ಚಾಮರಾಜನಗರ: ಕೋವಿಡ್ ತಡೆಯುವ ನಿಟ್ಟಿನಲ್ಲಿ ಲಸಿಕೆ ನೀಡುವ ಅಭಿಯಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ ನೀಡಿದರು.
ಶುಕ್ರವಾರ, ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮುಂಜಾಗ್ರತೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮೊದಲ ಡೋಸ್ ನೀಡುವ ಕಾರ್ಯವು ಯಶಸ್ವಿ: ಜಿಲ್ಲೆಯಲ್ಲಿ ಈಗಾಗಲೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವ ಕಾರ್ಯವು ಯಶಸ್ವಿಯಾಗಿದ್ದು, ಎರಡನೇ ಡೋಸ್ ಲಸಿಕೆ ನೀಡುವ ಕಾರ್ಯವು ಶೇ. 100ರಷ್ಟು ಆಗಬೇಕಿದೆ. 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಕೆಲಸವೂ ಜಿಲ್ಲೆಯಲ್ಲಿ ನಿರ್ವಹಿಸಬೇಕಿದೆ. ಹೀಗಾಗಿ ಲಸಿಕಾಕರಣದ ನಿರ್ವಹಣೆ ಉಸ್ತುವಾರಿಗೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ತಿಳಿಸಿದರು.
ಲಸಿಕೆ ಪಡೆಯುವ ಕಾರ್ಯಕ್ಕೆ ಉತ್ತೇಜಿಸಿ: ಯಾವ ಪ್ರದೇಶದಲ್ಲಿ ಎರಡನೇ ಡೋಸ್ ಲಸಿಕೆ ಪ್ರಗತಿ ಕಡಿಮೆಯಿದೆ ಎಂಬ ಬಗ್ಗೆ ಪರಿಶೀಲಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನೋ ಡಲ್ ಅಧಿಕಾರಿಗಳು ಒಟ್ಟಾಗಿ ಲಸಿಕೆ ಪಡೆಯಲು ಬಾಕಿ ಉಳಿದಿರುವ ಪ್ರದೇಶಗಳಲ್ಲಿ ವ್ಯಾಪಕವಾಗಿ ಭೇಟಿ ನೀಡಿ ಲಸಿಕೆ ಪಡೆಯುವ ಕಾರ್ಯಕ್ಕೆ ಉತ್ತೇಜಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು: ಜಿಲ್ಲೆಯಲ್ಲಿ 12 ರಿಂದ14 ಮತ್ತು 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣವಾಗಿ ಲಸಿಕೆ ನೀಡುವ ಕಾರ್ಯ ನಡೆಯಬೇಕಿದೆ. ಮೊದಲನೇ ಡೋಸ್ ಪಡೆದು ಕೊಂಡಿರುವ ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ನೀಡಬೇಕಿದೆ. ಶಾಲೆಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರ ನೆರವು ಪಡೆದು ಶಾಲೆಗಳಲ್ಲಿ ಒಂದು ದಿನ ಲಸಿಕಾಕರಣ ದಿನವನ್ನು ಏರ್ಪಡಿಸಿ ಮಕ್ಕಳನ್ನು ಕರೆತಂದು ಎರಡನೇ ಡೋಸ್ ಲಸಿಕೆ ನೀಡಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.
ಕೋವಿಡ್ ನಿಯಂತ್ರಣ ಸಂಬಂಧ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತರಾಗಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಬಗೆಯ ಔಷಧೋಪಚಾರಗಳು ಲಭ್ಯವಾಗಬೇಕು. ಬೇಡಿಕೆ ಇರುವ ಔಷಧಿಗಳನ್ನು ಮೊದಲೇ ಶೇಖರಿಸಿಟ್ಟಿಕೊಳ್ಳಬೇಕು. ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಗತ್ಯವಿರುವ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ ವಿಶ್ವೇಶ್ವರಯ್ಯ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಸಂಜೀವ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ಮಹೇಶ್, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್, ಡಾ. ಕಾಂತರಾಜು, ಡಾ. ಮಹದೇವು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶ್ರೀನಿ ವಾಸ್, ಡಾ. ರವಿಕುಮಾರ್, ಡಾ. ಗೋಪಾಲ್, ಡಾ. ಪ್ರಕಾಶ್, ಶಿಕ್ಷಣ ಅಧಿಕಾರಿ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗಮಲ್ಲೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗೀತಾಲಕ್ಷ್ಮೀ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.