ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಬಗ್ಗೆ ಜನರು ಮಾರ್ಚ್, ಏಪ್ರಿಲ್ ಅತೀ ಹೆಚ್ಚು ಕುತೂಹಲದಿಂದ ಕೋವಿಡ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ದರು. ಆದರೆ ಮೇ ತಿಂಗಳಿನಲ್ಲಿ ಜನರು ಕಡಿಮೆ ಸಂಖ್ಯೆಯಲ್ಲಿ ಹುಡುಕಾಟ ನಡೆಸಿದ್ದು, ಮರಳಿ ಸಿನಿಮಾ ಹಾಗೂ ಹವಾಮಾನದ ಬಗ್ಗೆ ಹಚ್ಚು ಹುಡುಕಾಟ ನಡೆಸಿರುವುದಾಗಿ ವರದಿ ತಿಳಿಸಿದೆ.
ಗೂಗಲ್ ಸರ್ಚ್ ಟ್ರೆಂಡ್ ಪ್ರಕಾರ, ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ವೈರಸ್ ಪ್ರಕರಣ ಹೆಚ್ಚುತ್ತಿರುವ ನಡುವೆಯೂ ಕೋವಿಡ್ ಗೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಅತೀ ಕಡಿಮೆ ಹುಡುಕಾಟ ನಡೆಸಿದ್ದು, ಇದು ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಅರ್ಧದಷ್ಟು ಎಂದು ವಿವರಿಸಿದೆ.
ಅತೀ ಹೆಚ್ಚು ಸರ್ಚ್ ಗೆ ಒಳಗಾಗಿದ್ದ ಕೋವಿಡ್ ವಿಷಯ ಮೇ ತಿಂಗಳಿನಲ್ಲಿ 12ನೇ ಸ್ಥಾನಕ್ಕೆ ಕುಸಿದಿತ್ತು. ಸಿನಿಮಾ, ಸುದ್ದಿ, ಅರ್ಥ ಹಾಗೂ ಹವಾಮಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಭಾರತದಲ್ಲಿ ಇವು ಅತೀ ಹೆಚ್ಚು ಸರ್ಚ್ ಗೊಳಗಾದ ವಿಷಯಗಳಾಗಿವೆ. ಅಂದರೆ ಜನರು ಕೋವಿಡ್ ಮೊದಲು ಹೇಗೆ ಜನಜೀವನ ಇದ್ದಿತ್ತೋ ಅದೇ ರೀತಿ ವಾಪಸ್ ಮರಳುತ್ತಿರುವ ಸೂಚನೆಯಾಗಿರಬಹುದು ಎಂದು ವರದಿ ವಿಶ್ಲೇಷಿಸಿದೆ.
ಕೋವಿಡ್ 19 ವೈರಸ್ ಹರಡಲು ಆರಂಭಿಸಿದ ನಂತರ ಯಾವುದೇ ಕ್ರೀಡಾ ಪಂದ್ಯಾಟಗಳು ನಡೆದಿಲ್ಲ. ಅಲ್ಲದೇ ಟ್ರೆಂಡ್ಸ್ ಪ್ರಕಾರ ಕ್ರಿಕೆಟ್ ಗಿಂತ ಐದು ಪಟ್ಟು ಕೋವಿಡ್ ವೈರಸ್ ಬಗ್ಗೆ ಜನರು ಸರ್ಚ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ಟ್ರೆಂಡಿಂಗ್ ಸರ್ಚ್ ನಲ್ಲಿ ಮೇ ತಿಂಗಳಿನಲ್ಲಿ ಲಾಕ್ ಡೌನ್ 4.0 ಹಾಗೂ ಈದ್ ಮುಬಾರಕ್ ವಿಷಯ ಹೆಚ್ಚು ಸರ್ಚ್ ಆಗಿದೆ. ಅಲ್ಲದೇ ಕೋವಿಡ್ ಗೆ ಸಂಬಂಧಿಸಿದ ಕಾಯಿಲೆ ಯಾವುದು? ಕೋವಿಡ್ ರೋಗ ಲಕ್ಷಣ ಇಲ್ಲದ ವ್ಯಕ್ತಿಯಿಂದ ಕೋವಿಡ್ ಹರಡುತ್ತದೆಯೇ? ಮೇ 17ರ ಬಳಿಕವೂ ಲಾಕ್ ಡೌನ್ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವಂತೆಯೂ ನೆಟಿಜನ್ಸ್ ಕೇಳಿರುವುದಾಗಿ ವರದಿ ಹೇಳಿದೆ.