Advertisement

ಕೋವಿಡ್: ದೀರ್ಘಾವಧಿ ಪರಿಣಾಮಗಳ ಮೇಲೂ ನಡೆದ ಸಂಶೋಧನೆ

01:29 PM Jun 25, 2020 | mahesh |

ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆಯ ನಂತರದಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ, ಈ ನಡುವೆಯೇ ಕೋವಿಡ್ ನ  ವಿಚಾರದಲ್ಲಿ ಜನಸಾಮಾನ್ಯರಲ್ಲಿ ಅಸಡ್ಡೆ ಹೆಚ್ಚಾಗಿ ಕಾಣಿಸಲಾರಂಭಿಸಿದೆ. ಮೊದಲು ಭಯದಿಂದಾದರೂ ಸಾಮಾಜಿಕ ಅಂತರ, ಸ್ವತ್ಛತೆಯ ಪಾಲನೆ ಮಾಡುತ್ತಿದ್ದವರು, ದಿನಗಳೆದಂತೆ ಈ ವಿಚಾರದಲ್ಲಿ ಹೆಚ್ಚು ಜಾಗೃತಿ ವಹಿಸುತ್ತಿಲ್ಲ. ಆದರೆ ಕೊರೊನಾವನ್ನು ಹಗುರವಾಗಿ ಪರಿಗಣಿಸಬಾರದು ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಇದೇ ವೇಳೆೆಯಲ್ಲೇ ಈ ವೈರಸ್‌ನಿಂದ ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೇ? ಎನ್ನುವ ಚರ್ಚೆ, ಅಧ್ಯಯನಗಳೂ ವೈಜ್ಞಾನಿಕ ವಲಯದಲ್ಲಿ ಆರಂಭವಾಗಿವೆ…

Advertisement

ತೆಲಂಗಾಣ ಹೈರಾಣ
ಕೊರೊನಾ ವಿಚಾರದಲ್ಲಿ ಆರಂಭದಿಂದಲೂ ಅಸಡ್ಡೆ ಮೆರೆಯುತ್ತಾ ಬಂದ ತೆಲಂಗಾಣವೀಗ ಅದರ ಪರಿಣಾಮವನ್ನು ಎದುರಿಸಲಾರಂಭಿಸಿದೆ. ಕಳೆದೊಂದು ವಾರದಲ್ಲಿ ಆ ರಾಜ್ಯದಲ್ಲಿ 3 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ದೇಶದಲ್ಲಿ ಅತಿಹೆಚ್ಚು ಟೆಸ್ಟ್‌ ಪಾಸಿಟಿವಿಟಿ ರೇಟ್‌ ಇರುವ ರಾಜ್ಯಗಳಲ್ಲಿ ತೆಲಂಗಾಣ ಮೂರನೇ ಸ್ಥಾನಕ್ಕೇರಿದೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಹಾಗೂ ದಿಲ್ಲಿ ಇದೆ.


ಅತಿ ಕಡಿಮೆ ಟೆಸ್ಟ್‌ಗಳು: ತೆಲಂಗಾಣದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಕೇವಲ 1,699 ಜನರನ್ನು ಇದುವರೆಗೂ ಪರೀಕ್ಷಿಸಲಾಗಿದೆ. ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ 8002 ಜನರನ್ನು ಪರೀಕ್ಷಿಸಲಾಗಿದ್ದರೆ, ತಮಿಳುನಾಡಿನಲ್ಲಿ 12,476 ಜನರನ್ನು ಪರೀಕ್ಷಿಸಲಾಗಿದೆ. ತೆಲಂಗಾಣದಲ್ಲಿ ಇದುವರೆಗೂ ಕೇವಲ 63 ಸಾವಿರ ಜನರನ್ನು ಪರೀಕ್ಷಿಸಲಾಗಿದ್ದರೆ, ಅದರಲ್ಲೇ 9553 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ!

