Advertisement

ಕೋವಿಡ್ ಸಪ್ತರೂಪ; ರಾಜ್ಯದಲ್ಲಿ ವೈರಸ್‌ನ ಏಳು ರೂಪಾಂತರ ಈಗಾಗಲೇ ಪತ್ತೆ

12:13 AM Dec 23, 2020 | mahesh |

ಬೆಂಗಳೂರು: ಬ್ರಿಟನ್‌ನಲ್ಲಿ ಕಂಡು ಬಂದಿರುವ ರೂಪಾಂತರಿತ ಕೋವಿಡ್ ವೈರಸ್‌ನ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ ನಮ್ಮ ರಾಜ್ಯ ದಲ್ಲಿ ವೈರಸ್‌ ಈ ಹಿಂದೆಯೇ ಏಳು ರೂಪಾಂತರಗಳನ್ನು ಹೊಂದಿದೆ! ಇದು ನಿಮ್ಹಾನ್ಸ್‌ನ ವೈರಾಲಜಿ ವಿಭಾಗ ನಡೆಸಿದ ಸಂಶೋಧನೆಗಳಿಂದ ತಿಳಿದುಬಂದಿರುವ ವಿಚಾರ.

Advertisement

ಇದುವರೆಗೆ ನಮಗೆ ತಿಳಿದಿರುವುದು ಕೋವಿಡ್ ವೈರಾಣುವಿನ ಒಂದು ರೂಪ ಮಾತ್ರ. ಭೌಗೋಳಿಕ ಪ್ರದೇಶಕ್ಕೆ ತಕ್ಕಂತೆ ಅದರ ವಂಶವಾಹಿಗಳ ಸ್ವರೂಪ ಬದಲಾಗುತ್ತದೆ. ಇದನ್ನೇ ವೈರಸ್‌ನ ರೂಪಾಂತರ ಎನ್ನುತ್ತಾರೆ. ಏಳು ದೇಶಗಳಿಂದ ಏಳು ತರಹ ರೂಪಾಂತರಿತ ವೈರಸ್‌ ವಿದೇಶಿ ಪ್ರಯಾಣಿಕರ ಮೂಲಕ ರಾಜ್ಯಕ್ಕೆ ಈ ಹಿಂದೆ ಆಗಮಿಸಿರುವುದು ಸಂಶೋಧನೆಗಳಿಂದ ಪತ್ತೆಯಾಗಿದೆ. ನಿಮ್ಹಾನ್ಸ್‌ ವೈರಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮತ್ತು ರಾಜ್ಯ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ| ವಿ. ರವಿ ಈ ಸಂಶೋಧನೆ ನಡೆಸಿದ್ದಾರೆ.

10 ತಿಂಗಳುಗಳಲ್ಲಿ 7 ರೂಪ
ವೈರಸ್‌ 10 ತಿಂಗಳುಗಳಲ್ಲಿ ನಾನಾ ರೀತಿಯಲ್ಲಿ ರೂಪಾಂತರವಾಗಿದೆ. ಆದರೆ ದೊಡ್ಡ ಬದಲಾವಣೆ ಆಗಿಲ್ಲ. ಈ ರೂಪಾಂತರಿತ ವೈರಸ್‌ ಇತರ ದೇಶ ಅಥವಾ ಇತರ ರಾಜ್ಯಗಳ ಮೂಲಕ ಕರ್ನಾಟಕಕ್ಕೆ ಬಂದಿರುವುದು ಮಾದರಿಗಳ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಡಾ| ವಿ. ರವಿ ತಿಳಿಸಿದ್ದಾರೆ.

ತಾಯಿ, ಪುತ್ರಿಗೆ ಸೋಂಕು ಪತ್ತೆ
ಇತ್ತೀಚೆಗೆ ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಆಗಮಿಸಿರುವ 35 ವರ್ಷದ ಮಹಿಳೆ ಮತ್ತು ಆಕೆಯ 6 ವರ್ಷದ ಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಿಬ್ಬರು ಅಪೋಲೊ ಆಸ್ಪತ್ರೆಗೆ ತೆರಳಿ ಸ್ವತಃ ಪರೀಕ್ಷೆಗೊಳಗಾಗಿದ್ದು, ಸೋಂಕು ದೃಢಪಟ್ಟಿದೆ. ಈ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಅಧ್ಯಯನ ನಡೆಸಲು ಅವರ ಮಾದರಿಗಳನ್ನು ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ.

