Advertisement

ಕೋವಿಡ್‌ ಸೇವೆಗೈದ ನರ್ಸ್‌ಗಳಿಗೆ 3 ತಿಂಗಳಿಂದ ವೇತನವಿಲ್ಲ

04:36 PM Aug 21, 2021 | Team Udayavani |

ಚಾಮರಾಜನಗರ: ಕೋವಿಡ್‌ ರೋಗಿಗಳ ಆರೈಕೆ ಮಾಡಿದ ವೈದ್ಯರು, ನರ್ಸ್‌ಗಳನ್ನು ಕೋವಿಡ್‌ ವಾರಿಯರ್‌ಗಳು ಎಂದು ಕರೆಯಲಾಗುತ್ತದೆ. ಅವರ ಸೇವಾ ಕಾರ್ಯವನ್ನು ಪ್ರಶಂಸಿಸಲಾಗುತ್ತದೆ. ಚಿಕಿತ್ಸೆ ಪಡೆದ ರೋಗಿಗಳು ನರ್ಸ್‌ಗಳ ಸೇವೆಯನ್ನು ಸ್ಮರಿಸಿ ಕೈ ಮುಗಿಯುತ್ತಾರೆ. ಆದರೆ ಜಿಲ್ಲಾ ಕೋವಿಡ್‌ ಆಸ್ಪತ್ರೆ ಯಲ್ಲಿ ಶುಶ್ರೂಷಕಾಧಿಕಾರಿಗಳಾಗಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 47 ನರ್ಸ್‌ಗಳಿಗೆ 3 ತಿಂಗಳಿಂದ ವೇತನ ದೊರೆಯದೇ ಪಡಿಪಾಟಲು ಅನುಭವಿಸುತ್ತಿದ್ದಾರೆ.

Advertisement

2020ರ ಏಪ್ರಿಲ್‌ ಮೇ ಸಮಯದಲ್ಲಿ ರಾಜ್ಯಾದ್ಯಂತ ಕೋವಿಡ್‌ ಪ್ರಕರಣಗಳುಹೆಚ್ಚಾದಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೋವಿಡ್‌ ಚಿಕಿತ್ಸೆಯ ಸಲುವಾಗಿ ಶುಶ್ರೂಷಕಾಧಿಕಾರಿಗಳ ನೇಮಕಕ್ಕೆ ನಿರ್ಧರಿಸಲಾಯಿತು. ಇರುವ ಸಿಬ್ಬಂದಿಯಿಂದ ಹೆಚ್ಚುವರಿ ಕೋವಿಡ್‌ ವಾರ್ಡ್‌ಗಳ ಕರ್ತವ್ಯ ನಿರ್ವಹಿಸುವುದು ಸಾಧ್ಯವಿಲ್ಲದ ಕಾರಣ, ನರ್ಸ್‌ಗಳ ನೇಮಕ ಮಾಡಿಕೊಳ್ಳಲಾಯಿತು.