ನೆರೆಯ ಆಂಧ್ರಪ್ರದೇಶವು ಪ್ರತಿದಿನ 10 ಸಾವಿರದಿಂದ 20 ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದರೆ, ತೆಲಂಗಾಣ ಮಾತ್ರ ಪ್ರತಿನಿತ್ಯ ಸರಾಸರಿ 500 ಟೆಸ್ಟ್‌ಗಳನ್ನಷ್ಟೇ ನಡೆಸುತ್ತಿತ್ತು. ಜೂನ್‌ 16ರ ವೇಳೆಗೆ ಅಲ್ಲಿ ಕೇವಲ 44 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಕಾರಣಕ್ಕಾಗಿಯೇ, ಹೈಕೋರ್ಟ್‌ ಕೂಡ ಹಲವು ಬಾರಿ ಸರಕಾರಕ್ಕೆ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಆದೇಶಿಸಿತ್ತು. ಈಗ ಜೂನ್‌ 21ರಿಂದ ಅಲ್ಲಿ ನಿತ್ಯ ಪರೀಕ್ಷೆಗಳ ಸಂಖ್ಯೆಯನ್ನು 3 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸೋಂಕಿತರನ್ನು ಪತ್ತೆ ಮಾಡುವಲ್ಲಿ ತೆಲಂಗಾಣ ತೋರಿಸಿರುವ ವಿಳಂಬದಿಂದಾಗಿ ಎಷ್ಟು ಜನರಲ್ಲಿ ಈಗಾಗಲೇ ಸೋಂಕು ಹರಡಿ ಬಿಟ್ಟಿದೆಯೋ ತಿಳಿಯದು. ಹೀಗಾಗಿ, ಟೆಸ್ಟಿಂಗ್‌ಗಳನ್ನು ಹೆಚ್ಚು ಮಾಡಿದ ನಂತರ ಸೋಂಕಿತರ ಸಂಖ್ಯೆಯಲ್ಲಿ ಕೆಲವೇ ದಿನಗಳಲ್ಲಿ ವಿಪರೀತ ಏರಿಕೆ ಕಂಡುಬರುತ್ತಿದ್ದು, ಅದು ನೋಡನೋಡುತ್ತಿರುವಂತೆಯೇ ಟಾಪ್‌ 5 ಹಾಟ್‌ಸ್ಪಾಟ್‌ಗಳಲ್ಲಿ ಜಾಗ ಪಡೆಯುವ ಸಾಧ್ಯತೆ ಇದೆ. ಆರಂಭದಿಂದಲೂ ಎಲ್ಲಾ ರಾಜ್ಯಗಳೂ ಟೆಸ್ಟಿಂಗ್‌ ಸಂಖ್ಯೆಯ ಬಗ್ಗೆ ವರದಿ ನೀಡುತ್ತಿದ್ದರೆ, ಕೆಸಿಆರ್‌ ಸರಕಾರ ಮಾತ್ರ ಈ ವಿಷಯವನ್ನು ಗೌಪ್ಯವಾಗಿ ಇಟ್ಟಿತ್ತು. ಈಗ ಕೆಲ ದಿನಗಳಿಂದ ಬಾರಿಗೆ ಟೆಸ್ಟಿಂಗ್‌ ಸಂಖ್ಯೆಗಳನ್ನು ಬಿಡುಗಡೆಗೊಳಿಸುತ್ತಿದೆ.

ಹಲವು ರಾಷ್ಟ್ರಗಳಿಗಿಂತ ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕಿತರು
ದೇಶದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಪಾಲು 30.37 ಪ್ರತಿಶತವಿದೆ. ಜೂನ್‌ 24ರ ಮಧ್ಯಾಹ್ನದ ವೇಳೆಗೆ ಉದ್ಧವ್‌ ಠಾಕ್ರೆಯವರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1ಲಕ್ಷ 39 ಸಾವಿರ ದಾಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಯಾವಮಟ್ಟಕ್ಕೆ ಏರಿದೆಯೆಂದರೆ, ರಾಜ್ಯಗಳಲ್ಲಲ್ಲ, ಪ್ರಪಂಚದ ಹಲವು ರಾಷ್ಟ್ರಗಳಲ್ಲೂ ಸೋಂಕಿತರ ಸಂಖ್ಯೆ ಅಲ್ಲಿಗಿಂತ ಕಡಿಮೆಯಿದೆ. ಉದಾಹರಣೆಗೆ, ಬಾಂಗ್ಲಾದೇಶ(122,660), ದಕ್ಷಿಣ ಆಫ್ರಿಕಾ(106,108), ಕತಾರ್‌(90,778),ಚೀನ(83,430) ಹಾಗೂ ಬೆಲ್ಜಿಯಂನಲ್ಲಿ(60,898) ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತಲೂ ಕಡಿಮೆಯಿದೆ!

