Advertisement

ಮೈಮರೆಯದಿರೋಣ :2ನೇ ಅಲೆ ಇನ್ನೂ ಮಾಯವಾಗಿಲ್ಲ : ತಜ್ಞರು

02:01 AM Jun 26, 2021 | Team Udayavani |

ಬೆಂಗಳೂರು : ರಾಜ್ಯ ಹೆಚ್ಚು ಕಡಿಮೆ ಸಹಜ ಸ್ಥಿತಿಗೆ ಬರುತ್ತಿದ್ದು, ಜನರು ಮುಂಜಾಗ್ರತೆಯನ್ನು ಮರೆತು ಓಡಾಡುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಸರಕಾರ ಶುಕ್ರವಾರ ಕಡೆಯದಾಗಿ ಮೈಸೂರನ್ನೂ ಅನ್‌ ಲಾಕ್‌ ಮಾಡಿದೆ. ಆದರೆ ಜನರ ಮೈಮರೆತ ಓಡಾಟದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಜ್ಞರು ಕೊರೊನಾ 2ನೇ ಅಲೆ ಇನ್ನೂ ಪೂರ್ಣವಾಗಿ ಮಾಯವಾಗಿಲ್ಲ; ಎಚ್ಚರ ಇರಲಿ ಎಂದಿದ್ದಾರೆ.

Advertisement

ಕಳೆದ ಜೂ. 21ರಿಂದ ರಾಜ್ಯ ಸರಕಾರ ಮೊದಲಿಗೆ 16 ಜಿಲ್ಲೆಗಳು, ಬಳಿಕ ಹಂತಹಂತವಾಗಿ ಬಹುತೇಕ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಿದೆ. ಅನ್‌ ಲಾಕ್‌ ಆದ ಮೇಲೆ ರಾಜ್ಯದಲ್ಲಿ ಜನರ ಎಚ್ಚರಿಕೆ ಇಲ್ಲದ ಓಡಾಟ ಹೆಚ್ಚಿದೆ. ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ನಿಯಮ ಮೀರಿ ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ.

ಕೇಂದ್ರ ಸರಕಾರವೂ ಕೊರೊನಾ 2ನೇ ಅಲೆ ಇನ್ನೂ ಮಾಯವಾಗಿಲ್ಲ, ಜನತೆ ಎಚ್ಚರದಿಂದ ಇರಬೇಕು ಎಂದು ಹೇಳಿದೆ.

ಡೆಲ್ಟಾ + ಆತಂಕ
ಈಗ ಡೆಲ್ಟಾ ರೂಪಾಂತರಿಯ ದೊಡ್ಡಣ್ಣನಂತಿರುವ ಡೆಲ್ಟಾ+ ಕಾಣಿಸಿಕೊಂಡಿದೆ. ಇದರ ಬಗ್ಗೆ ಸ್ವತಃ ಕೇಂದ್ರ ಸರಕಾರವೇ ಆತಂಕ ವ್ಯಕ್ತಪಡಿಸಿದ್ದು, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಈ ರೂಪಾಂತರಿಯ ವಿರುದ್ಧ ಹೋರಾಟ ನಡೆಸುವ ಶಕ್ತಿ ಸದ್ಯ ಲಭ್ಯವಿರುವ ಲಸಿಕೆಗಳಿಗೆ ಇದೆಯೇ ಇಲ್ಲವೇ ಎಂಬುದು ಇನ್ನೂ ಖಾತರಿಯಾಗಿಲ್ಲ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ. ಹೀಗಾಗಿ ಎಚ್ಚರಿಕೆ ತೀರಾ ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

11 ರಾಜ್ಯಗಳಲ್ಲಿ ಡೆಲ್ಟಾ +
11 ರಾಜ್ಯಗಳಲ್ಲಿ ಡೆಲ್ಟಾ + ರೂಪಾಂತರಿ ಕಂಡುಬಂದಿದ್ದು, ಒಟ್ಟು 52 ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲೇ 20 ಪ್ರಕರಣಗಳು ಪತ್ತೆಯಾಗಿದ್ದು, ಮತ್ತೆ ಕಠಿನ ನಿಯಮಾವಳಿ ಜಾರಿಗೆ ತರಲಾಗುತ್ತಿದೆ. ತ.ನಾಡು ಮತ್ತು ಮ.ಪ್ರದೇಶಗಳಲ್ಲಿ ತಲಾ 9, ಕೇರಳದಲ್ಲಿ 3, ಪಂಜಾಬ್‌, ಗುಜರಾತ್‌ಗಳಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ+ ವಿರುದ್ಧ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳು ಸಮರ್ಥವಾಗಿ ಹೋರಾಟ ನಡೆಸಬಲ್ಲವು ಎಂದು ಕೇಂದ್ರ ಸರಕಾರ ಹೇಳಿದೆ. ಆದರೆ ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ.