2020ರ ಜೂನ್‌1 ರಿಂದ ಅನ್ವಯವಾಗುವಂತೆ47 ಮಂದಿ ಶುಶ್ರೂಷಕಾಧಿಕಾರಿಗಳನ್ನು ಕೋವಿಡ್‌ ಚಿಕಿತ್ಸೆಯ ಸಲುವಾಗಿಯೇ ಚಾಮರಾಜನಗರ ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆಯಿಂದ ಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ನೇಮಕ ಮಾಡಿಕೊಳ್ಳುವಾಗ ಇವರಿಗೆ ಯಾವುದೇ ಅಪಾಯಿಂಟ್‌ಮೆಂಟ್‌ ಲೆಟರ್‌, ಜಾಯಿನಿಂಗ್‌ಲೆಟರ್‌ ನೀಡಲಿಲ್ಲ. ಪ್ರತಿ ತಿಂಗಳು 19,800 ರೂ. ವೇತನ ನೀಡಲಾಗುತ್ತಿತ್ತು. ನೇಮಕ ಮಾಡಿಕೊಳ್ಳುವಾಗ 25 ಸಾವಿರ ರೂ. ವೇತನ,5 ಸಾವಿರ ರೂ. ಭತ್ಯೆ ಎಂದು ಹೇಳಲಾಗಿತ್ತು. 2ನೇ ಅಲೆ ಸಂದರ್ಭದಲ್ಲಿ 8 ಸಾವಿರ ರೂ. ಭತ್ಯೆ ನಿಗದಿ ಮಾಡಲಾಯಿತು. ಆದರೆ ಇವರಿಗೆ ಅದಾವುದನ್ನೂ ನೀಡಿಲ್ಲ. 19,800 ರೂ. ಮಾತ್ರ ವೇತನ ನೀಡಲಾಗಿದೆ. ಈಗ 2021ರ ಏಪ್ರಿಲ್‌ ತಿಂಗಳ ನಂತರ ಆ ನಿಗದಿತ ವೇತನವನ್ನೂ ನೀಡಿಲ್ಲ. 2021 ರ ಏಪ್ರಿಲ್‌ವರೆಗೂ ವೇತನ ಪಾವತಿಸಲಾಗಿದೆ. ನಂತರ ವೇತನ ಬಂದಿಲ್ಲ. 3 ತಿಂಗಳಾದರೂ ವೇತನ ಏಕೆ ಬಂದಿಲ್ಲ? ಎಂದು ಕಚೇರಿಯಲ್ಲಿ ಪ್ರಶ್ನಿಸಿದಾಗ,47 ಮಂದಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದವರನ್ನು ಮೈಸೂರಿನ ಏಜೆನ್ಸಿಯೊಂದಕ್ಕೆ ಹೊರಗುತ್ತಿಗೆ ವಹಿಸಲಾಗಿದೆ. ಹೀಗಾಗಿ ನಿಮಗೆ ಆ ಏಜೆನ್ಸಿಯಿಂದಲೇ ಇನ್ನು ಮುಂದೆ ವೇತನ ನೀಡಲಾಗುತ್ತದೆ ಎಂದು ತಿಳಿಸಲಾಯಿತು.

ಹೊರಗುತ್ತಿಗೆ ಏಜೆನ್ಸಿಗೆ ಮತ್ತೆ ಶುಶ್ರೂಷಾಧಿಕಾರಿಗಳು ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಅಂಕಪಟ್ಟಿ ನೀಡಿದ್ದಾರೆ. ಅವರು ಬಾಂಡ್‌ ಪೇಪರ್‌ ಮೇಲೆ,ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ.6 ತಿಂಗಳ ವೇತನ ನೀಡಿದಂತೆ ಅಡ್ವಾನ್ಸ್‌ ಪೇಸ್ಲಿಪ್‌ ಮೇಲೆ ಸಹಿ ತೆಗೆದುಕೊಳ್ಳಲಾಗಿದೆ. ಹೀಗೇಕೆ ಎಂದು ಪ್ರಶ್ನಿಸಿದಾಗ, ನಿಮಗೆ ವೇತನ ನೀಡಿ ಪ್ರತಿ ತಿಂಗಳೂ ಸಹಿ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಮೊದಲೇ ಪ್ಲೇ ಸ್ಲಿಪ್‌ಗೆ ಸಹಿ ಮಾಡಿಸಿಕೊಳ್ಳುತ್ತಿದ್ದೇವೆ ಎಂದು ಏಜೆನ್ಸಿಯವರು ತಿಳಿಸಿದ್ದಾರೆ.

ಏಜೆನ್ಸಿಗೆ ವಹಿಸಿದ ನಂತರ, ಅಂದರೆ ಏಪ್ರಿಲ್‌ ನಂತರ, ಮೇ, ಜೂನ್‌, ಜುಲೈ ವೇತನವನ್ನು ನರ್ಸ್‌ಗಳಿಗೆ ನೀಡಿಲ್ಲ. ವೇತನ ಬಂದಿಲ್ಲವೆಂದು ನರ್ಸ್‌ಗಳು ಜಿಲ್ಲಾ ಸರ್ಜನ್‌, ಜಿಲ್ಲಾಧಿಕಾರಿಯವರಿಗೆ ಮನವಿ ಯನ್ನೂ ಸಲ್ಲಿಸಿದ್ದಾರೆ. ಆದರೂ ವೇತನ ಮಂಜೂರು ಮಾಡಲು ವ್ಯವಸ್ಥೆ ಮಾಡಿಲ್ಲ. ಇದರಿಂದ ನೊಂದು ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿಯವರಿಗೂ ಮನವಿ ಸಲ್ಲಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ನಿಗದಿತವಾಗಿ ಪ್ರತಿ ತಿಂಗಳು ಸಂಬಳ ದೊರೆತರೂ ಸಂಸಾರ ನಿರ್ವಹಣೆ ಬಹಳಕಷ್ಟವಾಗಿದೆ. ಇಂತಿರುವಾಗ3 ತಿಂಗಳಿಂದ ಸಂಬಳವಾಗದೇ ನಮ್ಮ ಜೀವನ ನಿರ್ವಹಣೆ ತೀವ್ರ ಕಷ್ಟಕರವಾಗಿದೆ ಎಂದು ಗುತ್ತಿಗೆ ನೇಮಕಾತಿ ಶುಶ್ರೂಷಕಾಧಿಕಾರಿಗಳು ತಮ್ಮ ನೋವು ತೋಡಿಕೊಳ್ಳುತ್ತಾರೆ. ನಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಯವರಿಗೆ ತಿಳಿಸಿದರೂ ವೇತನ ಬಟವಾಡೆಯಾಗಿಲ್ಲ ಎಂಬ ಅಳಲು ಅವರದು.