ದೇಶದಲ್ಲಿ ಪತ್ತೆಯಾಗಿಲ್ಲ: ಪೌಲ್‌
ರೂಪಾಂತರಿತ ಕೊರೊನಾ ವೈರಸ್‌ ಭಾರತದಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಹಾಗಾಗಿ ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ನೀತಿ ಆಯೋಗ(ಆರೋಗ್ಯ)ದ ಸದಸ್ಯ ಡಾ| ವಿ.ಕೆ. ಪೌಲ್‌ ಹೇಳಿದ್ದಾರೆ. ಸದ್ಯಕ್ಕೆ ಭೀತಿಯ ಅಗತ್ಯವಿಲ್ಲ. ಬ್ರಿಟನ್‌ ಮಾದರಿಯ ಅಥವಾ ಗಂಭೀರ ಎನ್ನಬಹುದಾದ ಹೊಸ ರೂಪಾಂತರ ಭಾರತದಲ್ಲಿಲ್ಲ. ಹಾಗಾಗಿ ಚಿಕಿತ್ಸೆಯ ಮಾರ್ಗಸೂಚಿಯಲ್ಲೂ ಯಾವುದೇ ಬದಲಾವಣೆ ಮಾಡುವುದಿಲ್ಲ. ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಯ ಮೇಲೂ ಅದು ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

Advertisement

12 ಮಂದಿಗೆ ಸೋಂಕು ದೃಢ
ಲಂಡನ್‌ನಿಂದ ಎರಡು ವಿಮಾನಗಳಲ್ಲಿ ಸೋಮವಾರ ರಾತ್ರಿ ಬಂದಿಳಿದ 12 ಪ್ರಯಾಣಿಕ ರಿಗೆ ಸೋಂಕು ದೃಢಪಟ್ಟಿದೆ. ಹೊಸ ಸ್ವರೂಪದ ಸೋಂಕಿನ ಭೀತಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಇವರಲ್ಲಿ ಪತ್ತೆಯಾಗಿರುವ ಸೋಂಕು ಹಳೆಯ ಸ್ವರೂಪಧ್ದೋ ಹೊಸ ಸ್ವರೂಪಧ್ದೋ ಎಂಬುದು ಇನ್ನೂ ದೃಢಪಟ್ಟಿಲ್ಲ. ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ರವಾನಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿಗೆ 64 ಮಂದಿ ಆಗಮನಮಂಗಳೂರು/ಉಡುಪಿ, ಡಿ. 22: ಇಂಗ್ಲೆಂಡ್‌ನಿಂದ ಕರಾವಳಿಗೆ ಒಟ್ಟು 64 ಮಂದಿ ಆಗಮಿಸಿದ್ದು, ಇವರ ಮಾಹಿತಿ ಕಲೆ ಹಾಕಲಾಗುತ್ತಿದೆ. ದಕ್ಷಿಣ ಕನ್ನಡಕ್ಕೆ 56 ಮಂದಿ ಆಗಮಿಸಿದ್ದಾರೆ ಎನ್ನಲಾಗಿದೆ. ಇವರಲ್ಲಿ 13 ಮಂದಿಯ ವಿವರ ಗಳನ್ನು ಸಂಗ್ರಹಿಸಲಾಗಿದೆ. ಉಡುಪಿ ಜಿಲ್ಲೆಗೆ ಡಿ. 21ರಂದು ಒಟ್ಟು ಎಂಟು ಮಂದಿ ಆಗಮಿಸಿದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ.
ರೂಪಾಂತರಿತ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಡಿ. 23ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಾಸ್ಕ್ಪೋರ್ಸ್‌ ಸಮಿತಿ ಸಭೆ ನಡೆಯಲಿದೆ.

ರಾತ್ರಿ ಕರ್ಫ್ಯೂ ಅಗತ್ಯವಿಲ್ಲ
ಹೊಸ ಸ್ವರೂಪದ ವೈರಸ್‌ ಹರಡದಂತೆ ಎಚ್ಚರ ವಹಿಸುತ್ತೇವೆ. ಸದ್ಯ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಅಗತ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ರೂಪಾಂತರಿತ ವೈರಸ್‌ ಚೆನ್ನೈಗೆ ಬಂದಿಳಿದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಕಟ್ಟೆಚ್ಚರ ವಹಿಸಲಾಗುವುದು. ಯಾರೇ ಹೊರಗಿನಿಂದ ಬಂದರೂ ವಿಮಾನನಿಲ್ದಾಣದಲ್ಲೇ ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.

7 ರೂಪಾಂತರಗಳ ಮೂಲ
– ಚೀನ, ಅಮೆರಿಕ, ಯುರೋಪ್‌, ದುಬಾೖ, ಇರಾನ್‌, ಇಂಡೋನೇಷ್ಯಾ/ಮಲೇಷ್ಯಾ ಮತ್ತು ಇಟಲಿ
– ನಂಜನಗೂಡು ಔಷಧ ಕಾರ್ಖಾನೆಯಲ್ಲಿ ಕಂಡುಬಂದದ್ದು ಐರೋಪ್ಯ ತಳಿ
– ತಬ್ಲಿ ಗಳಲ್ಲಿ ಕಾಣಿಸಿಕೊಂಡಿದ್ದು ಮಲೇಷ್ಯಾ/ಇಂಡೋನೇಷ್ಯಾ ತಳಿ
– ವಿದೇಶಿ ಪ್ರಯಾಣಿಕರು, ವಲಸಿಗರ ಮೂಲಕ ದೇಶ ಪ್ರವೇಶ

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next