Advertisement

ಗ್ರೀಕ್‌: ಕೋವಿಡ್‌ ಹೋರಾಟದಲ್ಲಿ ಯುರೋಪಿನ ಗುರಾಣಿ

06:14 PM Apr 15, 2020 | sudhir |

ಅಥೆನ್ಸ್‌ : ಏಷ್ಯಾ ಖಂಡದಲ್ಲಿ ದಕ್ಷಿಣ ಕೊರಿಯಾದಂತೆ ಯುರೋಪ್‌ನಲ್ಲಿ ಗ್ರೀಕ್‌ ಕೋವಿಡ್‌-19 ವಿರುದ್ಧ ಸಮರ್ಥ ಹೋರಾಟ ನಡೆಸಿ ಜಗತ್ತಿನ ಗಮನ ಸೆಳೆದಿದೆ.

Advertisement

ಕೇವಲ ಒಂದು ದಶಕದ ಹಿಂದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗಿದ್ದ ದೇಶವೊಂದು ಜಗತ್ತಿನ ಬಲಿಷ್ಠ ದೇಶಗಳಿಗೆ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ್ದು ಹೇಗೆ? ಇದು ತಿಳಿಯಬೇಕಾದರೆ ಗ್ರೀಸ್‌ನ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಜನರಲ್ಲಿ ದೇಶದತ್ತ ಇರುವ ಬದ್ಧತೆ ಮತ್ತು ಸಮರ್ಪಣಾ ಭಾವ ಮುಖ್ಯವಾದದ್ದು.

ಫೆಬ್ರವರಿಯಲ್ಲಿ ಕಾರ್ನಿವಲ್‌ ಉತ್ಸವ ರದ್ದುಗೊಳಿಸಿದಾಗ ಅನೇಕ ಮಂದಿ ಇದು ಅತಿರೇಕದ ಕ್ರಮ ಎಂದು ಟೀಕಿಸಿದ್ದರು. ಸರಕಾರದ ಆದೇಶವನ್ನು ಧಿಕ್ಕರಿಸಿ ಪಟ್ರದಲ್ಲಿ ಕಾರ್ನಿವಲ್‌ ಆಚರಿಸಲಾಗಿತ್ತು. ಇದು ಖಾಸಗಿ ಉತ್ಸವವಾಗಿರುವುದರಿಂದ ಸರಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಉತ್ಸವದಲ್ಲಿ ಪಾಲ್ಗೊಂಡವರು ಹೇಳಿದ್ದರು. ಆದರೆ ಅನಂತರ ಜಗತ್ತಿನಾದ್ಯಂತ ಕೋವಿಡ್‌-19 ಉಂಟು ಮಾಡಿದ ಕೋಲಾಹಲವನ್ನು ನೋಡಿದಾಗ ಗ್ರೀಕ್‌ ಈ ವಿಚಾರದಲ್ಲಿ ಸಾಕಷ್ಟು ವೃತ್ತಿಪರವಾದ ಕ್ರಮವನ್ನು ಕೈಗೊಂಡಿದೆ ಎನ್ನುವುದು ಸ್ಪಷ್ಟವಾಯಿತು.

ಹಾಗೇ ನೋಡಿದರೆ ಗ್ರೀಕ್‌ನ ಆರೋಗ್ಯ ಸೇವಾ ವಲಯ ತೀರಾ ಹಿಂದೆ ಇದೆ. ದಶಕಗಳ ಆರ್ಥಿಕ ಹಿಂಜರಿತದಿಂದಾಗಿ ಮಿತವ್ಯಯವನ್ನು ಸಾಧಿಸಲು ಆರೋಗ್ಯ ಕ್ಷೇತ್ರದ ಅನುದಾನವನ್ನು ಮೂರು ಪಟ್ಟು ಕಡಿತಗೊಳಿಸಲಾಗಿತ್ತು. ಇಡೀ ದೇಶದಲ್ಲಿದ್ದದ್ದು 560 ಐಸಿಯು ಬೆಡ್‌ಗಳು. (ಈಗ 910 ಬೆಡ್‌ಗಳಿವೆ) ಆದರೆ ಬಳಕೆಯಾಗಿರುವುದು ಈ ಪೈಕಿ ಬರೀ ಶೇ. 10 ಮಾತ್ರ.

