Advertisement

ಕೋವಿಡ್ ಎರಡನೇ ಅಲೆ ನಿರ್ವಹಣೆ ; ನಾಳೆ ಪ್ರಧಾನಿ ಸಂವಾದ, ಸಿಎಂ ಬಿಎಸ್‌ವೈ ಭಾಗಿ

11:24 PM Apr 07, 2021 | Team Udayavani |

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಯವರ ಜತೆ ಗುರುವಾರ ಸಂವಾದ ನಡೆಸಲಿದ್ದಾರೆ.

Advertisement

ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಕೊರೊನಾ ಎರಡನೇ ಅಲೆ ಹೊಡೆತ ಹೆಚ್ಚಾಗಿದ್ದು, ರಾಜ್ಯ ಸರಕಾರದ ವತಿಯಿಂದ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ, ಲಸಿಕೆ ಅಭಿಯಾನದ ಪ್ರಗತಿ, ಪರೀಕ್ಷೆ ಸಂಖ್ಯೆ ಹೆಚ್ಚಳ ಮುಂತಾದ ಮಾಹಿತಿಯನ್ನು ಮುಖ್ಯಮಂತ್ರಿಯವರು ಪ್ರಧಾನಿಗೆ ವಿವರಿಸಲಿದ್ದಾರೆ.

ಪ್ರಧಾನಿಯವರ ಸಂವಾದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಇಲಾಖೆ ಮುಖ್ಯಸ್ಥರ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮಾಹಿತಿಯನ್ನೂ ಮುಖ್ಯಮಂತ್ರಿಯವರಿಗೆ ನೀಡಲಿದ್ದು ಪ್ರಧಾನಿಯವರ ಸಂವಾದ ಸಂದರ್ಭದಲ್ಲಿ ಮಾಹಿತಿ ವಿನಿಮಯ ಆಗಲಿದೆ.

ಈ ಹಿಂದೆ ಪ್ರಧಾನಿಯವರು ಮುಖ್ಯಮಂತ್ರಿಯವರ ಜತೆ ನಡೆಸಿದ್ದ ಸಂವಾದದಲ್ಲಿ, ಜನರಲ್ಲಿ ಆತಂಕ ಮೂಡಿಸುವುದು ಬೇಡ. ಲಾಕ್‌ಡೌನ್‌ ಹೊರತಾದ ಪರ್ಯಾಯ ಕ್ರಮಗಳನ್ನು ಅನುಸರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಗೆ ಆದ್ಯತೆ ನೀಡಲು ಸಲಹೆ ನೀಡಿದ್ದರು. ಅದರಂತೆ ರಾಜ್ಯ ಸರಕಾರ ಕ್ರಮ ಕೈಗೊಂಡಿದೆ.

ಇದನ್ನೂ ಓದಿ :ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಪರ್ಯಾಯ ವ್ಯವಸ್ಥೆ : ಲಕ್ಷ್ಮಣ ಸವದಿ

Advertisement

ಈಗಾಗಲೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಅವರು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅವರಿಗೆ ರಾಜ್ಯದ ಪರಿಸ್ಥಿತಿಯನ್ನು ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿ?
ಮುಖ್ಯಮಂತ್ರಿಗಳ ಜತೆ ಸಂವಾದದ ಬಳಿಕ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆರೋಗ್ಯ ಸಚಿವ ಡಾ| ಕೆ.ಸುಧಾಕರ್‌ ಅವರು ಈಗಾಗಲೇ ಈ ಕುರಿತು ಸುಳಿವು ನೀಡಿದ್ದು, ಪ್ರಧಾನಿಯವರ ಸಭೆಯ ಬಳಿಕ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.

ಕೊರೊನಾ: ಹತ್ತು ಜಿಲ್ಲೆಗಳಲ್ಲಿ ಡಿ.ಸಿ. ಗ್ರಾಮವಾಸ್ತವ್ಯ ರದ್ದು
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಹತ್ತು ಜಿಲ್ಲೆಗಳಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ಬಳ್ಳಾರಿ, ಬೀದರ್‌, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಕಾರ್ಯಕ್ರಮ ಇರುವುದಿಲ್ಲ.

ಪ್ರಸ್ತುತ ಕೊರೊನಾ ಎರಡನೇ ಅಲೆ ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಒಂದೆಡೆ ಗುಂಪು ಸೇರಿದರೆ ರೋಗ ಮತ್ತಷ್ಟು ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಈ ಜಿಲ್ಲೆಗಳಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.