Advertisement

ನಾಲ್ವರಿಗೆ ಕೋವಿಡ್ ಪಾಸಿಟಿವ್‌: ಜಿಲ್ಲೆಯಲ್ಲಿ ಸದ್ಯ 19 ಸಕ್ರಿಯ ಪ್ರಕರಣ

01:08 PM Jun 26, 2020 | mahesh |

ಬೆಳಗಾವಿ: ಕೆಲ ದಿನಗಳಿಂದ ಶಾಂತವಾಗಿದ್ದ ಜಿಲ್ಲೆಯಲ್ಲಿ ಗುರುವಾರ ಮತ್ತೆ ನಾಲ್ಕು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಿಂದ  ಆಗಮಿಸಿರುವ ಎಂಟು ವರ್ಷದ ಬಾಲಕ, ಮೂವರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಎಂಟು ವರ್ಷದ ಬಾಲಕ, 29 ವರ್ಷದ ಮಹಿಳೆ, 30 ವರ್ಷದ ಮಹಿಳೆ ಹಾಗೂ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇನ್ನೂ 1419 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ ಸದ್ಯ 298 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ ಕೇವಲ 19 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಇಂದಿನವರೆಗೆ 22794 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 7747 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 4193 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 10835 ಜನರು 28 ದಿನಗಳ ಗೃಹ ನಿಗಾ ಅವಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 21498 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 19276 ವರದಿ ನಕಾರಾತ್ಮಕವಾಗಿದೆ. ಒಟ್ಟು 1419 ಜನರ ವರದಿಗಾಗಿ ಕಾಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 318 ಆಗಿದ್ದು, ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಎಂಟು ಜನರಿದ್ದಾರೆ. ಹಿರೇಬಾಗೇವಾಡಿಯ
ವೈದ್ಧೆ ಕೋವಿಡ್‌ದಿಂದ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

ಬೈಲಹೊಂಗಲ: ಗರ್ಭಿಣಿಗೆ ಕೋವಿಡ್ -ಪಟ್ಟಣದಲ್ಲಿ ಆತಂಕ
ಬೈಲಹೊಂಗಲ: ಪಟ್ಟಣದ ನಿವಾಸಿ ಗರ್ಭಿಣಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಪಟ್ಟಣದ ಜನತೆಯಲ್ಲಿ ಆತಂಕ ಮೂಡಿದೆ. ಹುಬ್ಬಳ್ಳಿಯಲ್ಲಿ ವಾಸವಿರುವ, ಲ್ಯಾಬ್‌ ಯಂತ್ರಗಳ ರಿಪೇರಿ ಮಾಡುತ್ತಿದ್ದ ಚೆನ್ನೈ ಮೂಲದ ಈಕೆಯ ಪತಿಗೆ ಸೋಂಕು ತಗುಲಿದ್ದರಿಂದ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿಯು ಬೈಲಹೊಂಗಲದ ಮಹಾದೇವ ಸ್ವಾಮಿ ಮಠದ ಹಿಂಭಾಗದಲ್ಲಿರುವ ಬಸವನಗರದಲ್ಲಿನ ಪತ್ನಿ ಮನೆಗೆ ಕಳೆದ ಜೂ.14 ರಂದು ಬಂದು ಹೋಗಿದ್ದರಿಂದ ಪತ್ನಿಯ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಈಕೆಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಮಹಿಳೆಯನ್ನು ಪಟ್ಟಣದ ಹೊರವಲಯದ ವಸತಿ ಶಾಲೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೊಂಕಿತ ಮಹಿಳೆ ಸಂಪರ್ಕಕ್ಕೆ ಬಂದವರ  ಪಟ್ಟಿ ಮಾಡಲಾಗುತ್ತಿದೆ.

