ಬೆಂಗಳೂರು: ಅಪೌಷ್ಟಿಕತೆ ಹೆಚ್ಚಿರುವ ಉತ್ತರ ಕರ್ನಾಟಕದ ಭಾಗದಲ್ಲಿಯೇ ಕೋವಿಡ್ ಗುಣಮುಖರ ಪ್ರಮಾಣ ಹೆಚ್ಚು ಕಂಡು ಬರುತ್ತಿರುವುದು ವಿಶೇಷ!
ಅಲ್ಲಿನ ಬಹುತೇಕ ಜಿಲ್ಲೆಗಳಲ್ಲಿ ಗುಣಮುಖ ದರ ಶೇ. 80ಕ್ಕೂ ಹೆಚ್ಚಿದೆ. ಬೆಂಗಳೂರು, ಮೈಸೂರು, ತುಮಕೂರು ಸಹಿತ ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳು ಗುಣಮುಖ ದರದಲ್ಲಿ ಹಿಂದುಳಿದಿವೆ. ಈ ಬೆಳವಣಿಗೆಯು ತಜ್ಞರನ್ನು ಹುಬ್ಬೇರಿಸುವಂತೆ ಮಾಡಿದೆ.
ಸದ್ಯ ಕರ್ನಾಟಕದ ಒಟ್ಟಾರೆ ಗುಣಮುಖರ ದರ ಶೇ. 76.8ರಷ್ಟಿದೆ. ವಿಜಯಪುರ ಶೇ. 89.6 ಗುಣಮುಖ ದರ ಹೊಂದುವ ಮೂಲಕ ಜಿಲ್ಲಾವಾರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಟಾಪ್ 10ರಲ್ಲಿ ವಿಜಯಪುರ ಸಹಿತ ಆರು ಜಿಲ್ಲೆಗಳಿವೆ.
ಸದ್ಯ ಬೀದರ್ (ಶೇ.86.5), ಗದಗ (ಶೇ.84.3), ಬಾಗಲಕೋಟೆ (ಶೇ.82.8), ಬೆಳಗಾವಿ (ಶೇ.82.2) ಕಲಬುರಗಿ (ಶೇ.82.3), ರಾಯಚೂರು (ಶೇ.82.5), ಧಾರವಾಡ (ಶೇ.81.7), ಯಾದಗಿರಿ (ಶೇ.81.5) ಗುಣಮುಖ ದರವಿದೆ. ಕೊನೆಯ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಕನ್ನಡ (ಶೇ.69.8), ಚಿತ್ರದುರ್ಗ (ಶೇ.70.7), ತುಮಕೂರು (ಶೇ.71.6), ಮೈಸೂರು (ಶೇ.72.2) ಇವೆ.
ಶೀಘ್ರ ಚಿಕಿತ್ಸೆ, ಆರೋಗ್ಯ ಸಮೀಕ್ಷೆ, ಆಸ್ಪತ್ರೆ ಹಾಸಿಗೆ ಲಭ್ಯತೆ ಮಾಹಿತಿಗೆ ಆನ್‌ಲೈನ್ ಪೋರ್ಟಲ್, ಸಿಬಂದಿ ಹೆಚ್ಚಳ ಗುಣಮುಖ ದರ ಹೆಚ್ಚಲು ಕಾರಣ.
ಸೋಂಕುಪೀಡಿತರ ಮರಣ ಪ್ರಮಾಣದಲ್ಲಿ ಯಾದಗಿರಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದ ಮರಣ ದರ ಶೇ.1.6 ರಷ್ಟಿದ್ದರೆ ಯಾದಗಿರಿಯಲ್ಲಿ ಶೇ. 0.65ರಷ್ಟಿದೆ.