Advertisement

ದ.ಕ., ಉಡುಪಿ: 990 ಮಂದಿಗೆ ಕೋವಿಡ್‌ ಪರಿಹಾರ

12:31 AM Dec 31, 2021 | Team Udayavani |

ಉಡುಪಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಾವಿರ ಕುಟುಂಬಗಳು ಪ್ರಯೋಜನ ಪಡೆಯಲಿವೆ.

Advertisement

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಕ್ಕೆ ರಾಜ್ಯ ಸರಕಾರದಿಂದ 1 ಲಕ್ಷ ರೂ. ಹಾಗೂ ಕೇಂದ್ರ ಸರಕಾರದಿಂದ 50,000 ರೂ. ಸೇರಿ 1.50 ಲಕ್ಷ ರೂ. ನೀಡಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್‌) ಕುಟುಂಬಕ್ಕೆ ಕೇಂದ್ರ ಸರಕಾರದ 50,000 ರೂ. ಮಾತ್ರ ವಿತರಿಸಲಾಗುತ್ತದೆ. ಕೊರೊನಾ ಕಾರಣದಿಂದ ಮೃತರಾದ ವ್ಯಕ್ತಿಯ ಅವಲಂಬಿತರಿಗೆ ಅಥವಾ ಕುಟುಂಬದ ಸದಸ್ಯರ ಬ್ಯಾಂಕ್‌ ಖಾತೆಗೆ ಪರಿಹಾರದ ಮೊತ್ತವನ್ನು ನೇರವಾಗಿ ಜಮೆ ಮಾಡಲಾಗುತ್ತದೆ. ಇದಕ್ಕಾಗಿ ರಾಜ್ಯ ಸರಕಾರ 400 ಕೋಟಿ ರೂ. ಮೀಸಲಿಟ್ಟಿದೆ.

ರಾಜ್ಯ ಹಾಗೂ ಕೇಂದ್ರದ ಪರಿಹಾರವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಿದ್ಧಪಡಿಸಿರುವ ಮಾರ್ಗಸೂಚಿಯಂತೆ ನೀಡಲಾಗುತ್ತದೆ. ಮೃತರ ಅವಲಂಬಿತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರತ್ಯೇಕ ತಂತ್ರಾಂಶ ಸಿದ್ಧಪಡಿಸಲಾಗಿದೆ.

ಫ‌ಲಾನುಭವಿಗಳ ವಿವರ :

ಮೃತರ ಕುಟುಂಬದಿಂದ ಪರಿಹಾರಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ 17,098 ಅರ್ಜಿಗಳು ಸ್ವೀಕೃತವಾಗಿವೆ. ಉಡುಪಿಯ 403 ಅರ್ಜಿಗಳಲ್ಲಿ 195 ಬಿಪಿಎಲ್‌ ಕುಟುಂಬದಿಂದ ಬಂದಿದ್ದು, 141 ಅರ್ಜಿಗಳನ್ನು ಜಿಲ್ಲಾಧಿಕಾರಿ ಅನುಮೋದಿಸಿದ್ದಾರೆ. ಎಪಿಎಲ್‌ನಿಂದ ಬಂದ 208 ಅರ್ಜಿಗಳಲ್ಲಿ 154ಕ್ಕೆ  ಅನುಮೋದನೆ ಸಿಕ್ಕಿದೆ. ಒಟ್ಟು ಉಡುಪಿ ಜಿಲ್ಲೆಯ 295 ಕುಟುಂಬದವರು ಸರಕಾರದ ಕೊರೊನಾ ಪರಿಹಾರ ಪಡೆಯಲಿದ್ದಾರೆ.

Advertisement

ದ.ಕ. ಜಿಲ್ಲೆಯ 859 ಅರ್ಜಿಗಳಲ್ಲಿ 421 ಬಿಪಿಎಲ್‌ ಕುಟುಂಬದಿಂದ ಬಂದಿದ್ದು, 332ಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರೆತಿದೆ. ಎಪಿಎಲ್‌ ಕುಟುಂಬದಿಂದ ಬಂದಿರುವ 438 ಅರ್ಜಿಗಳಲ್ಲಿ 363 ಅರ್ಜಿಗೆ ಪರಿಹಾರ ಸಿಗಲಿದೆ. ದ.ಕ.ದಲ್ಲಿ ಒಟ್ಟು 695 ಕುಟುಂಬಗಳು ಪರಿಹಾರ ಪಡೆಯಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಯ 13,667 ಕುಟುಂಬಗಳು ಪರಿಹಾರ ಪಡೆಯಲಿವೆ.

