Advertisement

“ಜನರಲ್ಲಿ ಧೈರ್ಯ ತುಂಬಿ, ಧೃತಿಗೆಡಿಸಬೇಡಿ’ಕೋವಿಡ್ ಗೆದ್ದ ಲ್ಯಾಬ್‌ ಟೆಕ್ನೀಶಿಯನ್‌ ಸಲಹೆ

10:53 AM Apr 13, 2020 | sudhir |

ಉಡುಪಿ: “ಇತರರನ್ನು ಧೃತಿಗೆಡಿಸುವ ಕೆಲಸಕ್ಕೆ ಕೈ ಹಾಕಬೇಡಿ, ಧೈರ್ಯ ತುಂಬಿ, ಇತರರ ಆತ್ಮವಿಶ್ವಾಸವನ್ನು ಬೆಳೆಸಿ’ ಎಂದು ಕೋವಿಡ್ ಮುಕ್ತರಾಗಿ ಮನೆಗೆ ಮರಳಿರುವ ಮಣಿಪಾಲದ ವ್ಯಕ್ತಿ ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ಇವರು ಮೂಲತಃ ದಾವಣಗೆರೆಯವರು. ಹತ್ತು ವರ್ಷಗಳಿಂದ ಮಣಿಪಾಲದಲ್ಲಿ ಲ್ಯಾಬ್‌ ಟೆಕ್ನೀಶಿಯನ್‌ ಆಗಿದ್ದಾರೆ.
ಒಂದೇ ಒಂದು ಬಾರಿ ಬಂದ ಜ್ವರ ಇವರ ಪತ್ನಿಯ ತಮ್ಮ ದುಬಾೖಯಲ್ಲಿರುವ ಕಾರಣ ಮಾ. 12ರಂದು ಅಲ್ಲಿಗೆ ತೆರಳಿದ್ದರು. ಮಾ. 18ರಂದು ಮರಳಿದ್ದರು. ಮಾ. 22ರಂದು ಜ್ವರ ಬಂತು. ಆಗ ಡೋಲೋ ಮಾತ್ರೆಯನ್ನು ಸೇವಿಸಿದರು. ಕೋವಿಡ್ ಶಂಕೆಯಿಂದ ತಾವೇ ಸ್ವಂತ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ತೆರಳಿ, ಮಾ. 23ರಿಂದ ದಾಖಲಾದರು. ಗಂಟಲು ದ್ರವದ ಪರೀಕ್ಷೆಯನ್ನು ಮಾಡಿಸಿದಾಗ ಕೋವಿಡ್ ಪಾಸಿಟಿವ್‌ ಪತ್ತೆಯಾಗಿತ್ತು. ಮಾ. 25ರಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಎ. 1ರಿಂದ ಉಡುಪಿಯ
ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಮಾ. 22ರ ಬಳಿಕ ಜ್ವರ ಬಂದಿಲ್ಲ. ಹೀಗಾಗಿ ಮಾತ್ರೆ ತಿನ್ನುವ ಪ್ರಮೇಯವೂ ಒದಗಿಲ್ಲ ಎಂದು ವಿವರಿಸಿದರು.

Advertisement

ಯಾವುದೇ ಔಷಧ ಇಲ್ಲ
ಜ್ವರ, ಇತರ ಲಕ್ಷಣಗಳಿಲ್ಲದ ಕಾರಣ ಇವರಿಗೆ ಯಾವುದೇ ತರಹದ ಔಷಧ ಕೊಟ್ಟಿರಲಿಲ್ಲ. ಮಾ. 23ರಿಂದ ಎ. 11ರ ವರೆಗೆ
ಆಸ್ಪತ್ರೆಯ ಕ್ವಾರಂಟೈನ್‌ ಅವಧಿ ಮುಗಿದಿದೆ. ಇನ್ನು 14 ದಿನಗಳ ಕ್ವಾರಂಟೈನ್‌ ಇದೆ. ಇಷ್ಟು ದಿನ ಎಲ್ಲೂ ಓಡಾಡದೆ ಮನೆಯಲ್ಲೇ ಇರುವುದು ಅನಿವಾರ್ಯ ಎನ್ನುತ್ತಾರೆ ಅವರು.