ಶ್ವಾಸಕೋಶಕ್ಕೆ ತೊಂದರೆ ತಾತ್ಕಾಲಿಕವೇ ಅಥವಾ?
ಕೊರೊನಾ ಪ್ರಕರಣಗಳಲ್ಲಿ ಚೇತರಿಕೆ ಪ್ರಮಾಣ ಅಧಿಕವಿದೆಯಾದರೂ, ನಿಜಕ್ಕೂ ಜನರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರಾ ಅಥವಾ ಈ ವೈರಸ್‌ ಸೋಂಕಿತರಲ್ಲಿ ದೀರ್ಘಾವಧಿ ಸಮಸ್ಯೆಗಳಿಗೆ ಮುನ್ನುಡಿ ಬರೆಯುತ್ತದೆಯೇ ಎನ್ನುವ ಚರ್ಚೆ ವೈಜ್ಞಾನಿಕ ವಲಯದಲ್ಲಿ ಆರಂಭವಾಗಿದೆ. ಈ ರೋಗ ಹೊಸದಾಗಿರುವುದರಿಂದ ನಿಖರ ಉತ್ತರವಂತೂ ಸದ್ಯಕ್ಕೆ ಇಲ್ಲವಾದರೂ,ಚೀನ ಮತ್ತು ಇನ್ನಿತರೆಡೆ ನಡೆದಿರುವ ಅಧ್ಯಯನಗಳು ಕೋವಿಡ್‌ನ‌ ದುಷ್ಪರಿಣಾಮಗಳ “ಸಾಧ್ಯತೆಯ’ ಮೇಲೆ ಬೆಳಕು ಚೆಲ್ಲುತ್ತಿವೆ.ಚೀನದ ಸಂಶೋಧಕರ ತಂಡವೊಂದರ ಅಧ್ಯಯನವು ಸುಮಾರು 90 ರೋಗಿಗಳ ಅಧ್ಯಯನ ನಡೆಸಿ, ಅವರಲ್ಲಿ ಸುಮಾರು 70 ಪ್ರತಿಶತ ಕೋವಿಡ್‌ ರೋಗಿಗಳ ಶ್ವಾಸಕೋಶಗಳಲ್ಲಿ ಗ್ರೌಂಡ್‌ ಗ್ಲಾಸ್‌ ಓಪೇಸಿಟೀಸ್‌ ಎನ್ನುವ ಅಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಹಚ್ಚಿದ್ದಾರೆ. ಗ್ರೌಂಡ್‌ ಗ್ಲಾಸ್‌ ಓಪೇಸಿಟೀಸ್‌ನಿಂದಾಗಿ ಶ್ವಾಸಕೋಶದ ಕ್ಷಮತೆ ತಗ್ಗಿಬಿಡುತ್ತದೆ. ಈ ಹಾನಿಯು ಶಾಶ್ವತವಾಗಿಯೂ ಇರಬಹುದು ಎಂದು ಸಂಶೋಧಕರು ಅನುಮಾನ ಪಡುತ್ತಾರೆ. ಗಮನಿಸಬೇಕಾದ ಅಂಶವೆಂದರೆ, ಈ ರೀತಿಯ ಶ್ವಾಸಕೋಶಕ್ಕೆ ಹಾನಿಕಾರಕವಾದ ಅಂಶಗಳು ಕೋವಿಡ್‌-19ನಿಂದಾಗಿ ತೀವ್ರ ಗ್ರಸ್ತರಾದವರಲ್ಲಷ್ಟೇ ಅಲ್ಲದೆ, ಮಂದ ಪ್ರಮಾಣದಲ್ಲಿ ರೋಗ ಲಕ್ಷಣವಿರುವವರು ಅಥವಾ ರೋಗಲಕ್ಷಣವಿಲ್ಲದವರಲ್ಲೂ (ಎಸಿಂಪ್ಟೋಮ್ಯಾಟಿಕ್‌) ಕಾಣಿಸಿಕೊಳ್ಳುತ್ತಿವೆ.