ಅರ್ಜಿ ಸಲ್ಲಿಕೆ ಹೇಗೆ? :

ಕೋವಿಡ್‌ನಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬದವರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ವೈದ್ಯರಿಂದ ದೃಢೀಕರಿಸಿದ ಕೋವಿಡ್‌-19 ಪಾಸಿಟಿವ್‌ ವರದಿ (ಮೃತ ವ್ಯಕ್ತಿಗೆ ಸಂಬಂಧಿಸಿದ್ದು) ಹಾಗೂ ಮರಣ ಪ್ರಮಾಣಪತ್ರ, ಅರ್ಜಿದಾರರ ಆಧಾರ್‌ ಸಂಖ್ಯೆ ಮತ್ತು ಕುಟುಂಬದ ಇತರ ಸದಸ್ಯರಿಂದ ನಿರಾಕ್ಷೇಪಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸಲ್ಲಿಕೆಯಾಗುವ ಅರ್ಜಿಯನ್ನು ಆನ್‌ಲೈನ್‌ ತಂತ್ರಾಂಶದಲ್ಲೇ ಪ್ರತ್ಯೇಕಿಸಿ ದಾಖಲೆಗಳನ್ನು ಪರಿಶೀಲಿಸಿ, ನಿರ್ದಿಷ್ಟ ಕಾಲಮಿತಿಯೊಳಗೆ ಪರಿಹಾರವನ್ನು ಫ‌ಲಾನುಭವಿಯ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೊರ ಜಿಲ್ಲೆಯ ಆಸ್ಪತ್ರೆಯಲ್ಲಿ ಸಾವಾದರೆ ಪರಿಶೀಲನೆ ವಿಳಂಬ? :

ಕೊರೊನಾದಿಂದ ಆಸ್ಪತ್ರೆಯಲ್ಲಿ ಮೃತರಾ ದವರ ಮಾಹಿತಿಯನ್ನು ಆಸ್ಪತ್ರೆಯಿಂದ ಜಿಲ್ಲಾ ಡಳಿತಕ್ಕೆ ನೀಡಲಾಗುತ್ತದೆ. ಮೃತರು ಅದೇ ಜಿಲ್ಲೆ ಯವರಾಗಿದ್ದರೆ ಕುಟುಂಬದವರು ಪರಿಹಾರಕ್ಕೆ ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆ ಅಗು ವುದಿಲ್ಲ. ಹೊರ ಜಿಲ್ಲೆಯವರಾಗಿದ್ದರೆ ಒಂದು ಜಿಲ್ಲಾಡಳಿತ ದಿಂದ ಇನ್ನೊಂದು ಜಿಲ್ಲಾಡಳಿತಕ್ಕೆ ಪ್ರಕರಣ ವರ್ಗಾವಣೆ ಆಗಬೇಕಿರುವುದರಿಂದ ಪರಿಶೀಲನೆ ವೇಳೆ ವಿಳಂಬವಾಗುತ್ತಿದೆ ಎಂಬ ಆರೋಪವೂ ಇದೆ.

ಮೃತಪಟ್ಟವರು (ಡಿ. 29ವರೆಗೆ)

ಉಡುಪಿ ಜಿಲ್ಲೆ   491

ದ.ಕ. ಜಿಲ್ಲೆ          1,693

ರಾಜ್ಯದಲ್ಲಿ         38,324

ಸ್ವೀಕೃತ ಅರ್ಜಿಗಳು :

ಉಡುಪಿ ಜಿಲ್ಲೆ   403

ದ.ಕ. ಜಿಲ್ಲೆ          859

ರಾಜ್ಯದಲ್ಲಿ         17,098

ಪರಿಹಾರಕ್ಕೆ ಅರ್ಹರು

ಉಡುಪಿ ಜಿಲ್ಲೆ   295 ಕುಟುಂಬ

ದ.ಕ. ಜಿಲ್ಲೆ          695 ಕುಟುಂಬ

ರಾಜ್ಯದಲ್ಲಿ         13,667 ಕುಟುಂಬ

Advertisement

Udayavani is now on Telegram. Click here to join our channel and stay updated with the latest news.

Next