ಕೋವಿಡ್‌-19 ಹಾವಳಿ ಶುರುವಾಗುತ್ತಿರುವಂತೆಯೇ ಗ್ರೀಕ್‌ 4000 ಹೆಚ್ಚುವರಿ ವೈದ್ಯರನ್ನು ಮತ್ತು ನರ್ಸ್‌ಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಂಡಿತು. ಇನ್ನೂ ಒಂದು ಸಂಗತಿಯೆಂದರೆ ಗ್ರೀಕ್‌ನ ಜನಸಂಖ್ಯೆಯ ಶೇ. 25 ಮಂದಿ 60 ವರ್ಷ ಮೇಲ್ಪಟ್ಟವರು. ಹೀಗಾಗಿ ಈ ದೇಶ ಸೋಂಕಿಗೆ ಸುಲಭ ತುತ್ತಾಗುವ ಎಲ್ಲ ಅವಕಾಶಗಳಿದ್ದವು.

Advertisement

ಆದರೆ ಗ್ರೀಕ್‌ನ ಮುಂಚೂಣಿ ನೆಲೆಯ ರಕ್ಷಣಾ ವ್ಯವಸ್ಥೆಯೇ ನಿಜವಾದ ರಕ್ಷಣೆಯಾಗಿತ್ತು. ಅಂದರೆ ಲಾಕ್‌ಡೌನ್‌ ಜಾರಿ, ಸಾಮಾಜಿಕ ಅಂತರದ ಪಾಲನೆ ಇತ್ಯಾದಿ. ಈ ಮುಂಚೂಣಿ ನೆಲೆಯ ಕಾರ್ಯಗಳೇ ಆ ದೇಶವನ್ನು ಕೋವಿಡ್‌-19 ಅಟ್ಟಹಾಸದಿಂದ ರಕ್ಷಿಸಿದುವು.

ಸರಕಾರ ಬಹಳ ಬೇಗನೇ ಎಚ್ಚೆತ್ತು ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ಪರಿಣಾಮವಾಗಿ ಗ್ರೀಕ್‌ ಕೋವಿಡ್‌ ಹೊಡೆತದಿಂದ ಬಚಾವಾಯಿತು ಎನ್ನುತ್ತಾರೆ ರಾಜಕೀಯ ಅರ್ಥಶಾಸ್ತ್ರಜ್ಞ ಜಾರ್ಜ್‌ ಪ್ಯಾಗೊಲಟೊಸ್‌.

ಹತ್ತು ವರ್ಷಗಳಲ್ಲಿ ಗ್ರೀಕ್‌ನ ಜನರು ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ ಅನುಭವ ಹೊಂದಿದ್ದರು. ಹೀಗಾಗಿ ಅವರಿಗೆ ನಿರ್ಬಂಧಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಸುದೀರ್ಘ‌ ಕಾಲದಲ್ಲಿ ಬವಣೆಯನ್ನೇ ಉಂಡ ಸಮಾಜಕ್ಕೆ ಯಾವಾಗ ತ್ಯಾಗ ಮಾಡಬೇಕು ಮತ್ತು ಯಾವುದು ನಿವಾರಿಸಲಾಗದ ಅನಿವಾರ್ಯತೆ ಎನ್ನುವುದು ತಿಳಿದಿರುತ್ತದೆ. ಒಂದು ದಶಕದ ಆರ್ಥಿಕ ಹಿಂಜರಿತ ಒಂದು ರೀತಿಯಲ್ಲಿ ಗ್ರೀಕ್‌ನ ನೆರವಿಗೆ ಬಂತು ಎನ್ನುವುದನ್ನು ಪ್ರಧಾನಿಯ ಆರ್ಥಿಕ ಸಲಹೆಗಾರ ಅಲೆಕ್ಸ್‌ ಪಟೆಲಿಸ್‌ ಒಪ್ಪಿಕೊಳ್ಳುತ್ತಾರೆ.

