Advertisement

ಕೋವಿಡ್ ತಪ್ಪು ಕಲ್ಪನೆ ಬೇಡ ; ಸಮೀಕ್ಷಾ ಕಾರ್ಯಕ್ಕೆ ಸಹಕರಿಸಲು ಮನವಿ

08:51 AM Jun 18, 2020 | mahesh |

ಹಳಿಯಾಳ: ಕೋವಿಡ್ ಮಹಾಮಾರಿ ಕುರಿತು ಜನರಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ಮೊದಲು ಹೋಗಲಾಡಿಸಬೇಕಿದೆ. ಅಂದಾಗ ಮಾತ್ರ ಜನರು ಇಲಾಖೆಯವರೊಂದಿಗೆ ಸಹಕರಿಸುತ್ತಾರೆ. ಸರಿಯಾದ ಮಾಹಿತಿ ನೀಡುವ ಮೂಲಕ ಈಗ ಕೈಗೊಂಡಿರುವ ಸಮೀಕ್ಷಾ ಕಾರ್ಯ ಯಶಸ್ವಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಅಂಚಿನ ಹವಗಿ ಗ್ರಾಮದಲ್ಲಿರುವ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಹಳಿಯಾಳ-ದಾಂಡೇಲಿ ತಾಲೂಕಿನ ಎಲ್ಲ ಪಿಡಿಒ, ಕಾರ್ಯದರ್ಶಿಗಳು, ಬಿಲ್‌ ಕಲೆಕ್ಟರ್‌ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಿಗರು ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮಲ್ಲಿ ಸೋಂಕು ಸಮುದಾಯ ಮಟ್ಟದಲ್ಲಿ ಹರಡಿಲ್ಲ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೂನ್ಯ ಪ್ರಮಾಣದಲ್ಲಿದ್ದರೆ. ಗುಣಮುಖರಾಗುತ್ತಿರುವ ಪ್ರಮಾಣ ಶೇ. 100 ಇರುವುದು ಸಂತೋಷದ ಸಂಗತಿಯಾಗಿದೆ. ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಸರ್ವೇ ಕಾರ್ಯಕ್ಕೆ ಮನೆಮನೆಗೆ ಬರುತ್ತಿರುವ ಅಧಿಕಾರಿ, ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಕರೆ ನೀಡಿದರು.

ಲಾಕ್‌ಡೌನ್‌ ಎಲ್ಲದಕ್ಕೂ ಪರಿಹಾರವಲ್ಲ. ಲಾಕ್‌ಡೌನ್‌ ಕೊರೊನಾ ಕುರಿತು ಜಾಗೃತಿ ಮೂಡಿಸಿದೆ. ವೈರಸ್‌ಗೆ ಲಸಿಕೆ ಸಿಗುವವರೆಗೂ ಹೀಗೆಯೇ ಜೀವನ ನಿರ್ವಹಣೆ ಮಾಡಬೇಕಿದೆ. ವಾಸ್ತವ ಹೇಳಿ ಬದುಕಬೇಕಿದೆ. ಸುಳ್ಳು ಹೇಳಿ, ತಪ್ಪು ಕಲ್ಪನೆ ಮೂಡಿಸುವುದು ಬೇಡ. ಯಾರಾದರೂ ತಪ್ಪು ಕಲ್ಪನೆಗಳನ್ನು
ಹರಡುತ್ತಿದ್ದರೆ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ಸದ್ಯ 2ನೇ ಹಂತದ ಕೋವಿಡ್ ಸವಾಲಿನ ಹಂತವಾಗಿರುವ ಕಾರಣ ಇದರಲ್ಲಿ ಅಧಿಕಾರಿಗಳ ಪಾತ್ರಕ್ಕಿಂತ ಜನಸಮುದಾಯದ ಪಾತ್ರವೇ ಮುಖ್ಯವಾಗಿದೆ. ಸಮುದಾಯ ಮತ್ತು ಸರ್ಕಾರ ಇವೆರಡು ಸೇರಿದರೆ ಮಾತ್ರ ಕೊರೊನಾದ ವಿರುದ್ಧ ನಾವು ಜಯ ಸಾಧಿಸಬಹುದಾಗಿದ್ದು, ಜನ ಸಮೀಕ್ಷೆಗೆ ಸಹಕರಿಸಬೇಕು ಎಂದರು.

ಅಧಿಕಾರಿಗಳು ಕಚೇರಿ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಿ ಹೊರತು ಕೊರೊನಾಕ್ಕಲ್ಲ. ಅಲ್ಲದೇ ಹೋಂ ಕ್ವಾರಂಟೈನ್‌ ಸರಿಯಾಗಿ ಪಾಲನೆ ಆಗದೆ ಇದ್ದರೆ ಸಮುದಾಯಕ್ಕೆ ಸೋಂಕು ಹರಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ಸಂದೇಶವನ್ನು ನೀಡಿದರು.  ತಹಶೀಲ್ದಾರ್‌ಗಳಾದ ವಿದ್ಯಾಧರ ಗುಳಗುಳೆ, ಶೈಲೇಷ ಪರಮಾನಂದ, ಎಲ್ಲ ಇಲಾಖೆ ಅಧಿಕಾರಿಗಳು ಸೇರಿದಂತೆ ಸುಮಾರು 500 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಅಭಿನಂದನೆ
ಜೋಯಿಡಾ: ಇಂದು ಸಮಾಜದಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಹೊಗಳುತ್ತಿದ್ದಾರೆ. ಕೆಳಹಂತದ ಕಾರ್ಯಕರ್ತರ ಕೆಲಸ ಏನೆಂದು ಸಮಾಜಕ್ಕೆ ಗೊತ್ತಾಗಿದೆ. ಇದೇ ನಿಮಗೆ ಪಾರಿತೋಷಕ. ಕೊರೊನಾ ನಿಯಂತ್ರಣದಲ್ಲಿ ಸಾಧನೆ ಮಾಡಿದ ನಿಮಗೆಲ್ಲ ಅಭಿನಂದಿಸುತ್ತಿದ್ದಾಗಿ ಜಿಲ್ಲಾಧಿಕಾರಿ ಕೆ. ಹರಿಶಕುಮಾರ ಹೇಳಿದರು. ತಾಲೂಕು ಕೇಂದ್ರದ ಕುಣಬಿ ಭವನದಲ್ಲಿ ನಡೆದ ಕೊರೋನಾ ತಡೆಗಟ್ಟುವ ಕುರಿತ ಮಾಹಿತಿ ಸಭೆಯಲ್ಲಿ ಕೊರೊನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ತಾಲೂಕಿನ ಆಶಾ ಕಾರ್ಯಕರ್ತರು, ಅಂಗನವಾಡಿ, ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಅಭಿನಂದಿಸಿ ಅವರು ಮಾತನಾಡಿದರು. ಮಕ್ಕಳು, ಗರ್ಭಿಣಿಯರ ಬಗ್ಗೆ
ಹೆಚ್ಚಿನ ಕಾಳಜಿ ವಹಿಸಬೇಕು. ಜನರಲ್ಲಿರುವ ತಪ್ಪು ಕಲ್ಪನೆ ನಿವಾರಿಸಬೇಕು. ಕೋವಿಡ್ ಹರಡದಂತೆ ಜಾಗ್ರತಿ ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next