Advertisement
ಕೋವಿಡ್ ಸೋಂಕಿನ ಎರಡನೇ ಅಲೆ ಪಾಲ್ಘರ್ ಜಿಲ್ಲೆಯ ಹೆಚ್ಚಿನ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದು, ರೋಗಿಗಳು ಪರದಾಡುವಂತಾಗಿದೆ. ಇನ್ನೊಂದೆಡೆ ಆಮ್ಲಜನಕದ ಸಿಲಿಂಡರ್‌ಗಳ ತೀವ್ರ ಕೊರತೆಯು ರೋಗಿಗಳ ಸಾವಿಗೆ ಕಾರಣವಾಗುತ್ತಿದೆ. ಈ ಪ್ರದೇಶದ ಹೆಚ್ಚಿನ ಆಸ್ಪತ್ರೆಗಳು ರೆಮ್‌ಡಿಸಿವಿರ್ ಔಷಧ ಕೊರತೆಯನ್ನು ಎದುರಿಸುತ್ತಿವೆ. ರೋಗಿಗಳ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ದುಪ್ಪಟ್ಟು ಬೆಲೆ ನೀಡುವಂತಾಗಿದೆ.
Related Articles
Advertisement
ಈ ಪ್ರದೇಶದ ಸುಮಾರು 75 ಆಸ್ಪತ್ರೆಗಳಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ. ಆದರೆ ಪ್ರಕರಣಗಳ ಉಲ್ಬಣದಿಂದಾಗಿ ಸಾಕಷ್ಟು ಸಂಖ್ಯೆಯ ಸಿಲಿಂಡರ್‌ಗಳನ್ನು ಒದಗಿ ಸಲು ಸಾಧ್ಯವಾಗಲಿಲ್ಲ. ಆಮ್ಲಜನಕ ಸಿಲಿಂಡರ್‌ಗಳಿಲ್ಲದೆ ಕೋವಿಡ್ ಪೀಡಿತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಲಿಯೋ ಆಕ್ಸಿಜನ್ ವ್ಯಾಪಾರಿ ನಿತಿನ್ ಸೆರೆಜೊ ಹೇಳಿದ್ದಾರೆ.
ಉತ್ಪಾದನ ಸಮಸ್ಯೆಗಳು ಹೆಚ್ಚಳ :
ಸಾಮಾನ್ಯ ದಿನಗಳಲ್ಲಿ ಒಂದು ಆಸ್ಪತ್ರೆಗೆ ನಾಲ್ಕು ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ ಹೆಚ್ಚಿನ ಆಸ್ಪತ್ರೆಗಳು ಈಗ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅವರಿಗೆ ಪ್ರತೀದಿನ ಕನಿಷ್ಠ 50 ಸಿಲಿಂಡರ್‌ಗಳು ಬೇಕಾಗುತ್ತವೆ. ಇದು ಖಾಲಿ ಸಿಲಿಂಡರ್‌ಗಳ ಕೊರತೆಗೆ ಕಾರಣವಾಗಿದೆ. ಉತ್ಪಾದನ ಘಟಕಗಳಿಂದ ಅವುಗಳನ್ನು ಪಡೆಯಲು ಕನಿಷ್ಠ 45 ದಿನಗಳಿಂದ ಎರಡು ತಿಂಗಳವರೆಗೆ ಕಾಯಬೇಕಾಗಿದೆ. ಸಿಲಿಂಡರ್‌ಗಳ ಕೊರತೆಯಿಂದಾಗಿ ಆಸ್ಪತ್ರೆಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ನಿತಿನ್ ಸೆರೆಜೊ ತಿಳಿಸಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ :
ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆಯಿದೆ ಎಂಬುದು ನಿಜ. ಕೊರತೆಯಿಂದಾಗಿ ನಮ್ಮ ಆಸ್ಪತ್ರೆಯಲ್ಲಿ ತೀವ್ರವಾಗಿ ಅನಾರೋಗ್ಯ ಪೀಡಿತ ರೋಗಿಗಳನ್ನು ದಾಖಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೆಚ್ಚು ಆಮ್ಲಜನಕ ಅಗತ್ಯವಿರುವ ರೋಗಿಗಳಿಗೆ ನಾವು ಹೇಗೆ ಚಿಕಿತ್ಸೆ ನೀಡುವುದು ಎಂದು ವಸಾಯಿಯ ಗೋಲ್ಡನ್ ಪಾರ್ಕ್ ಆಸ್ಪತ್ರೆಯ ಡಾ| ಮಾಲ್ಕಾಮ್ ಪೆಸ್ಟೊಂಜಿ ಪ್ರಶ್ನಿಸಿದ್ದಾರೆ.
ಅಗತ್ಯ ಔಷಧಗಳ ಕೊರತೆಯೂ ಇದೆ :
ಮಾರುಕಟ್ಟೆಯಲ್ಲಿ ರೆಮ್‌ಡಿಸಿವಿರ್ ಔಷಧ ಕೊರತೆಯೂ ಇದೆ. ನಮಗೆ ಪ್ರತೀದಿನ ಕನಿಷ್ಠ ರೆಮ್‌ಡಿಸಿವಿರ್ 40 ಬಾಟಲ್‌ಗಳು ಬೇಕಾಗುತ್ತವೆ. ಆದರೆ ನಮಗೆ ಪ್ರಸ್ತುತ 20 ಮಾತ್ರ ಸಿಗುತ್ತದೆ. ನನ್ನ ಆಸ್ಪತ್ರೆಯಲ್ಲಿ 50 ಹಾಸಿಗೆಗಳಿದ್ದು, ಅವೆಲ್ಲವೂ ಆಮ್ಲಜನಕ ಸೌಲಭ್ಯ ಹೊಂದಿವೆ. 50ರಲ್ಲಿ ಎಂಟು ಐಸಿಯು ಹಾಸಿಗೆಗಳಿವೆ.ಕೋವಿಡ್ ಪೀಡಿತರಿಗೆ ಹೆಚ್ಚಿನವರಿಗೆ ಆಮ್ಲಜನಕದ ವ್ಯವಸ್ಥೆ ಮತ್ತು ರೆಮ್‌ಡಿಸಿವಿರ್ ಬೇಕೇ ಬೇಕು ಎಂದು ಡಾ| ಪೆಸ್ಟೊಂಜಿ ಹೇಳಿದ್ದಾರೆ.
ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆ :
ಮಾರುಕಟ್ಟೆಯಲ್ಲಿ ರೆಮ್‌ಡಿಸಿವಿರ್ ಔಷಧಗಳ ತೀವ್ರ ಕೊರತೆ ಇದೆ. ಓರ್ವ ಕೋವಿಡ್ ರೋಗಿಗೆ ಚೇತರಿಸಿಕೊಳ್ಳಲು ರೆಮ್‌ಡಿಸಿವಿರ್‌ನ ಏಳು ಬಾಟಲುಗಳು ಬೇಕಾಗುತ್ತವೆ. ನಾವು ರೋಗಿಗಳ ಸಂಬಂಧಿಕರಲ್ಲಿ ಬಾಟಲುಗಳ ವ್ಯವಸ್ಥೆ ಮಾಡುವಂತೆ ಕೇಳುತ್ತಿದ್ದೇವೆ. ಆದರೆ ಸಮಯಕ್ಕೆ ಸರಿಯಾಗಿ ಔಷಧ ಸಿಗುವುದಿಲ್ಲ. ಈ ಮಧ್ಯೆ ಔಷಧವನ್ನು ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರು :
ವಸಾಯಿ – ವಿರಾರ್ ಮತ್ತು ನಲಸೊಪರ ಪ್ರದೇಶಗಳಲ್ಲಿ ಎರಡು ನಾಗರಿಕ ಆಸ್ಪತ್ರೆಗಳಿವೆ. ವಿರಾರ್ ಪೂರ್ವದ ಚಂದನ್ಸಾರ್‌ನಲ್ಲಿ ಒಂದು 150 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯಿದೆ. ಇದರಲ್ಲಿ 50 ಆಮ್ಲಜನಕ ಹಾಸಿಗೆಗಳಿದ್ದು, ಇವೆಲ್ಲವೂ ಈಗಾಗಲೇ ಕೋವಿಡ್ ರೋಗಿ ಗಳಿಂದ ಭರ್ತಿಯಾಗಿವೆ. ವಸಾಯಿಯ ಸಿಟಿಯಲ್ಲಿರುವ ಇನ್ನೊಂದು ಆಸ್ಪತ್ರೆಯಲ್ಲಿ 45 ಹಾಸಿಗೆಗಳನ್ನು ಸೇರಿಸಲಾಗಿದೆ. ಇದರಲ್ಲಿ 45 ಐಸಿಯುಗಳಿದ್ದು, ಸಂಪೂರ್ಣ ರೋಗಿಗಳಿಂದ ಆಕ್ರಮಿಸಿಕೊಂಡಿವೆ. ಅಲ್ಲದೆ ಎರಡು ಕ್ವಾರಂಟೈನ್ ಸೌಲಭ್ಯಗಳಿದ್ದು, 1,050 ಹಾಸಿಗೆಗಳನ್ನು ಹೊಂದಿರುವ ವರುಣ್ ಇಂಡಸ್ಟ್ರಿಯಲ್ಲಿ 100 ಆಮ್ಲಜನಕ ಹಾಸಿಗೆಗಳು ಭರ್ತಿಯಾಗಿವೆ. ವಿರಾರ್‌ನಲ್ಲಿ 300 ಹಾಸಿಗೆಗಳನ್ನು ಹೊಂದಿರುವ ಎಂಎಡಿಎ ಕ್ಯಾರಂಟೈನ್ ಸೆಂಟರ್ ಅನ್ನು ಶನಿವಾರದಿಂದ ಕಾರ್ಯರೂಪಕ್ಕೆ ತರಲಾಗುವುದು ಎಂದು ವಸಾಯಿ – ವಿರಾರ್ ಸಿಟಿ ಮುನ್ಸಿಪಾಲ್ ಕಾರ್ಪೋರೇಷನ್‌ನ ಪಿಆರ್‌ಒ ಪ್ರೊ| ಗಣೇಶ್ ಪಾಟೀಲ್ ಹೇಳಿದ್ದಾರೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆಮ್ಲಜನಕವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ತೀವ್ರ ಕೊರತೆ ಇದ್ದು, ಇದು ನಿಜವಾಗಿಯೂ ಆತಂಕಕಾರಿ. ಈ ಕಾರಣದಿಂದಾಗಿ ನಾವು ರೋಗಿಗಳನ್ನು ಮುಂಬಯಿಯ ನಾಗರಿಕ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದೇವೆ. ಇಲ್ಲಿನ ಎಲ್ಲ ಆಸ್ಪತ್ರೆಗಳು ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ.–ಡಾ| ಪ್ರವೀಣ್ ಥೋರಟ್ ವಸಾಯಿಯ ಅಪ್ಪಾಸೇಠ್ ಥೋರತ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