ಸೋಂಕಿತ ಮಹಿಳೆ ತಂದೆ ಇತ್ತೀಚೆಗೆ ಉಪ ತಹಶೀಲ್ದಾರ್‌ ಹುದ್ದೆಯಿಂದ ನಿವೃತ್ತರಾಗಿದ್ದು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತಂಕಪಡುವಂತಾಗಿದೆ. ಈ ವ್ಯಕ್ತಿ ಗುರುವಾರದ ವರೆಗೆ ಪಟ್ಟಣದಲ್ಲಿ ಸಂಚರಿಸಿದ್ದು, ಸೋಂಕು ಪಟ್ಟಣದ ಅನೇಕ ಜನರಿಗೆ ಹರಡಿರಬಹುದು ಎಂಬುದು ಅಧಿಕಾರಿಗಳಿಗೆ ತಲೆನೋವಾಗಿದೆ. ಇವರ ಮನೆಯಲ್ಲಿ ಮಹಿಳೆಯ ತಾಯಿ, ಸಹೋದರ ಹಾಗೂ ಕೆಲಸದ ಮಹಿಳೆ ಸಹ ಇರುತ್ತಿದ್ದು, ಕೆಲಸದ ಮಹಿಳೆಯು ಸೋಂಕಿತೆಯ ಮನೆ ಸೇರಿ ಇನ್ನೂ 7-8 ಮನೆಗಳ ಕೆಲಸ ಮಾಡುತ್ತಿದ್ದಾಳೆ. ಕುಟುಂಬದವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತೆಯ ಮನೆ ಸುತ್ತಲಿನ 60 ಮೀಟರ್‌ ವ್ಯಾಪ್ತಿಯಲ್ಲಿ ಎರಡು ಒಣಿಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಹುಬ್ಬಳ್ಳಿ ಅಧಿ ಕಾರಿಗಳ ನಿರ್ಲಕ್ಷ: ಪತಿಗೆ ಕೋವಿಡ್ ಇರುವ ಶಂಕೆ ಮೂಡಿದಾಗ ಬೈಲಹೊಂಗಲದಲ್ಲಿರುವ ಪತ್ನಿ ಹಾಗೂ ಮನೆಯವರನ್ನು ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್‌ ಮಾಡಲು ಮಾಹಿತಿ ನೀಡಬೇಕಾಗಿತ್ತು ಅದನ್ನು ಮಾಡದಿರುವುದರಿಂದ ಮನೆಯವರು ಅಕ್ಕಪಕ್ಕದ ಹಾಗೂ ಪಟ್ಟಣದ ಜನತೆಯ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಹುಬ್ಬಳ್ಳಿ ಅಧಿ ಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚುವ ಆತಂಕ ಎದುರಾಗಿದೆ.

Advertisement

ಪರೀಕ್ಷಾರ್ಥಿಗಳಿಗೂ ಸಮಸ್ಯೆ: ಬೆಳಗ್ಗೆ ಸಾಮಾನ್ಯವಾಗಿದ್ದ ಪ್ರದೇಶ ಎಸ್‌ಎಸ್‌ ಎಲ್‌ಸಿ ಪರೀಕ್ಷೆ ಮುಗಿಸಿ ಬರುವಷ್ಟರಲ್ಲಿ ಸೀಲ್‌ಡೌನ್‌ ಆಗಿದ್ದನ್ನು ಕಂಡು ವಿದ್ಯಾರ್ಥಿನಿ ದಂಗಾದಳು. ಈ ಕುರಿತು ಬಿಇಓ ಪಾರ್ವತಿ ವಸ್ತ್ರದ ಪತ್ರಿಕೆಯೊಂದಿಗೆ ಮಾತನಾಡಿ, ಮುಂದಿನ ಪರೀಕ್ಷೆಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ವಿದ್ಯಾರ್ಥಿನಿಗೆ ವ್ಯವಸ್ಥೆ
ಮಾಡಲಾಗುವುದು ಎಂದರು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಡಾ| ಡಿ.ಎಚ್‌.ಹೂಗಾರ, ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ, ಟಿಎಚ್‌ಒ ಡಾ| ಎಸ್‌.ಎಸ್‌. ಸಿದ್ಧನ್ನವರ, ಪಿಎಸ್‌ಐ ಈರಪ್ಪ ರಿತ್ತಿ, ಪುರಸಭೆ ಸದಸ್ಯೆ ಅಂಜನಾ ಬೊಂಗಾಳೆ, ಆರೋಗ್ಯ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next