Advertisement

ಮದುವೆಗೆ 40 ಮಂದಿ
ಮದುವೆಗಳಲ್ಲಿ ಪಾಲ್ಗೊಳ್ಳಬಹುದಾದ ಜನರ ಸಂಖ್ಯೆಯನ್ನು ಸರಕಾರ 40ಕ್ಕೆ ಏರಿಸಿದೆ. ಕಲ್ಯಾಣ ಮಂಟಪ, ಹೊಟೇಲ್‌, ಹಾಲ್‌, ರೆಸಾರ್ಟ್‌ಗಳಲ್ಲೂ ವಿವಾಹ ಆಯೋಜಿಸಬಹುದಾಗಿದೆ. ಇದು ಸೋಮವಾರದಿಂದ ಜಾರಿಗೆ ಬರಲಿದೆ. ಸಿಎಂ ಬಿಎಸ್‌ವೈ ಅವರು ಶುಕ್ರವಾರ ಡೆಲ್ಟಾ+ ರೂಪಾಂತರಿಯ ನಿಯಂತ್ರಣದ ಬಗ್ಗೆ ಸಚಿವರು ಮತ್ತು ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸ್ಥಳೀಯಾಡಳಿತಗಳಿಂದ ಅನುಮತಿ ಪಡೆಯಬೇಕು, ಭಾಗಿಯಾಗುವವರು ಪಾಸ್‌ ಹೊಂದಿರಬೇಕು ಎಂದು ಸೂಚಿಸಲಾಗಿದೆ.

ಅವಗಣಿಸಿದರೆ ಅಪಾಯ
ಕೊರೊನಾ ಡೆಲ್ಟಾ + ರೂಪಾಂತರಿಯ ಬಗ್ಗೆ ಹೆಚ್ಚು ಆತಂಕಪಡಬೇಡಿ. ಆದರೆ ಎಚ್ಚರಿಕೆಯಿಂದ ಇರುವುದು ಅವಶ್ಯ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ತಿಳಿಸಿದ್ದಾರೆ. ಈ ರೂಪಾಂತರಿಯಿಂದ ಸೋಂಕುಪೀಡಿತರಿಗೆ ಹೆಚ್ಚು ಸಮಸ್ಯೆ  ಆಗಿಲ್ಲ. ಆದ್ದರಿಂದ ಈ ಬಗ್ಗೆ ವಿಶೇಷ ಆತಂಕ ಅಗತ್ಯವಿಲ್ಲ ಎಂದಿದ್ದಾರೆ. ಬೆಂಗಳೂರು, ಮಂಗಳೂರು ಸಹಿತ ಜಿಲ್ಲಾಸ್ಪತ್ರೆಗಳಲ್ಲಿ ಒಟ್ಟು 6 ಜಿನೋಮ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ಆರಂಭಿಸಲಾಗುತ್ತಿದೆ. ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.

ನಿಯಮ ಪಾಲಿಸಿ
ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆದಷ್ಟು ಬೇಗ ಲಸಿಕೆ ಪಡೆಯುವುದು- ಕೊರೊನಾ ನಿಯಂತ್ರಣಕ್ಕೆ ಇದೇ ಮಂತ್ರ ಎಂದು ರಾಜ್ಯ ಕೋವಿಡ್‌ ತಾಂತ್ರಿಕ ಸಲಹೆಗಾರ, ವೈರಾಣು ತಜ್ಞ ಡಾ| ವಿ. ರವಿ ಹೇಳಿದ್ದಾರೆ. ಇವೆಲ್ಲವನ್ನೂ ಮರೆತರೆ ಸೋಂಕು ಹಾವಳಿ ಮುಂದುವರಿಯುತ್ತಲೇ ಇರುತ್ತದೆ. ನಾವೆಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಡೆಲ್ಟಾ + ಅಥವಾ 3ನೇ ಅಲೆಯಂತಹ ಪರಿಸ್ಥಿತಿಗಳು ಬರುತ್ತಲೇ ಇರುತ್ತವೆ. ನಾವು ಎಚ್ಚರಿಕೆಯಿಂದ ಇರಬೇಕು. ವೈರಸ್‌ ಅಥವಾ ಅದರ ರೂಪಾಂತರಗಳ ಬಗ್ಗೆ ಕಿಂಚಿತ್‌ ಭಯ, ಎಚ್ಚರಿಕೆ ಅಗತ್ಯ. ಇಲ್ಲದಿದ್ದರೆ ಎಡವಟ್ಟು ಖಚಿತ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next