ಆರ್ಥಿಕ ಸಂಕಷ್ಟದ ಕಾಲದಲ್ಲಿ ಗ್ರೀಕ್‌ 3 ಸಲ ಯುರೋಪ್‌ ದೇಶಗಳಿಂದ 277 ಲಕ್ಷಕೋಟಿ ಡಾಲರ್‌ ಸಾಲ ಪಡೆದಿತ್ತು. ದೇಶ ಸಂಪೂರ್ಣವಾಗಿ ದಿವಾಳಿಯಾಗಿತ್ತು. ಇಂಥ ದೇಶ ಕೋವಿಡ್‌-19 ಅನ್ನು ಅತ್ಯಂತ ಸಮರ್ಥವಾಗಿ ಎದುರಿಸಿದ್ದು ಆಶ್ಚರ್ಯವುಂಟು ಮಾಡಿದೆ. ಅದರಲ್ಲೂ ಪಕ್ಕದ ಇಟಲಿ, ನೆದರ್‌ಲ್ಯಾಂಡ್‌ನ‌ಂಥ ದೇಶಗಳಿಗೆ ಸಾಧ್ಯವಾಗದ್ದು ಗ್ರೀಕ್‌ಗೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯಲ್ಲಿ ಇಡೀ ಜಗತ್ತಿಗೆ ಪಾಠವಿದೆ. ಗ್ರೀಕ್‌ನ್ನು ಯುರೋಪಿನ ಗುರಾಣಿ ಎಂದು ಯುರೋಪ್‌ ದೇಶಗಳೇ ಬಣ್ಣಿಸುತ್ತಿವೆ.

10ಕ್ಕಿಂತ ಹೆಚ್ಚು ಮಂದಿ ಸೇರಿದರೆ ದಂಡ
ಗ್ರೀಕ್‌ನಲ್ಲಿ ಮೊದಲ ಕೋವಿಡ್‌ ಪ್ರಕರಣ ಬೆಳಕಿಗೆ ಬಂದದ್ದು ಫೆ.27ರಂದು. ಅನಂತರ ಮೊದಲು ಶಾಲೆ ಮತ್ತು ವಿವಿಗಳನ್ನು ಮುಚ್ಚಲಾಯಿತು. ಕೆಲ ದಿನಗಳ ಬಳಿಕ ಸಿನೆಮಾ ಮಂದಿರ, ನೈಟ್‌ಕ್ಲಬ್‌, ಜಿಮ್‌, ನ್ಯಾಯಾಲಯಗಳನ್ನು ಮುಚ್ಚುವ ಆದೇಶ ಹೊರಡಿಸಲಾಯಿತು. ಮುಂದಿನ ಹಂತಗಳಲ್ಲಿ ಮಾಲ್‌, ಕೆಫೆ, ಹೊಟೇಲ್‌, ಬಾರ್‌, ಬ್ಯೂಟಿಪಾರ್ಲರ್‌, ಮ್ಯೂಸಿಯಂ ಇತ್ಯಾದಿಗಳನ್ನು ಮುಚ್ಚಲಾಯಿತು. ಅನಂತರ ಚರ್ಚ್‌ಗಳನ್ನು ಮುಚ್ಚುವ ಮಹತ್ವದ ಆದೇಶ ಹೊರಬಿತ್ತು. ಅನಂತರ 10ರಿಂದ ಹೆಚ್ಚು ಜನರು ಒಟ್ಟುಗೂಡಿದರೆ 1000 ಯುರೊ ದಂಡ ವಿಧಿಸುವ ಕಾನೂನು ತರಲಾಯಿತು. ಜನರ ಓಡಾಟಕ್ಕೆ ನಿರ್ಬಂಧ ಹೇರಲಾಯಿತು. ಹೀಗೆ ಹಂತಹಂತವಾಗಿ ನಿರ್ಬಂಧಗಳನ್ನು ಬಿಗುಗೊಳಿಸುತ್ತಾ ಹೋದಂತೆ ವೈರಸ್‌ ಅಟ್ಟಹಾಸ ನಿಯಂತ್ರಣಕ್ಕೆ ಬಂತು.

Advertisement

Udayavani is now on Telegram. Click here to join our channel and stay updated with the latest news.

Next