ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ರಣಕೇಕೆ ಮುಂದುವರಿದಿದೆ. ಭಾನುವಾರ ಎಂಟು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 261ಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ಹೊಸದಾಗಿ ಕೆಲವು ಬಡಾವಣೆಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಪಾಸಿಟಿವ್ ಬಂದಿರುವ ಎಂಟು ಜನರ ಪೈಕಿ ನಾಲ್ವರಲ್ಲಿ ತೀವ್ರ ಶೀತ, ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಗಾಂಧಿ ಬಜಾರ್‌ನ ಉಪ್ಪಾರ ಕೇರಿ ಎರಡನೇ ಕ್ರಾಸ್ ನಿವಾಸಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.
ಮುಂಜಾಗ್ರತಾ ಕ್ರಮವಾಗಿ ಬಡಾವಣೆಯ ಎರಡನೇ ಕ್ರಾಸ್ ಅನ್ನು ಸೀಲ್ ಡೌನ್ ಮಾಡಿ, ಸ್ಯಾನಿಟೈಸ್‌ಗೊಳಿಸಲಾಗಿದೆ. ಪಿ-9897 ಸೂಳೇಬೈಲು ಸೋಂಕಿತರಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 27 ವರ್ಷ (ಪಿ-21629) ಯುವಕನಿಗ ಸೋಂಕು ದೃಢಪಟ್ಟಿದೆ. ಟಿಪ್ಪುನಗರ ಎ ಬ್ಲಾಕ್‌ನ ಐದನೇ ಕ್ರಾಸ್ ನಿವಾಸಿ, ಬೆಂಗಳೂರಿನಿಂದ ವಾಪಸ್ ಬಂದಿದ್ದ 40 ವರ್ಷದ ಹೊಸಮನೆ ಬಡಾವಣೆಯ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಗೋಪಾಳ ಬಡಾವಣೆಯ ಆದಿ ರಂಗನಾಥ ದೇವಾಲಯದ ರಸ್ತೆಯ ವ್ಯಕ್ತಿಗೂ ಕೋವಿಡ್ ದೃಢಪಟ್ಟಿದ್ದು, ಈ ವ್ಯಕ್ತಿಗೆ ಸೋಂಕು ಹೇಗೆ ಬಂತು ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
ಬಳ್ಳಾರಿಯಿಂದ ಬಂದಿದ್ದ ಮೆಸ್ಕಾಂ ಜೆಇ: ಸಾಗರದ ಮೆಸ್ಕಾಂ ಕಚೇರಿಯಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದ 27 ವರ್ಷ ಯುವತಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಸಾಗರದ ಮಾರ್ಕೆಟ್ ರಸ್ತೆಯ ಲಿಂಬು ಸರ್ಕಲ್ ಬಳಿ ವಾಸವಾಗಿದ್ದ ಅವರು ಬಳ್ಳಾರಿಗೆ ಹೋಗಿ ವಾಪಸ್ ಬಂದಿದ್ದರು. ಟ್ರಾವೆಲ್ ಹಿಸ್ಟರಿ ಇರುವುದರಿಂದ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನೆಯ ಮಾಲೀಕರು ಒತ್ತಾಯಿಸಿದ್ದರು. ಹೀಗಾಗಿ, ಪರೀಕ್ಷೆ ಮಾಡಿಕೊಂಡಿದ್ದರು. ಇವರಲ್ಲಿ ಯಾವುದೇ ಲಕ್ಷಣಗಳು ಇಲ್ಲ. ಆದರೂ ಕೋವಿಡ್ ಪಾಸಿಟಿವ್ ಬಂದಿದೆ. ಇವರೊಂದಿಗೆ ಕೆಲಸ ಮಾಡುತ್ತಿದ್ದ ಸಹುದ್ಯೋಗಿಗಳಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಲಿಂಬು ಸರ್ಕಲ್ ಅನ್ನು ಸೀಲ್ ಡೌನ್ ಮಾಡಿದ್ದು, ಜನರಲ್ಲಿ ಭೀತಿಯಲ್ಲಿದ್ದಾರೆ. ಸೊರಬದ ಓರ್ವ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಇನ್ನೊಬ್ಬರು ಬಾಳೆಹೊನ್ನೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದು ಅವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.