Advertisement

ಧಾರವಾಡ : ಜಿಲ್ಲೆಯಲ್ಲಿ ಶೇ.7.53 ಪಾಸಿಟಿವಿಟಿ ದರ ; ವೈದ್ಯಕೀಯ ಆಮ್ಲಜನಕ ಸಂಗ್ರಹಕ್ಕೆ ಸೂಚನೆ

12:22 PM Jan 12, 2022 | Team Udayavani |

ಧಾರವಾಡ : ಕೋವಿಡ್‌ ಸೋಂಕಿನ ಪ್ರಮಾಣ ಮುಂಬರುವ ವಾರಗಳಲ್ಲಿ ಹೆಚ್ಚಾಗುವ ಸಂಭವವಿದ್ದು, ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ಸಾಕಷ್ಟು
ಸಂಗ್ರಹ ಹೊಂದಿರಬೇಕು. ಆಮ್ಲಜನಕದ ನಿರಂತರ ಸರಬರಾಜಿಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|ರವಿಕುಮಾರ ಸುರಪುರ ಹೇಳಿದರು.

Advertisement

ನಗರದಲ್ಲಿ ಜಿಲ್ಲೆಯ ಕೋವಿಡ್‌ ಕಾರ್ಯಪಡೆಯೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ ಅವರು, ಔಷಧ ಮತ್ತಿತರ ಉಪಕರಣಗಳ ದಾಸ್ತಾನು ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್‌ ತಪಾಸಣಾ ಪ್ರಮಾಣವನ್ನು ಹೆಚ್ಚಿಸಿ, ಟೆಲಿ ಟ್ರಯೇಜಿಂಗ್‌, ಸಂಚಾರಿ ಟ್ರಯೇಜಿಂಗ್‌, ಸೋಂಕಿತರ ಸಂಪರ್ಕ ಪತ್ತೆ ಮತ್ತು ಹೋಂ ಐಸೋಲೇಷನ್‌ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. 15ರಿಂದ 18 ವಯಸ್ಸಿನವರಿಗೆ ಕೋವಿಡ್‌ ಲಸಿಕೆ ನೀಡುವ ಕಾರ್ಯಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲೆ ಮತ್ತು ಹಾಸ್ಟೆಲ್‌ಗ‌ಳಲ್ಲಿ ಕೈಗೊಳ್ಳಬೇಕು. ಕೋವಿಡ್‌ ತಪಾಸಣೆ ಕಾರ್ಯವನ್ನು ಬೆಳಿಗ್ಗೆ ಮತ್ತು ಸಂಜೆ ಎರಡು ವಿಭಾಗಗಳಲ್ಲಿ ಕೈಗೊಳ್ಳಬೇಕು ಎಂದರು.

ಹುಬ್ಬಳ್ಳಿಯ ಕಿಮ್ಸ್‌ನ ಹೊರರೋಗಿಗಳ ವಿಭಾಗಕ್ಕೆ ಬರುವವರಲ್ಲಿ ಜ್ವರದ ಲಕ್ಷಣವಿರುವ ಎಲ್ಲರನ್ನೂ ಕೋವಿಡ್‌ ತಪಾಸಣೆಗೆ ಒಳಪಡಿಸಬೇಕು. ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅರೆವೈದ್ಯಕೀಯ ಹಾಗೂ ಇತರ ಮಾನವ ಸಂಪನ್ಮೂಲದ ಅಗತ್ಯವಿದ್ದರೆ ಕೂಡಲೇ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಜಾಲ ರಚಿಸಿಕೊಂಡು ಪರಿಸ್ಥಿತಿ ನಿರ್ವಹಿಸಬೇಕು. ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಅಸ್ವಸ್ಥತೆ ಹೊಂದಿರುವ 60 ವರ್ಷ ಮೇಲ್ಪಟ್ಟ
ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಲಸಿಕೆ ಪಡೆಯಲು ಸಲಹೆ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಅನುಮತಿ ನೀಡಿಲ್ಲ ಎಂದಾದ ಮೇಲೆ ಪಾದಯಾತ್ರೆ ತಡೆಯಲು ಹಿಂಜರಿಕೆ‌ ಏಕೆ: ಸರ್ಕಾರಕ್ಕೆ ಹೈಕೋರ್ಟ್

ಕೋವಿಡ್‌ ಪಾಸಿಟಿವ್‌ ವರದಿ ಬಂದ ಕೂಡಲೇ ವ್ಯಕ್ತಿಯನ್ನು ಟೆಲಿಟ್ರಯೇಜಿಂಗ್‌ ಮೂಲಕ ಸಮಾಲೋಚಿಸಿ ರೋಗ ಲಕ್ಷಣಗಳನ್ನು ತಿಳಿಯಬೇಕು. ನಂತರ ಸಂಚಾರಿ ತಂಡಗಳ ಮೂಲಕ ಆ ವ್ಯಕ್ತಿಯನ್ನು ಖುದ್ದಾಗಿ ಕಂಡು ಲಕ್ಷಣಗಳನ್ನು ಖಚಿತಪಡಿಸಿಕೊಂಡು ಅಗತ್ಯವಿರುವ ಚಿಕಿತ್ಸೆಗೆ ಸಲಹೆ ನೀಡಬೇಕು. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ವೇತನ, ಗೌರವಧನ ಬಾಕಿ ಇಟ್ಟುಕೊಳ್ಳದೇ ಆದ್ಯತೆ ಮೇಲೆ ಪಾವತಿಸಬೇಕು. ಎಲ್ಲ ಸಂಬಂಧಿತ ಇಲಾಖೆಗಳು ತಮ್ಮ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಕಾರ್ಯೋನ್ಮುಖರಾಗಲು ಸೂಚಿಸಿದರು.

Advertisement

ಹು-ಧಾ ಪೊಲೀಸ್‌ ಆಯುಕ್ತ ಲಾಭೂರಾಮ, ಜಿಪಂ ಸಿಇಒ | ಬಿ.ಸುಶೀಲಾ, ಎಸ್ಪಿ ಪಿ.ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಎಸಿ ಡಾ| ಬಿ. ಗೋಪಾಲಕೃಷ್ಣ, ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಶಿವಕುಮಾರ ಮಾನಕರ ಇನ್ನಿತರರಿದ್ದರು.

ಸೋಂಕಿನ ಪ್ರಮಾಣ ಅಧಿಕವಾಗುವ ಸಂಭವ ಇರುವುದರಿಂದ ಈಗಿನಿಂದಲೇ ಸರ್ವ ಸಿದ್ಧತೆ ಮಾಡಿಕೊಳ್ಳಬೇಕು. ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ನಿರ್ವಹಣೆ ಅನುಭವಗಳನ್ನು ಆಧರಿಸಿ ಆಸ್ಪತ್ರೆಯ ಹಾಸಿಗೆಗಳು, ಕೋವಿಡ್‌ ಕೇರ್‌ ಸೆಂಟರ್‌, ವೈದ್ಯಕೀಯ ಆಮ್ಲಜನಕ ಪೂರೈಕೆ, ಔಷಧ ಮತ್ತಿತರ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು.
– ಡಾ| ರವಿಕುಮಾರ ಸುರಪುರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next