Advertisement

ಕಾಯಂಗೆ ಒತ್ತಾಯಿಸುತ್ತಿಲ್ಲ, ಬರಬೇಕಾದ ವೇತನ ನೀಡಿ
ಕೋವಿಡ್‌ ವಾರ್ಡ್‌ಗಳಲ್ಲಿ ದೇಹಪೂರ್ತಿ ಪಿಪಿಇ ಕಿಟ್‌ ಧರಿಸಿ ಸತತ6 ಗಂಟೆಕಾಲ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಶುಶ್ರೂಷಕರದು. ವಾರ್ಡ್‌ ಒಳಗೆ ಹೋದ ನಂತರ ನೀರು, ಆಹಾರ ಸೇವಿಸುವುದಿಲ್ಲ. ಇವರಿಗೆ ವಾರದ ರಜೆಕೂಡ ಇಲ್ಲ.15 ದಿನಕಾಲ ಸತತವಾಗಿ ಕರ್ತವ್ಯ ನಿರ್ವಹಿಸಿದ ನಂತರ ರಜೆ ನೀಡಲಾಗುತ್ತದೆ. ಈ ರೀತಿ ಕರ್ತವ್ಯ ನಿರ್ವಹಿಸುವಾಗ ಅನೇಕರಿಗೆಕೋವಿಡ್‌ ಸೋಂಕು ಸಹ ತಗುಲಿದೆ.ಕೋವಿಡ್‌ ರೋಗಿಯನ್ನು ನೋಡಲುಕುಟುಂಬದವರೇ ಹಿಂಜರಿಯುವಾಗ ನರ್ಸ್‌ಗಳು ರೋಗಿಗಳ ಶುಶ್ರೂಷೆ , ಚಿಕಿತ್ಸೆ ನೀಡುವ ಮೂಲಕಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥಕೋವಿಡ್‌ ವಾರಿಯರ್‌ಗಳಿಗೆ ಕಳೆದ3 ತಿಂಗಳಿಂದ ವೇತನ ನೀಡದೇ ಇರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಈ ಸಿಬ್ಬಂದಿ ತಮ್ಮನ್ನುಕಾಯಂ ಮಾಡಿ ಎಂದುಕೇಳುತ್ತಿಲ್ಲ. ನಮಗೆ ಬರಬೇಕಾದ ವೇತನವನ್ನುಕೊಡಿ ಎಂದಷ್ಟೇ ಕೇಳುತ್ತಿದ್ದಾರೆ. ಆದರೆ, ಸರ್ಕಾರ ವೇತನ ಬಟವಾಡೆಗೆಕ್ರಮಕೈಗೊಳ್ಳದೇ ನಿರ್ಲಕ್ಷ್ಯ ತೋರಿದೆ.

ಮೂರು ತಿಂಗಳಿಂದ ವೇತನವಿಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ. ವೇತನ ಬಟವಾಡೆಗೆಕ್ರಮಕೈಗೊಳ್ಳುವಂತೆ ಜಿಲ್ಲಾ ಸರ್ಜನ್‌,ಜಿಲ್ಲಾಧಿಕಾರಿ ಯವರಿಗೆ ಮನವಿ ನೀಡಿದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ವೇತನ ಬಿಡುಗಡೆ ಮಾಡಿಸಬೇಕೆಂದು ಕೋರುತ್ತೇವೆ.
-ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ
ಶುಶ್ರೂಷಕಾಧಿಕಾರಿ

 ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next