Advertisement

ಸಾರ್ಸ್‌ ಸಮಯದಲ್ಲೂ: 2002-2003ರಲ್ಲಿ ಜಗತ್ತನ್ನು ಕಾಡಿದ ಸಾರ್ಸ್‌ ರೋಗದ ದುಷ್ಪರಿಣಾಮವನ್ನು ಈಗಲೂ ಅನೇಕರು ಎದುರಿಸುತ್ತಿದ್ದಾರೆ. ಸಾರ್ಸ್‌ ಸೋಂಕಿತರಾದವರ ಶ್ವಾಸಕೋಶದಲ್ಲೂ ಇದೇ ರೀತಿಯದ್ದೇ ಗ್ರಾಂಡ್‌-ಗ್ಲಾಸ್‌ ಓಪೇಸಿಟೀಸ್‌ ಪತ್ತೆಯಾಗಿದ್ದವು. ಅಂದು ಸೋಂಕಿತರಾಗಿದ್ದವರಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಇಂದಿಗೂ ಶ್ವಾಸಕೋಶದ ಸಾಮರ್ಥ್ಯ ಕುಂಠಿತವಾಗಿಯೇ ಇದೆ ಎಂದು ಕೋಹಾರ್ಟ್‌ ಅಧ್ಯಯನ ವರದಿ ಹೇಳುತ್ತದೆ. ಕೋವಿಡ್‌-19ಗೂ, ಆಗ ಕಾಡಿದ ಸಾರ್ಸ್‌ ಮತ್ತು ಮರ್ಸ್‌ ರೋಗಗಳಿಗೆ ವ್ಯತ್ಯಾಸವೇನೆಂದರೆ, ಅವೆರಡೂ ರೋಗಗಳಲ್ಲಿ ಸಾಮಾನ್ಯವಾಗಿ ಸೋಂಕಿತನ ಒಂದು ಶ್ವಾಸಕೋಶ‌ದ ಮೇಲೆ ಪರಿಣಾಮ ಉಂಟಾಗುತ್ತದೆ. ಆದರೆ ಕೋವಿಡ್‌-19 ಎರಡೂ ಶ್ವಾಸಕೋಶಗಳಿಗೂ ತೊಂದರೆ ಮಾಡಬಲ್ಲದು! ಈ ಕಾರಣಕ್ಕಾಗಿಯೇ, ಜನರು ಎಚ್ಚರಿಕೆಯಿಂದಿರಲೇಬೇಕು. ಸಾಮಾಜಿಕ ಅಂತರ, ಸ್ವತ್ಛತೆಯನ್ನು ಚಾಚೂತಪ್ಪದೇ ಪಾಲಿಸುವುದರಲ್ಲೇ ಜಾಣತನವಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಟೆಸ್ಟ್‌ ಪಾಸಿಟಿವಿಟಿ ದರ ಯಾವ ರಾಜ್ಯದಲ್ಲೆಷ್ಟು?
ದೇಶದ ಎಲ್ಲಾ ರಾಜ್ಯಗಳಲ್ಲೂ ಟೆಸ್ಟ್‌ ಪಾಸಿಟಿವಿಟಿ ರೇಟ್‌(ಟಿಪಿಆರ್‌) ಏಕ ರೀತಿಯಲ್ಲಿ ಇಲ್ಲ. ಮಹಾರಾಷ್ಟ್ರದಲ್ಲಿ ಪ್ರತಿ 100 ಟೆಸ್ಟ್‌ಗಳಲ್ಲಿ 17 ಜನ ಸೋಂಕಿತರು ಪತ್ತೆಯಾಗುತ್ತಿದ್ದರೆ, ಕರ್ನಾಟಕದಲ್ಲಿ 100 ಟೆಸ್ಟ್‌ಗಳಲ್ಲಿ ಎರಡು ಪಾಸಿಟಿವ್‌ ಕೇಸುಗಳು ಪತ್ತೆಯಾಗುತ್ತಿವೆ. ಗಮನಿಸಬೇಕಾದ ಸಂಗತಿಯೆಂದರೆ, ನೆರೆಯ ತೆಲಂಗಾಣದಲ್ಲಿ ಹಠಾತ್ತನೆ ಟಿಪಿಆರ್‌ ದರದಲ್ಲಿ ಏರಿಕೆಯಾಗಿರುವುದು.
ಮಹಾರಾಷ್ಟ್ರ 16.82
ದೆಹಲಿ 16.58
ತೆಲಂಗಾಣ 15.10
ಗುಜರಾತ್‌ 8.50
ತಮಿಳುನಾಡು 6.84
ಬಿಹಾರ 4.82
ಕರ್ನಾಟಕ 1.84
ಆಂಧ್ರ 1.44

