ಬೆಂಗಳೂರು: ಒಂದು ವಾರದಲ್ಲಿ ವಿದೇಶಗಳಿಂದ ಆಗಮಿಸಿದ ಸಾವಿರಾರು ಮಂದಿ ಪೈಕಿ ಒಟ್ಟಾರೆ 20 ಮಂದಿಗೆ ಕೊರೊನಾ ದೃಢಪಟ್ಟಿದೆ. ಇವರೆಲ್ಲರ ಗಂಟಲುದ್ರವ ಮಾದರಿಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್‌ಗೆ ಕಳುಹಿಸಿದ್ದು, ಬುಧವಾರ ವರದಿ ಕೈಸೇರುವ ಸಾಧ್ಯತೆಯಿದೆ.
ನಗರಕ್ಕೆ ಬಂದಿಳಿದ ವಿದೇಶಿ ಪ್ರಯಾಣಿಕರ ಪೈಕಿ ಸೋಂಕು ಕಾಣಿಸಿಕೊಂಡ 20 ಜನರಲ್ಲಿ 12 ಮಂದಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಉಳಿದವರು ಅಪೋಲೋ, ಮಣಿಪಾಲ್ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲರ ಗಂಟಲು ದ್ರವದ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬುಧವಾರ ಬರುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲರ ಚಿತ್ತ ಈಗ ವರದಿಯತ್ತ ನೆಟ್ಟಿದೆ. ವಿದೇಶಗಳಿಂದ ನಗರಕ್ಕೆ ಬರುವವರ ಮೇಲೆ ತೀವ್ರ ನಿಗಾ ವಹಿಸುವ ಮೂಲಕ ಒಮಿಕ್ರಾನ್ ಸೇರಿ ಎಲ್ಲ ಮಾದರಿ ಸೋಂಕು ಪತ್ತೆ ಕಾರ್ಯ ನಡೆಯುತ್ತಿದೆ. ವಾರದಲ್ಲಿ 20 ಪ್ರಯಾಣಿಕರಿಗೆ ಸೋಂಕು ದೃಢಪಟ್ಟಿದ್ದು, ಡಿ.15 ರಂದು ವರದಿ ಬರಲಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾಹಿತಿ ನೀಡಿದರು.
ಪ್ರಕರಣ ಏರಿಕೆ ಕ್ರಮ; ಹೆಚ್ಚಿದ ಆತಂಕ: ಭೀತಿ ಹುಟ್ಟಿಸಿರುವ ರೂಪಾಂತರಿ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತದೆ ಎಂಬುದನ್ನು ಇಂಗ್ಲೆಂಡ್ ಅಧ್ಯಯನ ಸಮಿತಿ ತಿಳಿಸಿದೆ. ದೇಶಾದ್ಯಂತ ಒಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ ಕ್ರಮದಲ್ಲಿ ಸಾಗಿದೆ. ಈ ನಡುವೆ ದೇಶದಲ್ಲಿ ಜನವರಿಯಲ್ಲಿ ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಗ್ಗೆ ಕೇಂದ್ರಸರ್ಕಾರ ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ವಿದೇಶಿಗರಲ್ಲಿ ಕೊರೊನಾ ದೃಢವಾಗಿರುವುದು ಆತಂಕ ಹುಟ್ಟಿಸಿದೆ. ವಿದೇಶಿ ಪ್ರಯಾಣಿಕರ ಪೈಕಿ ಸೋಂಕಿತರ ಸಂಪರ್ಕಕ್ಕೆ 5 ಮಂದಿ ಪ್ರಾಥಮಿಕ ಮತ್ತು 20 ಜನ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಇವರ ಕೋವಿಡ್ ವರದಿಗಳು ನೆಗೆಟಿವ್ ಬಂದಿದ್ದರೂ, ಸೋಂಕಿತರ ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷಾ ವರದಿ ಬರುವವರೆಗೂ ಕ್ವಾರಂಟೈನ್‌ಗೆ ಒಳಪಡಿಸಿ ನಿಗಾ ವಹಿಸಲಾಗಿದೆ.
ಮತ್ತೂಂದೆಡೆ ದಕ್ಷಿಣ ಆಫ್ರಿಕದಿಂದ ಡಿ. 1ರಂದು ಬಂದಿದ್ದ 34 ವರ್ಷದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದಿತ್ತು. ಆದರೆ, ಖಾಸಗಿ ಲ್ಯಾಬ್‌ನಲ್ಲಿ ಮತ್ತೂಮ್ಮೆ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ದೃಢಪಟ್ಟಿತ್ತು. ಮಾದರಿಯನ್ನು ಜೀನೋಮಿಕ್ ಸಿಕ್ವೆನ್ಸಿಂಗ್‌ಗೆ ಕಳುಹಿಸಿದಾಗ ಡಿ. 11ರಂದು ಒಮಿಕ್ರಾನ್ ಪತ್ತೆಯಾಗಿತ್ತು. ಅವರ ಮೇಲೂ ನಿಗಾ ವಹಿಸಲಾಗಿದೆ.