ಗಂಗಾವತಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರು, ಕೂಲಿಕಾರರು, ಕುಶಲಕರ್ಮಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆದರೆ, ಜಿಲ್ಲೆಯ ಕೆಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ್ಮಿಕರಿಗೆ ಹಣ ನೀಡದೆ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ಯಾಕೇಜ್ ಅನ್ವಯ ಹಣ ಪಡೆದ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಪ್ರಸಕ್ತ ಸಾಲಿನಲ್ಲೂ ಪ್ರೋತ್ಸಾಹಧನ ಜಮಾ ಆಗಿದೆ. ಕಳೆದ ವರ್ಷ ಪ್ರೋತ್ಸಾಹಧನ ಸ್ವೀಕರಿಸದವರು ಅಗತ್ಯ ದಾಖಲಾತಿಗಳ ಜತೆಗೆ ಅರ್ಜಿ ಸಲ್ಲಿಸಲುಜೂ.31ರವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಕೆಲ ಬ್ಯಾಂಕ್‌ನವರು ಸರ್ಕಾರ ಜಮಾಮಾಡಿದ ಹಣದಲ್ಲಿ ಹಿಂದಿನ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದು, ಫಲಾನುಭವಿಗಳು ಇದನ್ನುಪ್ರಶ್ನಿಸಿದರೆ ಬ್ಯಾಂಕ್ ಅಧಿ ಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ.
ಈಗಾಗಲೇ ಹಲವು ದೂರಿನ ಅನ್ವಯ ಸಿಎಂ ಯಡಿಯೂರಪ್ಪ ಕೊರೊನಾ ಸಂಕಷ್ಟದಲ್ಲಿರುವವರ ಬ್ಯಾಂಕ್ ಖಾತೆಗೆ ಸರ್ಕಾರ ಘೋಷಣೆ ಮಾಡಿದಪ್ಯಾಕೇಜ್ ಹಣ ನೇರವಾಗಿ ಫಲಾನುಭವಿಗಳಿಗೆ ವಿತರಿಸಬೇಕು. ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಆದೇಶಮಾಡಿದ್ದರೂ ಕೆಲ ಬ್ಯಾಂಕ್‌ಗಳ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷದಿಂದ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಯೋಜನೆಯ ಕೆಲ ಫಲಾನುಭವಿಗಳು ಸಾಲದ ಕಂತನ್ನು ಪಾವತಿಸುವಲ್ಲಿ ವಿಳಂಬ ಮಾಡಿದ್ದಾರೆ.
ಈ ಮಧ್ಯೆ ಕೇಂದ್ರ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡಲು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ., ರಾಜ್ಯ ಸರ್ಕಾರ ಕೊರೊನಾ ಎರಡನೇ ಅಲೆಸಂದರ್ಭದಲ್ಲಿ 1450 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿ ಅಸಂಘಟಿತ ವಲಯದಕಾರ್ಮಿಕರ ಬ್ಯಾಂಕ್ ಖಾತೆಗೆ 2 ಮತ್ತು 5 ಸಾವಿರ ರೂ.ಗಳನ್ನು ಈಗಾಗಲೇ ಜಮಾ ಮಾಡುತ್ತಿವೆ. ಈ ಹಣವನ್ನು ಫಲಾನುಭವಿಗಳು ಪಡೆಯಲುಬ್ಯಾಂಕಿಗೆ ತೆರಳಿದರೆ ಸರ್ಕಾರದ ಪ್ರೋತ್ಸಾಹಧನ ಸಾಲದ ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲ ಎಂಬ ಮಾಹಿತಿ ಬರುತ್ತಿದೆ. ಮೊಬೈಲ್‌ಗೆ ಸಹ ಸಾಲದಖಾತೆಗೆ ಹಣ ಜಮಾ ಆಗಿರುವ ಸಂದೇಶ ರವಾನೆಯಾಗಿವೆ.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸರಕಾರ ಅಸಂಘಟಿತ ಕಾರ್ಮಿಕರಿಗೆ ಕುಶಲಕರ್ಮಿಗಳಿಗೆ ಪ್ರೋತ್ಸಾಹ ಧನ ನೀಡಿದೆ. ಕುಶಲಕರ್ಮಿಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮಾ ಆಗಿದ್ದು, ಕೆಲ ಬ್ಯಾಂಕ್ ಗಳು ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆಜಮಾ ಮಾಡಿಕೊಂಡಿರುವ ವರದಿಯಾಗಿದೆ.ಈಗಾಗಲೇ ಮುಖ್ಯಮಂತ್ರಿಗಳುಪ್ರೋತ್ಸಾಹಧನ ಸಾಲದ ಖಾತೆಗೆ ಜಮಾಮಾಡಿಕೊಳ್ಳದಂತೆ ಸೂಚನೆ ನೀಡಿದ್ದಾರೆ. ಗಂಗಾವತಿಯಲ್ಲಿ ಪ್ರೋತ್ಸಾಹ ಧನ ಜಮಾ ಮಾಡಿಕೊಳ್ಳುವ ಪ್ರಕರಣ ವರದಿಯಾಗಿದೆ.ಕೂಡಲೇ ಲೀಡ್ ಬ್ಯಾಂಕ್ ಮ್ಯಾನೇಜರ್ ಗಳಿಗೆ ಮಾತನಾಡಿ ಸಾಲದ ಖಾತೆಗೆ ಜಮಾಮಾಡಿಕೊಳ್ಳದಂತೆ ಸಮಂಜಸ ಸೂಚನೆ ನೀಡಲಾಗುತ್ತದೆ.
– ಯು .ನಾಗರಾಜ್, ತಹಶೀಲ್ದಾರ
ಕೊರೊನಾ ಲಾಕ್‌ಡೌನ್ ಹಾಗೂ ಇತರೆ ಕಾರಣಕ್ಕಾಗಿ ಬದುಕು ನಡೆಸುವುದು ಕಷ್ಟವಾಗಿದೆ. ಸಿಎಂ ಯಡಿಯೂರಪ್ಪ ಕುಶಲಕರ್ಮಿಗಳು, ಅಸಂಘಟಿತ ವಲಯದ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ನೀಡಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಬ್ಯಾಂಕಿನವರು ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.
– ಹುಲುಗೇಶ ಮಾದರ್ ಪ್ರೋತ್ಸಾಹಧನದ ಫಲಾನುಭವಿ
ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ಸರ್ಕಾರ ಕುಶಲಕರ್ಮಿಗಳು, ಅಸಂಘಟಿತ ಕಾರ್ಮಿಕರಿಗೆ ಪ್ರೋತ್ಸಾಹಧನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದೆ. ಕೆಲವು ಬ್ಯಾಂಕ್ ಅಧಿ ಕಾರಿಗಳುಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ವಿತರಣೆ ಮಾಡದೆ ಸಾಲದ ಖಾತೆಗೆ ಜಮಾ ಮಾಡಿಕೊಂಡಿರುವುದು ಖಂಡನೀಯ.
– ವೆಂಕಟೇಶ ಚಲುವಾದಿ ಜೆಡಿಎಸ್ ಪಕ್ಷದ ಮುಖಂಡ
-ಕೆ. ನಿಂಗಜ್ಜ