗೆ ಸೋಂಕು ದೃಢಪಟ್ಟಿದೆ. 52 ಮಂದಿ ಸೋಂಕಿನಿಂದ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ.

ವರದಿಯಂತೆ ಮಜರಾಹೊಸಹಳ್ಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 26, ಬೀರಯ್ಯನಪಾಳ್ಯ 12, ಕರೇನಹಳ್ಳಿ 4, ತೂಬಗೆರೆ, ಸಿಲ್ವರ್‌ ಪಾರ್ಕ್‌ ದೊಡ್ಡ ತುಮಕೂರು, ಕೋರ್ಟ್‌ ರಸ್ತೆಯಲ್ಲಿ ತಲಾ ಎರಡು ಹಾಗೂ ಮೆಳೇಕೋಟೆ, ದೊಡ್ಡತುಮಕೂರು, ತಿಗಳರಪೇಟೆ, ತ್ಯಾಗರಾಜನಗರ, ಟ್ಯಾಂಕ್‌ ರಸ್ತೆ, 14 ವಾರ್ಡ್‌, ದೇವರಾಜನಗರ, ದರ್ಗಾ ಜೋಗಹಳ್ಳಿ, ಸಿದ್ದೇನಾಯಕನಹಳ್ಳಿ, ಕುಚ್ಚ ಪ್ಪನಪೇಟೆ, ಜಯನಗರ, ಕನಸವಾಡಿ, ಬಾಶೆಟ್ಟಿಹಳ್ಳಿ, ಪಾಲನಜೋಗಹಳ್ಳಿ, ಗಾಣಿ ಗರಪೇಟೆ, ಬ್ರಾಹ್ಮಣರಬೀದಿ, ಕಂಟನ ಕುಂಟೆ, ಲಿಂಗನಹಳ್ಳಿ ಮತ್ತು ಕುಚ್ಚಪ್ಪನ ಪೇಟೆಯ ಐದನೇ ರಸ್ತೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ ತಾಲೂಕಿನಲ್ಲಿ 721 ಮಂದಿ ಗುಣಮುಖರಾಗಿದ್ದರೆ, 26 ಮಂದಿ ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next