ಫೋನಿಂಗ್‌, ಚಾಟಿಂಗ್‌…
ಆಸ್ಪತ್ರೆಯಲ್ಲಿ ಹೇಗೆ ಸಮಯ ಕಳೆದಿರಿ ಎಂದು ಪ್ರಶ್ನಿಸಿದರೆ, “ಮೊಬೈಲ್‌ ಫೋನ್‌ನಲ್ಲಿ ಸುದ್ದಿಗಳನ್ನು ನೋಡುತ್ತಿದ್ದೆ. ಮನೆಯವರು, ಸ್ನೇಹಿತರ ಜತೆ ಮಾತನಾಡುತ್ತಿದ್ದೆ, ವೈದ್ಯರು, ಶುಶ್ರೂಷಕಿಯರು ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸುತ್ತಿದ್ದರು’ ಎಂದುತ್ತರಿಸಿದರು.

ಹೆದರಬೇಡಿ, ಜಾಗ್ರತೆಯಿಂದಿರಿ
ಕೋವಿಡ್ ಪಾಸಿಟಿವ್‌ ಬಂದರೂ ಹೆದರಬೇಕಾಗಿಲ್ಲ. ಶೀತ, ಜ್ವರ, ಕೆಮ್ಮು ಇದ್ದರೆ ಅದಕ್ಕೆ ಸರಿಯಾದ ಔಷಧವನ್ನು ವೈದ್ಯರು ನೀಡುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಮನೆಯಿಂದ ಹೊರಗೆ ಬಾರದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಇರಿ ಎಂದು ಹೇಳಿದರು.

ಪಾಸಿಟಿವ್‌ ಆಗಿರಿ
ವಿದೇಶದಿಂದ ಬಂದರೆ, ಜನಜಂಗುಳಿಯಲ್ಲಿ ಪಾಲ್ಗೊಂಡಿದ್ದಿದ್ದರೆ ಸ್ವಯಂ ಆಸಕ್ತಿಯಿಂದ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ಹೆದರುವ ಅಗತ್ಯವಿಲ್ಲ. ಬಿ ಪಾಸಿಟಿವ್‌. ಆದರೆ ಜಾಗರೂಕತೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

Advertisement

ದುಬಾೖ: ಅಂದು ಇಂದು
ದುಬಾೖಗೆ ಹೋದಾಗ ಅಲ್ಲಿ ಲಾಕ್‌ಡೌನ್‌ ಆಗಿರಲಿಲ್ಲ. ಎಲ್ಲ ಪ್ರವಾಸಿತಾಣಗಳಿಗೂ ಭೇಟಿ ಕೊಟ್ಟಿದ್ದೆ. ಈಗ ಅಲ್ಲಿ ಲಾಕ್‌ಡೌನ್‌ ಮಾಡಿದ್ದಾರೆಂದು ತಿಳಿದುಬಂದಿದೆ ಎಂದರು.

ಉತ್ತಮ ಶುಶ್ರೂಷೆ, ಧನ್ಯವಾದ
ಜಿಲ್ಲಾಸ್ಪತ್ರೆ, ಮಣಿಪಾಲ ಮತ್ತು ಉಡುಪಿ ಆಸ್ಪತ್ರೆಗಳಲ್ಲಿ ವೈದ್ಯರಾದಿ ಎಲ್ಲ ಸಿಬಂದಿ ಉತ್ತಮವಾಗಿ ನೋಡಿಕೊಂಡರು, ನಮಗೆ ಧೈರ್ಯ ತುಂಬಿದರು. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಪೊಲೀಸ್‌ ಇಲಾಖೆ, ವೈದ್ಯರು, ಇತರ ಸಿಬಂದಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಸುಳ್ಳು ಸುದ್ದಿ ಹರಡಿಸಬೇಡಿ
ಕೋವಿಡ್ ಪಾಸಿಟಿವ್‌ ಎಂದು ಬಂದಾಗ ನನ್ನ ಭಾವಚಿತ್ರ, ಮನೆ ಸದಸ್ಯರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಯಿತು. ನಾನು ದುಬಾೖಯಿಂದ ಮರಳಿದ ಮೇಲೆ ಪತ್ನಿ ಮನೆಗೆ ಹೋಗಿದ್ದೇನೆ, ಆಚೀಚೆ ತಿರುಗಾಡಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಯಿತು. ಕೊನೆಗೆ ಇವೆಲ್ಲ ಸುಳ್ಳೆಂದು ಸಾಬೀತಾಯಿತು. ಆದರೆ ದೂರದಲ್ಲಿರುವ ಅಪ್ಪ, ಅಮ್ಮ ಇದನ್ನು ನೋಡಿದಾಗ ಅವರ ಆತ್ಮವಿಶ್ವಾಸ ಕುಗ್ಗುವುದಿಲ್ಲವೇ? ಇಂತಹ ಸಂದರ್ಭದಲ್ಲಿ ಧೈರ್ಯ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next