ರಾಜ್ಯವಾರು ಕೋವಿಡ್‌ ಮರಣ ದರ
ಆದಾಗ್ಯೂ ಕೋವಿಡ್‌-19ನಿಂದಾಗಿ ಮೃತಪಟ್ಟವರ ಸಂಖ್ಯೆ ಮಹಾರಾಷ್ಟ್ರದಲ್ಲೇ ಅಧಿಕವಿದೆಯಾದರೂ, ಮರಣ ದರವು ಈಗಲೂ ಗುಜರಾತ್‌ನಲ್ಲೇ ಅತ್ಯಧಿಕವಿದೆ. ಅಲ್ಲಿ ಇದುವರೆಗೂ 28 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರೆ, ಮೃತರ ಸಂಖ್ಯೆ 1,700 ದಾಟಿದೆ.
ಗುಜರಾತ್‌ 6.02 ಪ್ರತಿಶತ
ಮಹಾರಾಷ್ಟ್ರ 4.7 ಪ್ರತಿಶತ
ದಿಲ್ಲಿ 3.45 ಪ್ರತಿಶತ
ಉತ್ತರಪ್ರದೇಶ 3.11 ಪ್ರತಿಶತ
ತೆಲಂಗಾಣ 2.3 ಪ್ರತಿಶತ
ಕರ್ನಾಟಕ 1.54 ಪ್ರತಿಶತ
ತಮಿಳುನಾಡು 1.29 ಪ್ರತಿಶತ

ಕೋವಿಡ್‌-19 ಪರೀಕ್ಷೆ: ಎಲ್ಲಿ ಎಷ್ಟು?
ತಮಿಳುನಾಡು 9 ಲಕ್ಷ 44 ಸಾವಿರ
ಮಹಾರಾಷ್ಟ್ರ 8 ಲಕ್ಷ 26 ಸಾವಿರ
ರಾಜಸ್ಥಾನ 7 ಲಕ್ಷ 26 ಸಾವಿರ
ಆಂಧ್ರಪ್ರದೇಶ 7 ಲಕ್ಷ 14 ಸಾವಿರ
ಉತ್ತರಪ್ರದೇಶ 5 ಲಕ್ಷ 88 ಸಾವಿರ
ಕರ್ನಾಟಕ 5 ಲಕ್ಷ 26 ಸಾವಿರ
ಪ. ಬಂಗಾಳ 4 ಲಕ್ಷ 20 ಸಾವಿರ
ದಿಲ್ಲಿ 4 ಲಕ್ಷ
ಗುಜರಾತ್‌ 3 ಲಕ್ಷ 34 ಸಾವಿರ
ಮಧ್ಯಪ್ರದೇಶ 3 ಲಕ್ಷ 7 ಸಾವಿರ

Advertisement

Udayavani is now on Telegram. Click here to join our channel and stay updated with the latest news.

Next